ADVERTISEMENT

ಜಿಎಸ್‌ಟಿ ನೋಂದಣಿ ಸಂಖ್ಯೆಗೆ ₹ 2 ಸಾವಿರ: ಸಿಬಿಐ ಬಲೆಗೆ ಬಿದ್ದ ಇನ್‌ಸ್ಪೆಕ್ಟರ್‌

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 15:29 IST
Last Updated 20 ಸೆಪ್ಟೆಂಬರ್ 2021, 15:29 IST

ಚಿತ್ರದುರ್ಗ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿ ಸಂಖ್ಯೆ ನೀಡಲು ವ್ಯಕ್ತಿಯೊಬ್ಬರಿಂದ ₹ 2 ಸಾವಿರ ಲಂಚ ಪಡೆಯುತ್ತಿದ್ದ ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತರ ಕಚೇರಿಯ ಇನ್‌ಸ್ಪೆಕ್ಟರ್‌ ರಂಜಿತ್‌ ಕುಮಾರ್‌ ಸಿಬಿಐ ಬಲೆಗೆ ಬಿದ್ದಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಸಜ್ಜನಕೆರೆ ಗ್ರಾಮದ ಲೋಕೇಶ್‌ ಎಂಬುವರು ಅಂಗಡಿಯೊಂದನ್ನು ತೆರೆಯುವ ಆಲೋಚನೆಯಲ್ಲಿದ್ದರು. ಜಿಎಸ್‌ಟಿ ನೋಂದಣಿ ಸಂಖ್ಯೆ ಪಡೆಯಲು ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತರ ಕಚೇರಿಯ ಸಂಪರ್ಕಿಸಿದ್ದರು. ಇದಕ್ಕೆ ರಂಜಿತ್‌ ಕುಮಾರ್‌ ₹ 3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಲೋಕೇಶ್‌ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಂಪರ್ಕಿಸಿದ್ದರು. ತೆರಿಗೆ ಇಲಾಖೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ಎಸಿಬಿ ಅಧಿಕಾರಿಗಳು ಸಿಬಿಐಗೆ ಮಾಹಿತಿ ನೀಡಿದ್ದರು. ಬೆಂಗಳೂರಿನಿಂದ ಬಂದಿದ್ದ ಐವರು ಸಿಬಿಐ ಅಧಿಕಾರಿಗಳ ತಂಡ ಲಂಚ ಸ್ವೀಕರಿಸುವಾಗ ದಾಳಿ ನಡೆಸಿ ರಂಜಿತ್‌ ಕುಮಾರ್ ವಶಕ್ಕೆ ಪಡೆದಿದೆ. 2018ರಲ್ಲಿ ರಂಜಿತ್‌ ಸೇವೆಗೆ ಸೇರಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.