ADVERTISEMENT

ಚಿಕ್ಕಮಗಳೂರು| ಮದ್ಯವ್ಯಸನಕ್ಕೆ ಕೊರೊನಾ ‘ಬ್ರೇಕ್‌’

ಲಾಕ್‌ಡೌನ್‌: ತಿಂಗಳಿಂದ ಮದ್ಯದಂಗಡಿಗಳ ಬಾಗಿಲು ಬಂದ್‌

ಬಿ.ಜೆ.ಧನ್ಯಪ್ರಸಾದ್
Published 22 ಏಪ್ರಿಲ್ 2020, 3:25 IST
Last Updated 22 ಏಪ್ರಿಲ್ 2020, 3:25 IST
ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ   

ಚಿಕ್ಕಮಗಳೂರು: ಲಾಕ್‌ಡೌನ್‌ನಿಂದಾಗಿ ಮದ್ಯ ವ್ಯಸನಕ್ಕೆ ‘ಬ್ರೇಕ್‌’ ಬಿದ್ದಿದೆ. ಬಹಳಷ್ಟು ಮಂದಿಗೆ ಮದ್ಯಸೇವನೆ ಗೀಳು ಅನಿವಾರ್ಯವಾಗಿ ದೂರವಾಗಿದೆ.

ಮದ್ಯದಂಗಡಿಗಳ ಬಾಗಿಲು ಬಂದ್‌ ಆಗಿವೆ. ಮದ್ಯ ಸಿಗುತ್ತಿಲ್ಲ. ಮದ್ಯ ಸೇವನೆಯನ್ನೇ ಗೀಳು ಮಾಡಿಕೊಂಡಿದ್ದವರೂ ಈ ಅನಿವಾರ್ಯ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ.

ನಿತ್ಯದ ದುಡಿಮೆಯಲ್ಲಿ ಒಂದಿಷ್ಟು ಭಾಗ ಮದ್ಯಕ್ಕೆ ವಿನಿಯೋಗಿಸವ ಚಾಳಿ ಹಲವರಿಗಿತ್ತು. ಕೆಲವರ ಬಳಿ ದುಡ್ಡು ಇದ್ದರೂ ಮದ್ಯ ಸಿಗುತ್ತಿಲ್ಲ. ದುಡಿಮೆ ಇಲ್ಲದಿರುವುದರಿಂದ ಸಂಸಾರದ ನಿಭಾವಣೆ ಹಲವರಿಗೆ ಸವಾಲಾಗಿದೆ. ಲಾಕ್‌ಡೌನ್‌ ಸಂಕಷ್ಟಕ್ಕೆ ಒಗ್ಗಿಕೊಂಡು ದುಶ್ಚಟಗಳ ಸಹವಾಸ ಬಿಟ್ಟಿದ್ದಾರೆ.

ADVERTISEMENT

‘ಕಾಫಿತೋಟದಲ್ಲಿ ಕೆಲಸ ಮಾಡುತ್ತೇವೆ. ಹಗಲೆಲ್ಲ ಮೈಮುರಿದು ದುಡಿಯುತ್ತೇವೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಮದ್ಯ ಸೇವಿಸುವ ಅಭ್ಯಾಸ ಗಂಡ–ಹೆಂಡತಿ ಇಬ್ಬರಿಗೂ ಇದೆ. ಲಾಕ್‌ಡೌನ್‌ ಆದಾಗಿನಿಂದ ಮದ್ಯ ಸಿಗುತ್ತಿಲ್ಲ. ಮೊದಲು ಒಂದು ವಾರ ಮದ್ಯ ಸೇವಿ
ಸದಿದ್ದರಿಂದ ನಿದ್ದೆ ಬರಲಿಲ್ಲ. ಈಗ ಮದ್ಯ ಸೇವಿಸದೆ ಇರುವುದಕ್ಕೆ ಒಗ್ಗಿ ಕೊಂಡಿದ್ದೇವೆ. ಮುಂದೆಯೂ ಸೇವಿಸ ಬಾರದು ಎಂದು ಮನಸ್ಸು ಮಾಡಿ ದ್ದೇವೆ. ಮದ್ಯ ಕುಡಿಯಲು ಯಾಕೆ ದುಡ್ಡು ಖರ್ಚು ಮಾಡಬೇಕು ಎಂದು ಈಗ ಅನಿಸಿದೆ’ ಎಂದು ಗಿರಿಶ್ರೇಣಿ ಭಾಗದ ಕಾಫಿ ತೋಟದ ಕಾರ್ಮಿಕ ಮಹಿಳೆ ರತ್ನಾ ಬಾಯಿ ಹೇಳುತ್ತಾರೆ.

ಬ್ಲಾಕ್‌ನಲ್ಲಿ ಮದ್ಯ ಮಾರಾಟ ಮಾಡುವ ದಂಧೆ ಕದ್ದುಮುಚ್ಚಿ ಕೆಲವೆಡೆ ನಡೆಯುತ್ತಿದೆ. ಅದನ್ನು ಸಲೀಸಾಗಿ ಪಡೆಯಲು ಸಾಧ್ಯ ವಿಲ್ಲ. ದುಬಾರಿ ಬೆಲೆ ತೆರಲೂ ಆಗದು. ಮದ್ಯದ ಅಮಲಿನ ಅಲೆಗೆ ಸಿಲುಕಿದ್ದ ಹಲವಾರು ಕುಟುಂಬ ಗಳಲ್ಲಿ ಕೆಲ ದಿನಗಳಿಂದ ಈಗ ಸಂತಸ ನೆಲೆಸಿದೆ.

‘ಸಂಸಾರ ಸಾಗರದ ತಾಪತ್ರಯಗಳನ್ನು ಮರೆಯಲು ಕುಡಿಯುವ ಅಭ್ಯಾಸ ರೂಢಿಯಾಗಿತ್ತು. ಒಂದು ತಿಂಗಳಿನಿಂದ ಮದ್ಯವರ್ಜನ ಕೇಂದ್ರದಲ್ಲಿ ಇದ್ದೇನೆ. ಮದ್ಯ ಸಿಗದಿದ್ದರೆ ಕುಡಿಯುವ ಪ್ರಶ್ನೆಯೇ ಇರಲ್ಲ. ಇನ್ನೆಂದಿಗೂ ಮದ್ಯ ಸೇವನೆ ಮಾಡಬಾರದು ಎಂದು ಅಂದುಕೊಂಡಿದ್ದೇನೆ’ ಎಂದು ನಗರದ ಶಕ್ತಿ ಮದ್ಯಪಾನ ಸೇವನಿಗಳ ಸಮಗ್ರ ಪುನರ್ವಸತಿ ಕೇಂದ್ರದಲ್ಲಿರುವ ಕಟ್ಟಡ ಕಾರ್ಮಿಕ ತಿಪ್ಪೇಸ್ವಾಮಿ ಹೇಳುತ್ತಾರೆ.

‘ಮದ್ಯ ವ್ಯಸನಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಿರಬಹುದು. ಅಂಗಡಿಗಳು ತೆರೆದರೆ ಅವರು ಮದ್ಯ ಸೇವಿಸಲು ಹೋಗಲ್ಲ ಎಂದು ಖಾತ್ರಿ ಇಲ್ಲ’
ಎಂದು ಧರ್ಮಸ್ಥಳ ಮದ್ಯವರ್ಜ್ಯನ ಶಿಬಿರದ ಸಂಯೋಜಕಿಯೊಬ್ಬರು ತಿಳಿಸಿದರು.

25 ದಿನಗಳಿಂದ ಮದ್ಯವ್ಯಸನಕ್ಕೆ ಸಂಬಂಧಿಸಿದಂತೆ ಫೋನ್‌ಗಳೇ ಬರುತ್ತಿಲ್ಲ. ಲಾಕ್‌ಡೌನ್‌ ಹಲವರಿಗೆ ಮದ್ಯವ್ಯಸನ ತೊರೆಸಿದೆ.
- ನಂದಕಿಶೋರ್‌, ಆಪ್ತ ಸಮಾಲೋಚಕ ಮದ್ಯವ್ಯಸನಿಗಳ ಪುನರ್ವಸತಿ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.