ADVERTISEMENT

ಸಿನಿಮಾ, ನಾಟಕ ಪ್ರದರ್ಶನಗಳಿಗೆ ಪೂರ್ಣ ಪ್ರಮಾಣದ ಪ್ರವೇಶಕ್ಕೆ ಅವಕಾಶ ನೀಡಿ

ಸಿನಿಮಾ, ನಾಟಕ ಕಲಾವಿದರು, ನಿರ್ಮಾಪಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 11:31 IST
Last Updated 16 ಸೆಪ್ಟೆಂಬರ್ 2021, 11:31 IST
ಮಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೇವಿದಾಸ್ ಕಾಪಿಕಾಡ್ ಮಾತನಾಡಿದರು. ವಿಜಯ್‌ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಮೋಹನ್ ಕೊಪ್ಪಲ ಇದ್ದರು.
ಮಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೇವಿದಾಸ್ ಕಾಪಿಕಾಡ್ ಮಾತನಾಡಿದರು. ವಿಜಯ್‌ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ. ಶೆಟ್ಟಿ, ಪ್ರಕಾಶ್ ಪಾಂಡೇಶ್ವರ, ಮೋಹನ್ ಕೊಪ್ಪಲ ಇದ್ದರು.   

ಮಂಗಳೂರು: ಸಿನಿಮಾ, ನಾಟಕ ಪ್ರದರ್ಶನಗಳಿಗೆ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡುವ ಮೂಲಕ ಕಷ್ಟದಲ್ಲಿರುವ ಕಲಾವಿದರಿಗೆ ಸರ್ಕಾರ ನೆರವಾಗಬೇಕು ಎಂದು ಕಲಾವಿದರಾದ ದೇವದಾಸ್ ಕಾಪಿಕಾಡ್, ವಿಜಯ್‌ಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ. ಶೆಟ್ಟಿ, ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಹಾಗೂ ಮೋಹನ್ ಕೊಪ್ಪಲ ಒತ್ತಾಯಿಸಿದರು.

ಗುರುವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ಶಾಲೆ–ಕಾಲೇಜುಗಳು ತೆರೆದಿವೆ. ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಅದರೆ, ಜಿಲ್ಲೆಯಲ್ಲಿ ಸಿನಿಮಾ ಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ಅವಕಾಶ ನೀಡಿಲ್ಲ. ಇದರಿಂದಲೇ ಜೀವನ ಸಾಗಿಸುವ ಕಲಾವಿದರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ, ರಾಜ್ಯ ಸರ್ಕಾರಕ್ಕೆ ವಿಷಯ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

‘ಕಲೆಯನ್ನು ನಂಬಿಕೊಂಡ ನೂರಾರು ಕುಟುಂಬಗಳು ಇವೆ. ಒಂದೂವರೆ ವರ್ಷದಿಂದ ಪ್ರದರ್ಶನ ಇಲ್ಲದೆ, ಕಲಾವಿದರು ನಿರ್ಗತಿಕರಾಗಿದ್ದಾರೆ. ಜಿಲ್ಲೆಯಲ್ಲಿ 30ಕ್ಕೂ ಮಿಕ್ಕಿ ನಾಟಕ ತಂಡಗಳು, 5,000ಕ್ಕೂ ಹೆಚ್ಚು ಕಲಾವಿದರು ಇದ್ದಾರೆ. ಕಲಾವಿದರು ಸಂಕಷ್ಟದಲ್ಲಿದ್ದಾಗ ಸರ್ಕಾರ ನೆರವಾಗಿಲ್ಲ. ನಮಗೆ ನಾಟಕ ಪ್ರದರ್ಶನ, ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಅವಕಾಶ ನೀಡಿ, ಕಲಾವಿದರ ಕುಟುಂಬಕ್ಕೆ ನೆರವಾಗಬೇಕು’ ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.

ADVERTISEMENT

ಇಲ್ಲಿಯ ಸಂಸ್ಕೃತಿ, ಭಾಷೆಗೆ ತುಳು ನಾಟಕಗಳು, ಸಿನಿಮಾಗಳು ವಿಶೇಷ ಕೊಡುಗೆ ನೀಡಿವೆ. ಮುಂಬರುವ ದಸರಾ, ದೀಪಾವಳಿ ಹಬ್ಬದ ದಿನಗಳಲ್ಲಿ ಎಲ್ಲ ತಂಡಗಳಿಗೂ ಪ್ರತಿದಿನ ಪ್ರದರ್ಶನಕ್ಕೆ ಅವಕಾಶ ನೀಡಲು ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ಕಿಶೋರ್ ಶೆಟ್ಟಿ ವಿನಂತಿಸಿದರು.

ಚಿತ್ರ ಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆಗೊಳಿಸಲು ಅವಕಾಶ ನೀಡಬೇಕು. ಈಗಾಗಲೇ ಕೆಲವು ಸಿನಿಮಾ ಮಂದಿರಗಳು ಮುಚ್ಚಿವೆ. ಇನ್ನುಳಿದವನ್ನಾದರೂ ಉಳಿಸುವ ಪ್ರಯತ್ನ ಮಾಡಬೇಕು. ಚಿತ್ರಮಂದಿರಗಳಿಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿ, ಶೇ 100ರ ಸಾಮರ್ಥ್ಯದಲ್ಲಿ ಅವಕಾಶ ನೀಡಬೇಕು ಎಂದು ವಿಜಯಕುಮಾರ್ ಕೊಡಿಯಾಲ್ ಬೈಲ್ ಆಗ್ರಹಿಸಿದರು.

‘ತಾರತಮ್ಯ ಸಲ್ಲದು’

‘10ರಿಂದ 15 ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಶೇ 50ರಷ್ಟು ಅವಕಾಶ ನೀಡಿದರೆ ಟಾಕೀಸ್‌ ಜನರು ಬರುವುದಿಲ್ಲ. ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಶೇ 100ರಷ್ಟು ಅವಕಾಶ ನೀಡಲಾಗಿದೆ. ನಾಟಕ-ಸಿನಿಮಾ ವಿಚಾರದಲ್ಲಿ ತಾರತಮ್ಯ ಸಲ್ಲದು. ಸಿನಿಮಾ ನಿರ್ಮಾಪಕರು ಸಾಲ ತಂದು ಸಿನಿಮಾಕ್ಕೆ ಬಂಡವಾಳ ಹಾಕಿ, ಈಗ ಬಡ್ಡಿ ಕಟ್ಟಲಾಗದ ಸ್ಥಿತಿ ತಲುಪಿದ್ದಾರೆ’ ಎಂದು ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.