ADVERTISEMENT

ಪತ್ನಿ ಮೇಲೆ ಹಲ್ಲೆ; ಪತಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:26 IST
Last Updated 19 ಸೆಪ್ಟೆಂಬರ್ 2021, 4:26 IST

ಮಂಗಳೂರು: ಪತ್ನಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದರಲ್ಲಿ ಪತಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 19,500 ದಂಡ ವಿಧಿಸಿ ಮಂಗಳೂರಿನ 3ನೇ ಸಿಜೆಎಂ (ಕಿರಿಯ ವಿಭಾಗ) ನ್ಯಾಯಾಲಯ
ಆದೇಶಿಸಿದೆ.

ಮಂಗಳೂರಿನ ಶಕ್ತಿನಗರದ ರಿಕ್ಷಾ ಚಾಲಕ ಶಿವಕುಮಾರ್ (45) ಶಿಕ್ಷೆಗೆ ಒಳಗಾದ ಆರೋಪಿ.

ಪ್ರಕರಣ ವಿವರ: 2019ರ ಫೆಬ್ರುವರಿ 20ರಂದು ರಾತ್ರಿ ಆರೋಪಿ ಶಿವಕುಮಾರ್, ಪತ್ನಿ ಸಾಕಮ್ಮ (39) ಮತ್ತು ಪುತ್ರಿಗೆ ಹೀನಾಯವಾಗಿ ನಿಂದಿಸಿದ್ದ. ಈ ಸಂದರ್ಭದಲ್ಲಿ ಸಾಕಮ್ಮ ಮನೆಯಿಂದ ಹೊರಗೆ ಬಂದಾಗ ಶಿವಕುಮಾರ್ ಆಕೆಯ ಎರಡೂ ಕೈ ಮತ್ತು ಕಾಲುಗಳಿಗೆ ಕಬ್ಬಿಣದ ಸರಳಿನಿಂದ ತೀವ್ರವಾಗಿ ಹೊಡೆದಿದ್ದ ಎಂದು ಆರೋಪಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರದೀಪ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶನಿವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮಧುಕರ ಭಾಗವತ್, ಆರೋಪಿಗೆ ಶಿಕ್ಷೆ
ವಿಧಿಸಿದ್ದಾರೆ. ದಂಡ ಮೊತ್ತದಲ್ಲಿ ₹ 19ಸಾವಿರ ಮೊತ್ತವನ್ನು ಸಂತ್ರಸ್ತೆ ಸಾಕಮ್ಮ ಅವರಿಗೆ ಹಾಗೂ ₹ 500 ಮೊತ್ತವನ್ನು ಸರ್ಕಾರಕ್ಕೆ
ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೇತ್ರಾವತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.