ADVERTISEMENT

ಶಾಸಕರಿಂದಲೇ ವಿಜಯ ಸಂಕಲ್ಪ ರದ್ದು: ಜೈಪಾಲ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 7:59 IST
Last Updated 19 ಮಾರ್ಚ್ 2023, 7:59 IST

ಮೂಡಿಗೆರೆ: ‘ಮೂಡಿಗೆರೆಯಲ್ಲಿ ನಡೆಯಬೇಕಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ರದ್ದಾಗಲು ಶಾಸಕ ಎಂ.ಪಿ ಕುಮಾರಸ್ವಾಮಿ ಅವರೇ ನೇರವಾಗಿ ಕಾರಣರಾಗಿದ್ದಾರೆ’ ಎಂದು ಬಿಜೆಪಿ ಪರಿಶಿಷ್ಟ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್ ಬಿದರಹಳ್ಳಿ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯ ಸಂಕಲ್ಪ ಯಾತ್ರೆಯನ್ನು ಹಾಳು ಮಾಡುವ ದೃಷ್ಟಿ ಯಾರಿಗೂ ಇರಲಿಲ್ಲ. ಆಂದು ಬಿ.ಎಸ್. ಯಡಿಯೂರಪ್ಪ ಅವರಿಗೆ ಇಲ್ಲಿನ ಶಾಸಕರ ದುರಾಡಳಿತದ ಬಗ್ಗೆ ಮನವಿ ಸಲ್ಲಿಸಲು ಹೊರಟಾಗ ಶಾಸಕರ ಕಡೆಯವರು ಗದ್ದಲ ಸೃಷ್ಟಿ ಮಾಡಿದ್ದರಿಂದ ಯಾತ್ರೆ ರದ್ದಾಗಲು ಕಾರಣವಾಯಿತು. ಮುಂಬರುವ ಚುನಾವಣೆಯಲ್ಲಿ ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಶಾಸಕರಿಗೆ ಮೊದಲೇ ತಿಳಿದಿದೆ, ಈ ಕಾರಣಕ್ಕೆ ಬೇರೆ ಪಕ್ಷವೇ ಗತಿ ಎಂದು ಶಾಸಕರು 5 ವರ್ಷದಿಂದ ಬಿಜೆಪಿ ಕಾರ್ಯಕರ್ತರ ಸಮಸ್ಯೆ ಕೇಳಲು ತಯಾರಿರಲಿಲ್ಲ. ಬದಲಾಗಿ ವಿರೋಧ ಪಕ್ಷದವರ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು’ ಎಂದು ದೂರಿದರು.

‘ಶಾಸಕರಿಗೆ ಬಿಜೆಪಿ ಸಿದ್ಧಾಂತದ ಬಗ್ಗೆಯೇ ಗೊತ್ತಿಲ್ಲ. ಹಿಂದೂ ಪರ ಸಂಘಟನೆಯ ವಿರೋಧಿಯಾಗಿಯೇ ಕೆಲಸ ಮಾಡಿದ್ದಾರೆ. ಇದುವರೆಗೂ ದತ್ತ ಜಯಂತಿ ಸಂದರ್ಭದಲ್ಲಿ ದಲಿತ ಕಾರ್ಯಕರ್ತರಿಗೆ ಮಾಲೆ ಹಾಕಿಸೋದಿರಲಿ, ಸ್ವತಃ ಅವರೇ ಮಾಲೆ ಹಾಕಿಕೊಂಡಿಲ್ಲ. ಈಗ ಜೆಡಿಎಸ್, ಕಾಂಗ್ರೆಸ್‍ನವರು ಎಂ.ಪಿ. ಕುಮಾರಸ್ವಾಮಿ ಬಾರದಂತೆ ಕದ ಹಾಕಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ಯುವ ಮೋರ್ಚಾದ ಗೋಣಿಬೀಡು ಹೋಬಳಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಚಿನ್ನಿಗ ಮಾತನಾಡಿ, ‘ವಿಜಯ ಸಂಕಲ್ಪ ಯಾತ್ರೆಯ ದಿನ ಗದ್ದಲ ಸೃಷ್ಟಿಯಾಗಲು ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅವರೇ ಕಾರಣವೆಂದು ಶಾಸಕರು ಹೇಳಿಕೊಳ್ಳುತ್ತಾ ಪಕ್ಷದಲ್ಲಿ ಮತ್ತಷ್ಟು ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಎಂಎಲ್‍ಸಿ ಚುನಾವಣೆಯಲ್ಲಿ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಆದರೆ, ಶಾಸಕರ ವಿರುದ್ಧ ಪ್ರಾಣೇಶ್ ಅವರು ಎಲ್ಲೂ ಮಾತನಾಡಿಲ್ಲ. ಅಲ್ಲದೇ ಪಕ್ಷ ವಿರೋಧಿ ಚಟುವಟಿಕೆ ಮಾಡುವಂತಹ ನೀಚ ರಾಜಕಾರಣವನ್ನು ಎಲ್ಲಿಯೂ ಮಾಡಿಲ್ಲ. ಅವರು ಮೊದಲಿನಿಂದಲೂ ಬಿಜೆಪಿಯಲ್ಲಿ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆಯೇ ಹೊರತು, ಶಾಸಕರಂತೆ ಬೇರೆ ಪಕ್ಷದ ಕದ ತಟ್ಟಲು ಹೋಗಿಲ್ಲ’ ಎಂದು ಕಿಡಿ ಕಾರಿದರು.

ಬಿಜೆಪಿ ಮುಖಂಡ ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.