ADVERTISEMENT

PV Web Exclusive | ಜೋಗಿಮಟ್ಟಿ ಎಂಬ ಬಯಲುಸೀಮೆ ‘ಊಟಿ’

ಜಿ.ಬಿ.ನಾಗರಾಜ್
Published 4 ಸೆಪ್ಟೆಂಬರ್ 2020, 4:54 IST
Last Updated 4 ಸೆಪ್ಟೆಂಬರ್ 2020, 4:54 IST
ಜೋಗಿಮಟ್ಟಿ
ಜೋಗಿಮಟ್ಟಿ   
""
""
""

ಆಗಾಗ ಮಂಜು ಹೊದ್ದು ಮಲಗುವ ಬೆಟ್ಟದ ಸಾಲು. ಕಣ್ಮನ ಮುದಗೊಳಿಸುವ ಹಸಿರು. ಮಳೆ ಸುರಿದಾಗ ಜಲಪಾತದ ರೂಪ ಪಡೆಯುವ ಜರಿಗಳು. ನವಿಲಿನ ಕೂಗು, ಪಕ್ಷಿಗಳ ಕಲರವ, ಜೋರಾಗಿ ಬೀಸುವ ಗಾಳಿಯ ಸದ್ದು... ಅಬ್ಬಾ ನಿಜಕ್ಕೂ ಊಟಿ ನೆನಪಿಸುವ ಪರಿಸರ.

ಚಿತ್ರದುರ್ಗವೆಂದರೆ ಕಲ್ಲುಬಂಡೆಗಳ ಊರು, ಬರದ ನಾಡು ಎಂಬ ಅಭಿಪ್ರಾಯವನ್ನು ಬದಲಿಸುವ ಬೆಟ್ಟದ ಸಾಲಿನ ಸೌಂದರ್ಯವಿದು. ಬಯಲುಸೀಮೆಯ ಊಟಿ ಎಂದೇ ಖ್ಯಾತಿ ಪಡೆದಿರುವ ಜೋಗಿಮಟ್ಟಿ ಅರಣ್ಯ ಪ್ರದೇಶ ಮಲೆನಾಡ ಸೊಬಗು ನೆನಪಿಸುತ್ತದೆ. ಐತಿಹಾಸಿಕ ಕಲ್ಲಿನಕೋಟೆಯ ಸಮೀಪವೇ ಇರುವ ಜೋಗಿಮಟ್ಟಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಚಿತ್ರದುರ್ಗ ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಜೋಗಿಮಟ್ಟಿ ಪ್ರವಾಸಿ ಚಟುವಟಿಕೆಗೆ ತೆರೆದುಕೊಂಡಿದ್ದು ತೀರಾ ಇತ್ತೀಚೆಗೆ. ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕಿನ 10,049 ಹೆಕ್ಟೇರ್‌ ಅರಣ್ಯದಲ್ಲಿ ಹರಡಿಕೊಂಡಿರುವ ಜೋಗಿಮಟ್ಟಿ ಚಿತ್ರದುರ್ಗದ ಅತಿ ಎತ್ತರದ ಸ್ಥಳ. ಸಮುದ್ರಮಟ್ಟದಿಂದ 3,803 ಅಡಿ ಎತ್ತರದಲ್ಲಿರುವ ಗಿರಿಧಾಮ, ಏಷ್ಯಾದಲ್ಲೇ ಅತಿಹೆಚ್ಚು ಗಾಳಿ ಬೀಸುವ ಎರಡನೇ ತಾಣ ಕೂಡ ಹೌದು. ಗಿರಿಶಿಖರ, ಕಣಿವೆಗಳ ದುರ್ಗಮ ಪ್ರದೇಶವಾದ ಜೋಗಿಮಟ್ಟಿ ಚಾರಣಕ್ಕೆ ಸೂಕ್ತವಾದ ಪ್ರದೇಶ. ಈ ಅರಣ್ಯ ಪ್ರದೇಶವನ್ನು ಸರ್ಕಾರ ‘ವನ್ಯಧಾಮ’ವೆಂದು ಘೋಷಣೆ ಮಾಡಿದೆ.

ADVERTISEMENT
ಕಣ್ಣು ಹಾಯಿಸಿದಷ್ಟು ದೂರದವರೆಗೆ ಕಾಣುವ ಪವನ ವಿದ್ಯುತ್‌ ಯಂತ್ರಗಳು

ಮಳೆಗಾಲ ಮತ್ತು ಚಳಿಗಾಲದಲ್ಲಿ ಮಲೆನಾಡ ಸೌಂದರ್ಯವನ್ನು ನಾಚಿಸುವ ಸೊಬಗು ಜೋಗಿಮಟ್ಟಿಯಲ್ಲಿ ಮೈದಳೆಯುತ್ತದೆ. ಗಿರಿಶಿಖರದ ಮೇಲೆ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತ ಕಣ್ತುಂಬಿಕೊಳ್ಳುವ ಪರಿಗೆ ಮನಸೋಲದವರೇ ಇಲ್ಲ. ಗಾಳಿಯನ್ನು ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸುವ ಪವನ ವಿದ್ಯುತ್‌ ಯಂತ್ರಗಳು ಕಣ್ಣುಹಾಯಿಸಿದಷ್ಟು ದೂರಕ್ಕೆ ಕಾಣಿಸುತ್ತವೆ. ಬೆಟ್ಟದ ಮೇಲೆ ಸ್ಥಾಪನೆಯಾದ ವೀಕ್ಷಣಾ ಗೋಪುರ ಏರಿ ಗಾಳಿಗೆ ಮೈಯೊಡ್ಡುವುದು ಸವಾಲಿನ ಕೆಲಸವೂ ಹೌದು. ಗಾಳಿಯ ನಿಜವಾದ ಶಕ್ತಿ ಬಹುಶಃ ಇಲ್ಲಿ ಅರ್ಥವಾಗುತ್ತದೆ.

ವನ್ಯಧಾಮವಾಗಿ ಪರಿವರ್ತನೆ ಹೊಂದಿದ ಬಳಿಕ ಜೋಗಿಮಟ್ಟಿ ಮುಕ್ತ ಪ್ರವೇಶಕ್ಕೆ ಕಡಿವಾಣ ಬಿದ್ದಿದೆ. ಆಡುಮಲ್ಲೇಶ್ವರ ಕಿರು ಮೃಗಾಲಯ ಸಮೀಪದ ಮುಖ್ಯದ್ವಾರದ ಮೂಲಕವೇ ವನ್ಯಧಾಮಕ್ಕೆ ಪ್ರವೇಶ ಪಡೆಯಬೇಕು. ಬೆಟ್ಟಕ್ಕೆ ಹಾವಿನಂತೆ ಸುತ್ತಿಕೊಂಡಿರುವ ಘಾಟಿಯಂತಹ ರಸ್ತೆಯಲ್ಲಿ ಸಾಗಿದರೆ ಗಿರಿಶಿಖರದ ತುದಿ ತಲುಪಲು ಸಾಧ್ಯ. ಅಲ್ಲಲ್ಲಿ ಕಾಲು ದಾರಿಗಳು ಇವೆಯಾದರೂ ಕಾಡುಪ್ರಾಣಿಗಳ ಅಪಾಯ ಎದುರಿಸಬೇಕಾಗುತ್ತದೆ.

ಜೋಗಿಮಟ್ಟಿಯಿಂದ ಕಾಣುವ ಪ್ರಕೃತಿಯ ಸೊಬಗು

ಜೋಗಿಮಟ್ಟಿಗೆ ತೆರಳುವ ಮಾರ್ಗದ ಬಲಬದಿಗೆ ಆಡುಮಲ್ಲೇಶ್ವರ ಕಿರು ಮೃಗಾಲಯವಿದೆ. ಕೆಳಭಾಗದಲ್ಲಿ ತಿಮ್ಮಣ್ಣನಾಯಕ ಕೆರೆ ಕಾಣಿಸುತ್ತದೆ. ಹಿಂಬದಿಯಲ್ಲಿ ಗೋಡೆ ಕಣಿವೆ, ಅಂಕೋಲೆಗುತ್ತಿ, ಗಾಳಿಗುಡ್ಡ, ಈರಣ್ಣನ ಕಲ್ಲು ಬೆಟ್ಟ, ಕಡ್ಲೆಕಟ್ಟೆ ಕಣಿವೆ, ಚಿರತೆಕಲ್ಲು, ಸೀಳುಗಲ್ಲು ಎಂಬ ಅದ್ಭುತವಾದ ಅರಣ್ಯವಿದೆ. ಹೊನ್ನೆ, ತೇಗ, ಶ್ರೀಗಂಧ, ಬಿದಿರು, ಹೊಂಗೆ, ನೆಲ್ಲಿ ಸೇರಿ ಬಗೆಬಗೆಯ ವನ್ಯಸಂಪತ್ತು ಮತ್ತು ಹಣ್ಣು ಬಿಡುವ ದಟ್ಟ ಕಾನನದ ಸಸ್ಯಕಾಶಿ ಇಲ್ಲಿದೆ.

ಮಳೆ ಸುರಿದಾಗ ಜೋಗಿಮಟ್ಟಿಯ ಅಲ್ಲಲ್ಲಿ ತೊರೆಗಳು ಸೃಷ್ಟಿಯಾಗುತ್ತವೆ. ಮೇಲಿಂದ ಧುಮ್ಮಿಕ್ಕಿ ಹರಿಯುವ ಜಲಧಾರೆ ಪಶ್ಚಿಮಘಟ್ಟವನ್ನು ನಾಚಿಸುತ್ತದೆ. ಮುಂಗಾರು ಹಂಗಾಮು ಕಡಿಮೆ ಸುರಿಯುವುದರಿಂದ ಹಿಂಗಾರು ಮಳೆಗೆ ಜಲಧಾರೆ ಮೈದಳೆಯುತ್ತವೆ. ಹಿಮವತ್‌ ಕೇದಾರ ಪ್ರವಾಸಿಗರನ್ನು ಸೆಳೆಯುತ್ತದೆ. ಸಣ್ಣ ಗುಹೆಯಲ್ಲಿ ಶಿವಲಿಂಗವಿದ್ದು, ಬಸವಣ್ಣನ ಬಾಯಿಯಿಂದ ನೀರು ಸುರಿಯುವುದು ಹಿಮವತ್ ಕೇದಾರದ ವಿಶೇಷ. ಮಳೆಗಾಲದ ಬಹುದಿನ ಇದು ಧುಮ್ಮಿಕ್ಕಿ ಹರಿಯುತ್ತದೆ.

ಬಂಡೆಗಳಲ್ಲಿ ಸ್ವಾಭಾವಿಕವಾಗಿ ನಿರ್ಮಾಣಗೊಂಡಿರುವ ‘ದೊಣೆ’ಗಳು ಜೋಗಿಮಟ್ಟಿಯ ಅಲ್ಲಲ್ಲಿ ಕಾಣಿಸುತ್ತವೆ. ಪ್ರಾಣಿ–ಪಕ್ಷಿಗಳ ನೀರಿಗೆ ‘ದೊಣೆ’ ಆಸರೆಯಾಗಿವೆ. ಮಳೆಗಾಲದಲ್ಲಿ ತುಂಬಿಕೊಳ್ಳುವ ದೊಣೆಗಳು ವರ್ಷವಿಡೀ ನೀರು ಹಿಡಿದಿಡುತ್ತವೆ. ಇಂತಹ ದುರ್ಗಮ ಪ್ರದೇಶದಲ್ಲಿಯೂ ಕೆರೆ–ಕಟ್ಟೆಗಳು ನಿರ್ಮಾಣವಾಗಿವೆ. ಬೀರಮಲ್ಲಪ್ಪನ ಕೆರೆ, ಕಡ್ಲೆಕಟ್ಟೆ ಕಣಿವೆ, ಗೋಪನಕಟ್ಟೆ, ಕುಮಾರನಕಟ್ಟೆ, ಒಕ್ಕಲಿಕ್ಕನ ಕಟ್ಟೆಗಳು ಇಲ್ಲಿವೆ. ನವಿಲುಗುಡ್ಡ, ಜೋಗಿಗುಡ್ಡ, ಚೌಡಮ್ಮನ ದೇಗುಲಗಳು ಅರಣ್ಯದಲ್ಲಿವೆ. ಈ ಅರಣ್ಯ ಪ್ರದೇಶದಲ್ಲಿ ಜೋಗಿಗಳು ವಾಸವಾಗಿದ್ದರು ಎಂಬ ಪ್ರತೀತಿ ಇದೆ.

ಜೋಗಿಮಟ್ಟಿಯ ತುದಿಯಲ್ಲಿ ಪ್ರವಾಸಿಗರ ಅನುಕೂಲಕ್ಕೆ ನಿರ್ಮಾಣಗೊಂಡ ಮಾರ್ಗ

ಜೋಗಿಮಟ್ಟಿ ಅರಣ್ಯದಲ್ಲಿ ಚಿರತೆ ಹಾಗೂ ಕರಡಿಗಳು ಹೆಚ್ಚಾಗಿವೆ. ವರ್ಷಕ್ಕೆ ಒಮ್ಮೆಯಾದರೂ ಕಾಡಾನೆಗಳು ಇಲ್ಲಿಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಜಿಂಕೆ, ಕಡವೆ, ಕೊಂಡುಕುರಿ, ಪುನುಗು ಬೆಕ್ಕು, ಕಾಡುಕೋಳಿ, ನವಿಲು, ಮುಳ್ಳುಹಂದಿ, ಕಾಡುಹಂದಿಗಳು ಸಾಕಷ್ಟಿವೆ. 200ಕ್ಕೂ ಹೆಚ್ಚು ಪ್ರಭೇದದ ಪಕ್ಷಿ ಸಂಕುಲ ಇಲ್ಲಿದೆ. ಜೀವವೈವಿಧ್ಯತೆಯನ್ನು ಮಡಿಲೊಳಗೆ ಇಟ್ಟುಕೊಂಡಿರುವ ಈ ವನ್ಯಧಾಮ ಬಯಲುಸೀಮೆಯ ‘ಪ್ರೀವೆಡ್ಡಿಂಗ್‌’ ಫೋಟೊ ಶೂಟ್‌ಗೆ ನೆಚ್ಚಿನ ತಾಣವಾಗಿ ಪರಿವರ್ತನೆ ಹೊಂದಿದೆ.

ಜೋಗಮಟ್ಟಿಗೆ ಹೊಂದಿರುವಂತೆ ಆಡುಮಲ್ಲೇಶ್ವರ ಕಿರು ಮೃಗಾಲಯವಿದೆ. ಇಲ್ಲಿ 22 ಪ್ರಭೇದದ ಪ್ರಾಣಿ ಮತ್ತು ಪಕ್ಷಿಗಳಿವೆ. 48 ಪಕ್ಷಿಗಳು ಹಾಗೂ 49 ಪ್ರಾಣಿಗಳು ಆಶ್ರಯ ಪಡೆದಿವೆ. ಮೂರು ಕರಡಿ, ಏಳು ಚಿರತೆಗಳಿವೆ. ಕೃಷ್ಣಮೃಗ, ಜಿಂಕೆ, ಮೊಸಳೆ, ನರಿ, ಹೆಬ್ಬಾವು, ಕಾಡುಕೋಳಿ ಸೇರಿ ಹಲವು ವನ್ಯಜೀವಿಗಳು ಇಲ್ಲಿವೆ. ಮಕ್ಕಳಿಗೆ ಇದು ನೆಚ್ಚಿನ ತಾಣವಾಗಿದೆ. ಪ್ರವಾಸಿಗರಿಗೆ ಆಶ್ರಯ ನೀಡುತ್ತಿದ್ದ ಟೆಂಟ್‌ಗಳು ಸದ್ಯ ಪಾಳು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.