ADVERTISEMENT

ಭದ್ರಾ ಮೇಲ್ದಂಡೆ‌ಯಿಂದ ಸಮಗ್ರ ಅಭಿವೃದ್ಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:39 IST
Last Updated 20 ಮಾರ್ಚ್ 2023, 6:39 IST
ಹೊಸದುರ್ಗದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು
ಹೊಸದುರ್ಗದಲ್ಲಿ ಭಾನುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಹೊಸದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಮ್ಮ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ. ಈ ಯೋಜನೆಯಿಂದ ತಾಲ್ಲೂಕಿನ ಪ್ರತಿಯೊಂದು ಕೆರೆಗಳಿಗೆ ನೀರು ಕೊಡಲಾಗುವುದು. ತಾಲ್ಲೂಕು ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ವತಿಯಿಂದ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ವ್ಯಾಕ್ಸಿನ್ ನೀಡುವ ಮೂಲಕ ಸುರಕ್ಷಿತವಾಗಿರಿಸಿದ್ದಾರೆ. ಮೋದಿಜಿಯವರ ಆಶಯದಂತೆ ನವ ಕರ್ನಾಟಕದಿಂದ ನವ ಭಾರತವನ್ನು ನಿರ್ಮಾಣ ಮಾಡಲಾಗುವುದು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನಮ್ಮ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದೆ. ನಾನು ಮಾಡಿದ ರೈತ ವಿದ್ಯಾನಿಧಿ ಯೋಜನೆ 60 ಸಾವಿರ ರೈತರ ಮಕ್ಕಳಿಗೆ ತಲುಪಿದ್ದು, ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಲ್ಲಿ 5 ಲಕ್ಷ ಉದ್ಯೋಗ ನೀಡುವ ಚಿಂತನೆಯಿದೆ’ ಎಂದರು.

ADVERTISEMENT

‘ಮಧ್ಯ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಕಂಕಣಬದ್ಧವಾಗಿದೆ. ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಗುವುದು’ ಎಂದು ಹೇಳಿದರು.‌

‘ಹೊಸದುರ್ಗದ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರ ಪರಿಶ್ರಮದಿಂದಾಗಿ ಭದ್ರಾ ಮೇಲ್ದಂಡೆ ಯೋಜನೆ ಸೌಲಭ್ಯ ಹೊಸದುರ್ಗದ ಜನರಿಗೆ ದೊರೆತಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದಾರೆ. ಅಪಾರ ಅನುದಾನ ತಂದು, ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ಬಿಜೆಪಿ ಗೆಲ್ಲಿಸಿ, ಇನ್ನಷ್ಟು ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಾಸಕ ಗೂಳಿಹಟ್ಟಿ ಶೇಖರ್, ವಿಧಾನಪರಿಷತ್ ಸದಸ್ಯ ಕೆ.ಏಸ್.ನವೀನ್, ಜಿಲ್ಲಾಧ್ಯಕ್ಷ ಮುರುಳಿ, ಮಂಡಲ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮತ್ತು ಮುಖಂಡರಾದ ಲಿಂಗಮೂರ್ತಿ, ಹೆಬ್ಬಳ್ಳಿ ಓಂಕಾರಪ್ಪ, ಕೋಡಿಹಳ್ಳಿ ತಮ್ಮಣ್ಣ, ಕೆ.ಎಸ್. ಕಲ್ಮಠ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಖ್ಯಮಂತ್ರಿಗೆ ತುರ್ತು ಕೆಲಸವಿದ್ದ ಕಾರಣ ಯಾತ್ರೆಯ ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಟಿಕೆಟ್ ಆಕಾಂಕ್ಷಿಗಳ ಪರ ಮುಳುಗಿದ ಘೋಷಣೆ: ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗುತ್ತಿದ್ದಂತೆಯೇ, ಶಾಸಕ ಗೂಳಿಹಟ್ಟಿ ಶೇಖರ್ ಬೆಂಬಲಿಗರು ಹಾಗೂ ಇನ್ನಿತರ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಘೋಷಣೆಗಳನ್ನು ಕೂಗಿದರು. ಹೆಚ್ಚಿದ ಘೋಷಣೆಗಳಿಂದ ಸಿಎಂ ಬೊಮ್ಮಾಯಿ ಮಾತುಗಳಿಗೆ ಅಡಚಣೆ ಉಂಟಾಗಿ 8 ನಿಮಿಷಗಳಲ್ಲಿಯೇ ಮಾತುಗಳನ್ನು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.