ADVERTISEMENT

‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‘ನಲ್ಲಿ ಮಂಗಳೂರಿನ ಅಪೇಕ್ಷಾ ತಯಾರಿಸಿದ ಬಾಕ್ಸ್‌!

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 7:52 IST
Last Updated 14 ಅಕ್ಟೋಬರ್ 2019, 7:52 IST
ಅಪೇಕ್ಷ ಎಸ್ ಕೊಟ್ಟಾರಿ
ಅಪೇಕ್ಷ ಎಸ್ ಕೊಟ್ಟಾರಿ   

ಮಂಗಳೂರು: ಚಿಕ್ಕಂದಿನಿಂದಲೂ ಗಿಫ್ಟ್ ಬಾಕ್ಸ್‌ಗಳನ್ನು ಸಿದ್ಧಪಡಿಸುವ ಹವ್ಯಾಸ ಹೊಂದಿರುವಮಣ್ಣಗುಡ್ಡೆಯ ಅಪೇಕ್ಷ ಈಗ ರಾಷ್ಟ್ರೀಯ ಮಟ್ಟದ ದಾಖಲೆಯ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ಅತಿ ಉದ್ದನೆಯ ಎಕ್ಸ್‌ಪ್ಲೋಷನ್ ಗಿಫ್ಟ್ ಬಾಕ್ಸ್‌ ತಯಾರಿಸುವ ಮೂಲಕ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‘ನಲ್ಲಿ ಸೇರ್ಪಡೆಯಾಗಿದ್ದಾರೆ.

ಪ್ರಸ್ತುತಬೆಸೆಂಟ್ ಸಂಜೆ ಕಾಲೇಜಿನಲ್ಲಿ ಎಂ.ಕಾಂ ವ್ಯಾಸಂಗ ಮಾಡುತ್ತಿರುವ ಅಪೇಕ್ಷ ಎಸ್ ಕೊಟ್ಟಾರಿ,’ಇನ್‌ಕ್ರೆಡಿಬಲ್‌ ಇಂಡಿಯಾ‘ ಪರಿಕಲ್ಪನೆಯಡಿ 25 ಸೆಂ.ಮೀ.*25 ಸೆಂ.ಮೀ. ಅಳತೆಯಎಕ್ಸ್‌ಪ್ಲೋಷನ್‌ ಬಾಕ್ಸ್‌ ಸಿದ್ಧಪಡಿಸಿದರು. ಈ ಬಾಕ್ಸ್‌ ತೆರೆದಿಟ್ಟರೆ 75 ಸೆಂ.ಮೀ.*1000 ಸೆಂ.ಮೀ. ಉದ್ದವಿದೆ. ಇದು ‘ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ 2019‘ರಲ್ಲಿ ಅತಿ ಉದ್ದನೆಯ ಎಕ್ಸ್‌ಪ್ಲೋಷನ್‌ ಬಾಕ್ಸ್‌ ಎಂದು ದಾಖಲಾಗಿದೆ.

ಸಾಮಾನ್ಯ ಡಬ್ಬದಂತೆ ಕಾಣುವ ಎಕ್ಸ್‌ಪ್ಲೋಷನ್‌ ಗಿಫ್ಟ್ ಬಾಕ್ಸ್‌ ತೆರೆದುಕೊಳ್ಳುತ್ತ ಹೋದರೆ 1000 ಸೆಂ.ಮೀ.(32 ಅಡಿ) ಉದ್ದ ಹರಡಿಕೊಳ್ಳುತ್ತದೆ. ಇದರಲ್ಲಿ ದೇಶದ ಸ್ವಾತಂತ್ರ ಹೋರಾಟಗಾರರು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಸಾಧಕರು, ಪ್ರಮುಖ ನಾಯಕರು, ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶಗಳಲ್ಲಿನ ಸಾಂಸ್ಕೃತಿಕ ವೈವಿಧ್ಯತೆ,..ಹೀಗೆ ಭಾರತದ ಭವ್ಯತೆ ಬಾಕ್ಸ್‌ನಲ್ಲಿ ಅಡಗಿದೆ.

ADVERTISEMENT

ಅಪೇಕ್ಷ ಎಕ್ಸ್‌ಪ್ಲೋಷನ್ ಗಿಫ್ಟ್ ಬಾಕ್ಸ್‌ಗಳನ್ನು ಮಾಡಿ ತಮ್ಮ ಸ್ನೇಹಿತರಿಗೂ ನೀಡುತ್ತಿದ್ದಾರೆ. ಇಂತಹ ಗಿಫ್ಟ್‌ಗಳನ್ನು ಪಡೆದ ಸ್ನೇಹಿತರು ಅಪೇಕ್ಷ ಅವರಿಗೆ ಇನ್ನಷ್ಟು ಆಕರ್ಷಕ ಗಿಫ್ಟ್‌ ಬಾಕ್ಸ್‌ಗಳನ್ನು ತಯಾರಿಸುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ. ಸ್ನೇಹಿತರ ಹಲವಾರು ಸಲಹೆ ಸೂಚನೆಗಳನ್ನು ಪಡೆದು ತನ್ನದೇ ಶೈಲಿಯಲ್ಲಿ ಗಿಫ್ಟ್‌ ಬಾಕ್ಸ್‌ಗಳನ್ನು ತಯಾರಿಸುತ್ತಿದ್ದಾರೆ. ಇದುವರೆಗೂ ಸುಮಾರು 30 ಗಿಫ್ಟ್ ಬಾಕ್ಸ್‌ಗಳನ್ನು ಮಾಡಿ ಮಾರಾಟ ಮಾಡಿದ್ದಾರೆ.

ಗಿಫ್ಟ್ ಬಾಕ್ಸ್‌ ಮಾಡುವುದನ್ನೇ ಉದ್ಯೋಗ ಮಾಡಿಕೊಳ್ಳುವಂತೆ ಸ್ನೇಹಿತರು ಸಲಹೆ ನೀಡಿದರು. ಅದರಂತೆ ಅದರಲ್ಲೇ ಮುಂದುವರೆದಿದ್ದೇನೆ ಎನ್ನುತ್ತಾರೆ ಅಪೇಕ್ಷಾ. ಏಷಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್ಸ್‌ಗೂ ತಮ್ಮ ಕಾರ್ಯದ ಕುರಿತು ತಿಳಿಸಿ ಅರ್ಜಿಸಲ್ಲಿಸುವ ಯೋಜನೆ ಇರುವುದಾಗಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.