ADVERTISEMENT

ರಾತ್ರಿ ವೇಳೆ ಟ್ರ್ಯಾಕ್ಟರ್‌ಗಳ ಹಾವಳಿ ವಿದ್ಯಾರ್ಥಿಗಳಿಗೆ ತೊಂದರೆ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:45 IST
Last Updated 20 ಮಾರ್ಚ್ 2023, 6:45 IST
ಚಿಕ್ಕಜಾಜೂರಿನ ಚಿಕ್ಕಂದವಾಡಿ ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರ್‌
ಚಿಕ್ಕಜಾಜೂರಿನ ಚಿಕ್ಕಂದವಾಡಿ ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರ್‌   

ಚಿಕ್ಕಜಾಜೂರು: ಸಮೀಪದ ಚಿಕ್ಕಂದವಾಡಿ ಗ್ರಾಮದ ಜಮೀನಿನಿಂದ ಕೆಲ ಗ್ರಾಮಗಳ ತೋಟಗಳಿಗೆ ಹಗಲು–ರಾತ್ರಿ ಟ್ರ್ಯಾಕ್ಟರ್‌ನಲ್ಲಿ ಮಣ್ಣನ್ನು ಸಾಗಿಸುತ್ತಿದ್ದು, ನಿವಾಸಿಗಳಿಗೆ ನಿದ್ರೆ ಇಲ್ಲ. ಪರೀಕ್ಷೆ ಸಮಯವಾಗಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.

ರಾತ್ರಿ ವೇಳೆಯಲ್ಲಿ ಕರ್ಕಶ ಶಬ್ದದ ಧ್ವನಿವರ್ಧಕ ಹಾಕಿಕೊಂಡು ರಾತ್ರಿಯಿಂದ ಬೆಳಗಿನ ಜಾವದವರೆಗೂ ಮಣ್ಣನ್ನು ಸಾಗಿಸುತ್ತಿದ್ದು, ದೂಳಿನಿಂದಾಗಿ ನಿವಾಸಿಗಳು ತೊಂದರೆ ಎದುರಿಸುವಂತಾಗಿದೆ.

ಮೆಟ್ರಿಕ್‌ ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯ ಇಲ್ಲಿದೆ. ಟ್ರ್ಯಾಕ್ಟರ್‌ಗಳ ಹಾವಳಿಯಿಂದ ವಿದ್ಯಾರ್ಥಿಗಳು ಓದಿಕೊಳ್ಳದ ಹಾಗೂ ನಿದ್ರೆಯನ್ನೂ ಮಾಡದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಚಿಕ್ಕಂದವಾಡಿ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆ, ವಿದ್ಯಾನಗರ ಹಾಗೂ ಮಾರುತಿ ನಗರದ ಬಡಾವಣೆಯ ರಸ್ತೆ ಬದಿಯ ನಿವಾಸಿಗಳು ಆರೋಪಿಸಿದ್ದಾರೆ.

ADVERTISEMENT

‘ರೈತರು ಜಮೀನು ತೋಟಗಳಿಗೆ ಮಣ್ಣನ್ನು ಹೊಡೆಯುತ್ತಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಇಡೀ ರಾತ್ರಿ ಸುಮಾರು 45–50 ಟ್ರ್ಯಾಕ್ಟರ್‌ಗಳು ಮಣ್ಣನ್ನು ತುಂಬಿಕೊಂಡು ಓಡಾಡುತ್ತಿವೆ. ಕೆಲವು ಟ್ರ್ಯಾಕ್ಟರ್‌ನಲ್ಲಿ ಜೋರಾಗಿ ಹಾಡುಗಳನ್ನು ಹಾಕಿಕೊಂಡು ಅತಿ ವೇಗವಾಗಿ ಓಡಿಸುತ್ತಿದ್ದಾರೆ. ದೂಳಿನಿಂದಾಗಿ ನಿವಾಸಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಈ ಬಗ್ಗೆ ಪೊಲೀಸರು ಹಾಗೂ ತಹಶೀಲ್ದಾರ್‌ ಅವರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿಗಳು ದೂರಿದ್ದಾರೆ.

ತಹಶೀಲ್ದಾರ್‌ ಮಧ್ಯಪ್ರವೇಶಿಸಿ ರಾತ್ರಿ 10 ಗಂಟೆ ನಂತರ ಟ್ರ್ಯಾಕ್ಟರ್‌ಗಳ ಸಂಚಾರವನ್ನು ನಿರ್ಬಂಧಿಸಲು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಭಾಗ್ಯಮ್ಮ, ಲಕ್ಷ್ಮೀದೇವಿ, ಪಾರಕ್ಕ, ದೇವಮ್ಮ, ಗಿರಿಜಮ್ಮ, ಮಂಜುಳಾ, ಪ್ರೇಮಕ್ಕ, ಕವಿತಾ, ಯಶೋದಮ್ಮ, ಮಲ್ಲಯ್ಯ, ಜಯಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.