ADVERTISEMENT

14ನೇ ಶತಮಾನದ ವೀರಗಲ್ಲು ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:54 IST
Last Updated 21 ಮಾರ್ಚ್ 2023, 4:54 IST
ಬಾಳೆಹೊನ್ನೂರು ಸಮೀಪದ ಉತ್ತಮೇಶ್ವರದ ಕೋಣೆಕೊಪ್ಪದಲ್ಲಿ ಪತ್ತೆಯಾದ 14ನೇ ಶತಮಾನದ ವೀರಗಲ್ಲು
ಬಾಳೆಹೊನ್ನೂರು ಸಮೀಪದ ಉತ್ತಮೇಶ್ವರದ ಕೋಣೆಕೊಪ್ಪದಲ್ಲಿ ಪತ್ತೆಯಾದ 14ನೇ ಶತಮಾನದ ವೀರಗಲ್ಲು   

ಜಯಪುರ (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಭುವನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತಮೇಶ್ವರದ ಕೋಣೆಕೊಪ್ಪ ಎಂಬಲ್ಲಿ 14ನೇ ಶತಮಾನಕ್ಕೆ ಸೇರಿದ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಪತ್ತೆ ಮಾಡಿದ್ದಾರೆ.

ಸುಮಾರು 5 ಅಡಿ ಎತ್ತರ ಮತ್ತು 2 ಅಡಿ ಅಗಲವಿರುವ ಈ ವೀರಗಲ್ಲು ಮೂರು ಪಟ್ಟಿಕೆಯನ್ನು ಹೊಂದಿದ್ದು, ಕೆಳಗಿನ ಪಟ್ಟಿಕೆಯಲ್ಲಿ ಎರಡು ಸಾಲಿನ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಶಾಸನವನ್ನು ಕಾಣಬಹುದು. ಈ ವೀರಗಲ್ಲಿನ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಉಳಿದಿರುವ ಅಕ್ಷರದ ಆಧಾರದ ಮೇಲೆ ‘ಭಾವ ಸಂವತ್ಸರದಲ್ಲಿ ತಿಂಮಣ ನಾಯಕನ’ ಸ್ಮರಣಾರ್ಥವಾಗಿ ವೀರಗಲ್ಲನ್ನು ಹಾಕಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಲಿಪಿಯು 14ನೇ ಶತಮಾನದ ಲಿಪಿಯನ್ನು ಹೋಲುತ್ತದೆ ಎಂದು ಅವರು ತಿಳಿಸಿದ್ದಾರೆ.

ವೀರಗಲ್ಲಿನ ಕೆಳಗಿನ ಪಟ್ಟಿಕೆಯಲ್ಲಿ ಕೈಯಲ್ಲಿ ಖಡ್ಗವನ್ನು (ಕತ್ತಿ) ಹಿಡಿದುಕೊಂಡು ಅಶ್ವದ ಮೇಲೆ ಕುಳಿತು ಯುದ್ಧ ಮಾಡುತ್ತಿರುವ ವೀರ ಹಾಗೂ ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಈತನ ವಿರುದ್ಧ ಹೋರಾಡುತ್ತಿರುವ ಸೈನಿಕರ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ಎರಡನೇ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದುಕೊಂಡು ಹೋಗುವಂತೆ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಗಜಗಳ ಶಿಲ್ಪಗಳನ್ನು ಕೆತ್ತಲಾಗಿದೆ.

ADVERTISEMENT

ಅರುಣಾಚಲ ಕೋಣೆಕೊಪ್ಪ, ಪವನ್ ಆಚಾರ್ಯ ಸಹಕಾರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.