ADVERTISEMENT

ಅಪಘಾತ: ವಿದ್ಯಾರ್ಥಿ ಸಾವು, ತಾಯಿಗೆ ಗಾಯ

ಉಪ್ಪಿನಂಗಡಿ: ದ್ವಿಚಕ್ರ ವಾಹನ– ಬುಲೆಟ್ ಟ್ಯಾಂಕರ್ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 12:01 IST
Last Updated 6 ಸೆಪ್ಟೆಂಬರ್ 2021, 12:01 IST
ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಗಾಂಧಿಪಾರ್ಕ್‌ ಬಳಿ ಬುಲೆಟ್ ಟ್ಯಾಂಕರ್ ಮತ್ತಿ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ.
ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಗಾಂಧಿಪಾರ್ಕ್‌ ಬಳಿ ಬುಲೆಟ್ ಟ್ಯಾಂಕರ್ ಮತ್ತಿ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ.   

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ಬುಲೆಟ್ ಟ್ಯಾಂಕರ್ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಸ್ಕೂಟರ್‌ನ ಸಹಸವಾರ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ತಾಯಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ ಸೇಂಟ್‌ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಧ್ವಿತ್ (15) ಮೃತ ಬಾಲಕ. ಈತ ಕರಾಯ ಗ್ರಾಮದ ಕಲ್ಲೇರಿ ನಿವಾಸಿ ರಿಕ್ಷಾ ಚಾಲಕ ಜನಾರ್ದನ ಹಾಗೂ ಉಜ್ರುಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅನುರಾಧಾ ಅವರ ಪುತ್ರ.

ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಅಧ್ವಿತ್‌ ತರಗತಿ ಪರೀಕ್ಷೆಯ ಪುಸ್ತಕವನ್ನು ಶಾಲೆಗೆ ಕೊಡುವ ಸಲುವಾಗಿ ತಾಯಿ ಜತೆ ಸ್ಕೂಟರ್‌ನಲ್ಲಿ ಹೋಗಿದ್ದರು. ಶಾಲೆಯಲ್ಲಿ ಪುಸ್ತಕ ಕೊಟ್ಟು ಬರುವಾಗ ಈ ಅವಘಡ ಸಂಭವಿಸಿದೆ.

ADVERTISEMENT

ವಾಹನ ಸಂಚಾರಕ್ಕೆ ಅಡಚಣೆ: 2 ದಿನಗಳ ವಾರಾಂತ್ಯ ಕರ್ಫ್ಯೂ ಬಳಿಕ ಸೋಮವಾರ ಬೆಳಿಗ್ಗಿನಿಂದಲೇ ಪೇಟೆಯಲ್ಲಿ, ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಿತ್ತು. ಅಪಘಾತ ಸಂಭವಿಸಿದ ತಕ್ಷಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ, ಸುಮಾರು 1 ತಾಸು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಬಂದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಪಘಾತ ವಲಯ: ಗಾಂಧಿ ಪಾರ್ಕ್‌ನಿಂದ ಪೆಟ್ರೋಲ್ ಬಂಕ್ ತನಕವೂ ರಸ್ತೆ ಇಳಿಜಾರು ಇದ್ದು, ವಾಹನಗಳು ವೇಗವಾಗಿ ಬರುತ್ತಿರುತ್ತದೆ. ಅಪಘಾತ ನಡೆದ ಸ್ಥಳದಲ್ಲಿ ನಿರಂತರ ಅಪಘಾತ ನಡೆಯುತ್ತಿದ್ದು, ಈಗಾಗಲೇ ಐದಕ್ಕೂ ಅಧಿಕ ಸಾವು ಸಂಭವಿಸಿದೆ. ಹತ್ತಾರು ಮಂದಿ ಗಾಯಗೊಂಡಿರುತ್ತಾರೆ. ಹೀಗಾಗಿ, ಈ ಜಾಗ ಅಪಘಾತ ವಲಯ ಎಂದೇ ಗುರುತಿಸಲ್ಪಟ್ಟಿದೆ.

ರಸ್ತೆ ಉಬ್ಬು ನಿರ್ಮಿಸಲು ಆಗ್ರಹ: ಇಲ್ಲಿ ಅಪಘಾತವನ್ನು ತಡೆಗಟ್ಟುವ ಸಲುವಾಗಿ 7 ವರ್ಷಗಳ ಹಿಂದೆ ಸ್ಥಳೀಯ ಸಂಘ ಸಂಸ್ಥೆ ಮತ್ತು ದಾಣಿಗಳ ಸಹಕಾರ ಪಡೆದುಕೊಂಡು ಬ್ಯಾರಿಕೇಡ್‌ ಹಾಕಲಾಗಿತ್ತು. ಆದರೆ, ಅದು ಕೆಲವು ಸಮಯ ಮಾತ್ರ ಇದ್ದು, ಬಳಿಕ ಮಾಯವಾಗಿರುತ್ತದೆ. ಆದ್ದರಿಂದ ಈ ಜಾಗದಲ್ಲಿ ರಸ್ತೆ ಉಬ್ಬು ನಿರ್ಮಾಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.