ADVERTISEMENT

ಶರಣ ಚಳವಳಿ ಪ್ರತಿಪಾದನೆ ಇಂದಿನ ತುರ್ತು

ಕಡೂರು ತಾಲ್ಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಗುರುಸಿದ್ದರಾಜಯೋಗೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:16 IST
Last Updated 20 ಮಾರ್ಚ್ 2023, 6:16 IST
ಕಡೂರು ತಾಲ್ಲೂಕಿನ ಯಗಟಿಪುರದಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೆ.ಬಿದರೆ ಮಠದ ಪ್ರಭುಕುಮಾರ ಸ್ವಾಮೀಜಿ ಇದ್ದರು.
ಕಡೂರು ತಾಲ್ಲೂಕಿನ ಯಗಟಿಪುರದಲ್ಲಿ ಭಾನುವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕೆ.ಬಿದರೆ ಮಠದ ಪ್ರಭುಕುಮಾರ ಸ್ವಾಮೀಜಿ ಇದ್ದರು.   

ಕಡೂರು: ‘ಶರಣ ಚಳವಳಿ ಜನಸಾಮಾನ್ಯರ ಚಳವಳಿಯಾಗಿ ಇಡೀ ವ್ಯವಸ್ಥೆಯನ್ನು ಬದಲಿಸಿ, ಸರ್ವ ಸಮತ್ವವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಬೇಕು ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೇಂದ್ರ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಯಗಟಿಪುರ ಗ್ರಾಮದಲ್ಲಿ ಭಾನುವಾರ ನಡೆದ ಕಡೂರು ತಾಲ್ಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಸವಾದಿ ಪ್ರಮಥರ ಶರಣ ಸಂದೇಶಗಳನ್ನು ಈ ಶತಮಾನದ ಜಗತ್ತು ಅರ್ಥೈಸಿಕೊಳ್ಳುವಂತೆ ಮಾಡಿ ಹೊಸ ಮಾನವೀಯ ವ್ಯವಸ್ಥೆ ರೂಪಿಸುವಲ್ಲಿ 1981ರಲ್ಲಿ ಸುತ್ತೂರು ಮಠಾಧೀಶರು ಹುಟ್ಟುಹಾಕಿದ ಶರಣ ಸಾಹಿತ್ಯ ಪರಿಷತ್‌ ಸದಾ ಕ್ರಿಯಾಶೀಲವಾಗಿ ಮುಂದುವರಿದಿದೆ. ಜಗತ್ತಿನ ಮೊದಲ ಅಹಿಂಸಾ ಚಳವಳಿ ಶರಣ ಚಳವಳಿ. ಅದರ ಪ್ರಸ್ತುತತೆಯ ಸಮರ್ಥ ಪ್ರತಿಪಾದನೆ ಇಂದಿನ ಅನಿವಾರ್ಯ ಅಗತ್ಯವಾಗಿದೆ’ ಎಂದರು.

ADVERTISEMENT

‘12ನೇ ಶತಮಾನದಲ್ಲಿ ಕರ್ನಾಟಕದ ರಾಜಕೀಯ ಗೊಂದಲಮಯವಾಗಿತ್ತು. ಸಮಾಜ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಪಂಚಮ ಎಂದು ಶ್ರೇಣೀಕೃತವಾಗಿತ್ತು. ಜಾತೀಯತೆ ಹುಟ್ಟಿನಿಂದಲೇ ಸಿದ್ಧವಾಗುತ್ತಿತ್ತು. ಗುಡಿ ಸಂಸ್ಕೃತಿ ಜನಸಾಮಾನ್ಯರ ಮೇಲೆ ನಿಯಂತ್ರಣ ಹೊಂದಿತ್ತು. ಜಾತಿ ತಾರತಮ್ಯ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಶೋಷಣೆ ಹೆಚ್ಚಾಗಿತ್ತು. ಅಂತಹ ಸಮಯದಲ್ಲಿ ಜನಸಾಮಾನ್ಯರಿಗೆ ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚಿದ್ದ ಬಾಗಿಲನ್ನು ತೆರೆದು ಅಸಮಾನತೆಯನ್ನು ನವಿರಾಗಿ ನಿರಾಕರಿಸಿದವರು ವಚನಕಾರ ಶರಣರು’ ಎಂದರು.

‘ಬಸವಣ್ಣನವರ ನೇತೃತ್ವದಲ್ಲಿ ನಡೆದ ಈ ಚಳವಳಿಯ ಮುಖ್ಯ ಲಕ್ಷಣ ಕಾಯಕ ತತ್ವ. ಯಾವುದೇ ಭೇದವಿಲ್ಲದೆ ಸರ್ವಸಮತ್ವವನ್ನೆ ಪ್ರತಿಪಾದಿಸಿ ಕ್ರಾಂತಿಯನ್ನು ಮಾಡಿದ್ದು ಇದೇ ಶರಣ ಚಳವಳಿ ವಿಶ್ವಮಟ್ಟದಲ್ಲಿ ಗಮನ ಸೆಳೆಯಿತು. ನೂರಾರು ವಚನಕಾರರ ವಚನಗಳು ಜನರಿಗೆ ಕಾಯಕದ ಮಹತ್ವ ಮತ್ತು ಸಮಾನತೆಯ ಅಗತ್ಯವನ್ನು ಸಾರಿತು. ಈಗ ಕೋಮುವಾದಿ ಮತ್ತು ಭಯೋತ್ಪಾದಕ ವಾತಾವರಣದ ನಡುವೆಯೂ ಬಸವಾದಿ ಶರಣರ ವಚನಗಳು ಸದ್ದು ಮಾಡುತ್ತಿರುವುದು ಆಶಾದಾಯಕ ವಿಚಾರವಾಗಿದೆ. ಶರಣರು ಕಟ್ಟಿ ತೋರಿಸಿದ ಪರ್ಯಾಯ ಸಮಾಜದ ಮಹತ್ವವನ್ನು ಶರಣ ಸಾಹಿತ್ತ ಪರಿಷತ್ತು ಜಗತ್ತಿಗೆ ಎತ್ತಿ ತೋರಿಸಲಿ’ ಎಂದು ಹೇಳಿದರು.

ಕವಿ ಯಗಟಿ ಸತೀಶ್ ರಚಿಸಿರುವ ‘ಪುರದಮಲ್ಲಯ್ಯ’ ಅಂಕಿತ ವಚನಗಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರವೀಶ್ ಕ್ಯಾತನಬೀಡು, ‘ಸತ್ಯವನ್ನು ಬಿಟ್ಟು ಇತರರನ್ನು ಮೆಚ್ಚಿಸಲಿಕ್ಕಾಗಿಯೇ ನಾವು ಮಾತನಾಡುತ್ತೇವೆ. ಆದರೆ, ಶರಣರು ಇದಕ್ಕೆ ವಿರುದ್ಧವಾಗಿ ನಡೆದವರು. ಪ್ರತಿಭಟನಾ ಮನೋಭಾವದ ಜೊತೆಗೆ ಮಾನವೀಯ ನೆಲೆಗಟ್ಟನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮ್ಮೇಳನಗಳು ಕೇವಲ ನೆಪ ಮಾತ್ರಕ್ಕೆ ನಡೆಯದೆ ನಿರ್ದಿಷ್ಟ ಸಂದೇಶವನ್ನು ಸಮಾಜಕ್ಕೆ ಸಾರುವಂತಾಗಬೇಕು’ ಎಂದರು.

ಕೆ.ಬಿದರೆ ದೊಡ್ಡ ಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಯಳನಡು ಮಠದ ಜ್ಞಾನಪ್ರಭು ಸಿದ್ದರಾಮದೇಶೀಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು. ಶರಣರ ಸಾಹಿತ್ಶ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾರ್ಗದ ವಿಶ್ವನಾಥ್, ಟಿ.ಆರ್.ಲಕ್ಕಪ್ಪ, ವಿಶ್ರಾಂತ ಜಿಲ್ಲಾಧಿಕಾರಿ ಎಸ್.ಪಿ.ಷಡಾಕ್ಷರಿಸ್ವಾಮಿ, ಬಿ.ತಿಪ್ಪೇರುದ್ರಪ್ಪ, ಎಂ.ಆರ್.ಪ್ರಕಾಶ್, ಕೆ.ಜಿ.ಶ್ರೀನಿವಾಸ ಮೂರ್ತಿ, ಎಚ್.ವಿ.ಗಿರೀಶ್, ಪಿ.ಎಂ.ಶಂಕರಪ್ಪ, ಯಗಟಿಪುರ ಪ್ರಸನ್ನ, ಎಂ.ರಂಗಪ್ಪ ಇದ್ದರು.

‘ವಚನಗಳ ಸಾರ ಜೀವನಕ್ಕೆ ದಾರಿದೀಪ’

ಉಪನ್ಯಾಸಕ ಡಾ.ಬಿ.ವಿ.ಮಂಜುನಾಥ್ ‘ಶರಣ ಸಂಸ್ಕೃತಿ’ ಬಗ್ಗೆ ಉಪನ್ಯಾಸ ನೀಡಿ, ‘ಸಾಮಾಜಿಕ ಮೌಲ್ಯಗಳನ್ನೇ ಜೀವನದ ಮೌಲ್ಯಗಳನ್ನಾಗಿಸಿಕೊಂಡು ಸಮಾನತೆಯ ಪ್ರತಿಪಾದನೆಯಲ್ಲಿ ಶರಣ ಸಂಸ್ಕೃತಿಯನ್ನು ಉದ್ಧರಿಸಿದವರು 12ನೇ ಶತಮಾನದ ಶರಣರು. ಅವರ ವಚನಗಳ ಸಾರ ನಮ್ಮೆಲ್ಲರ ಜೀವನಕ್ಕೆ ದಾರಿದೀಪ’ ಎಂದರು. ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಮುದ್ದೇನಹಳ್ಳಿ ಆನಂದ್ ‘ಶರಣ ದೃಷ್ಟಿಯ ಮನೆ- ಮನ’ ವಿಚಾರವಾಗಿ ಮಾತನಾಡಿದರು. ವಚನಕಾರ್ತಿಯರ ಸಾಮಾಜಿಕ ಕಳಕಳಿ ಕುರಿತು ಗಂಗಾಂಬಿಕಾ ಬಸವರಾಜು ಮಾತನಾಡಿ, ‘ಅಂದು ಬಸವಣ್ಣನವರ ದೃಷ್ಟಿಕೋನವನ್ನು ಒಪ್ಪಿ ಬಂದ ಮಹಿಳೆಯರು ಯಾವುದೇ ಶಿಕ್ಷಣ ಪಡೆಯದೆ ತಮ್ಮ ಜೀವನಾನುಭವವನ್ನೆ ವಚನ ರೂಪಕ್ಕಿಳಿಸಿ ಇಂದಿಗೂ ಜೀವಂತವಾಗಿದ್ದಾರೆ’ ಎಂದರು. ಕವಿತಾ ಮಾರ್ಗದ ಎಂ.ವಿಶ್ವನಾಥ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯಾ ಮಲ್ಲೇಶ್, ಎ.ಎಸ್.ಅಶೋಕ ಕುಮಾರ್, ವಿರೂಪಾಕ್ಷಪ್ಪ, ಶಿವಪುರ ಗಂಗಾಧರ್, ಹೊಸೂರು ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.