ADVERTISEMENT

ಬಂಟರ, ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಿ: ಬಂಟರ ಮಾತೃಸಂಘ ಒತ್ತಾಯ

ಬಂಟರನ್ನು 3 ಬಿಯಿಂದ 2 ಎ ಪ್ರವರ್ಗಕ್ಕೆ ಸೇರಿಸಿ: ಅಜಿತ್‌ ಕುಮಾರ್ ರೈ ಮಾಲಾಡಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:17 IST
Last Updated 22 ಮಾರ್ಚ್ 2023, 6:17 IST
ಸುದ್ದಿಗೋಷ್ಠಿಯಲ್ಲಿ ಅಜಿತ್ ಕುಮಾರ್‌ ರೈ ಮಾಲಾಡಿ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಅಜಿತ್ ಕುಮಾರ್‌ ರೈ ಮಾಲಾಡಿ ಮಾತನಾಡಿದರು   

ಮಂಗಳೂರು: ‘ಬಂಟರು ಯಾನೆ ನಾಡವರನ್ನು ಪ್ರವರ್ಗ 3 ಬಿಯಿಂದ ಕೈಬಿಟ್ಟು 2ಎಗೆ ಸೇರಿಸಬೇಕು, ಬಂಟರ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇಈ ಕುರಿತು ಆದೇಶ ಮಾಡಬೇಕು’ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ಬಗ್ಗೆ ನಾವು ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಸರ್ಕಾರಗಳು ಗಮನ ಕೊಟ್ಟಿಲ್ಲ. ಸರ್ಕಾರ ತಾರತಮ್ಯ ಧೋರಣೆಯನ್ನು ಅನುಸರಿಸಿದ್ದರಿಂದ ಬಂಟ ಸಮಾಜ ವಿದ್ಯೆ, ಉದ್ಯೋಗ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅವಕಾಶ ವಂಚಿತವಾಗಿದೆ. ನಮ್ಮ ಸಮಾಜದಲ್ಲಿ ಶೇ 40ರಷ್ಟು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ’ ಎಂದರು.

'ದೇಶದ, ರಾಜ್ಯದ ಹಾಗೂ ಜಿಲ್ಲೆಗಳ ಅಭಿವೃದ್ಧಿಯಲ್ಲಿ ಬಂಟರ ಪಾತ್ರವು ಗಮನಾರ್ಹ. ಊರಿನ ದೇವಸ್ಥಾನ, ದೈವಸ್ಥಾನ, ಆರಾಧನಾಲಯಗಳು, ಶಾಲೆಗಳ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ಬಂಟರು ಮುಂಚೂಣಿಯಲ್ಲಿದ್ದಾರೆ. ಹಣ ಇಲ್ಲದವರು ದುಡಿದು ಸೇವೆ ಸಲ್ಲಿಸುತ್ತಿದ್ದಾರೆ. ಈ ಸಮಾಜವನ್ನು ಕಡೆಗಣಿಸಿದರೆ ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಅದರ ದುಷ್ಪರಿಣಾಮ ಉಂಟಾಗುತ್ತವೆ. ಇದಕ್ಕೆ ಅವಕಾಶ ನೀಡಬಾರದು’ ಎಂದರು.

ADVERTISEMENT

‘ಬಂಟರು ಆನುವಂಶಿಕ ಮೊಕ್ತೇಸರರು, ಆಡಳಿತದಾರರಾಗಿದ್ದರು. ಸರ್ಕಾರ ತನ್ನ ತೆಕ್ಕೆಗೆ ತೆಗೆದುಕೊಂಡ ದೇವಸ್ಥಾನ, ದೈವಸ್ಥಾನ ಮತ್ತು ಇತರ ಆರಾಧನಾ ಕ್ಷೇತ್ರಗಳ ಆಡಳಿತವನ್ನು ಸಂಬಂಧಪಟ್ಟವರಿಗೆ ಮರಳಿಸಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತೃಸಂಘದ ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ , ಖಜಾಂಚಿ ಸಿ.ಎ.ರಾಮ ಮೋಹನ ರೈ ಹಾಗೂ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.