ADVERTISEMENT

World Environment Day: ಇಮಾರತ್ತಿನ ನೆರಳಲ್ಲಿ ಹಸಿರು ಹಾಸು

ಎನ್ಇಸಿಎಫ್ ತಂಡದ ಪರಿಸರ ತುಡಿತ

ಸಂಧ್ಯಾ ಹೆಗಡೆ
Published 4 ಜೂನ್ 2021, 19:52 IST
Last Updated 4 ಜೂನ್ 2021, 19:52 IST
ಮಂಗಳೂರು ಶಕ್ತಿನಗರದ ಬಡಾವಣೆಯಲ್ಲಿ ಎನ್‌ಇಸಿಎಫ್ ತಂಡದ ಸದಸ್ಯರು
ಮಂಗಳೂರು ಶಕ್ತಿನಗರದ ಬಡಾವಣೆಯಲ್ಲಿ ಎನ್‌ಇಸಿಎಫ್ ತಂಡದ ಸದಸ್ಯರು   

ಮಂಗಳೂರು: ಕಾಯ್ದಿಟ್ಟ ಅರಣ್ಯ, ವನಗಳಲ್ಲಿ ಸಸಿ ನೆಡುವ ಮೂಲಕ ಹಸಿರು ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ತಂಡವೊಂದು ಮಂಗಳೂರು ನಗರಕ್ಕೆ ಹಸಿರು ತೋರಣ ಕಟ್ಟುತ್ತಿದೆ. ಬಡಾವಣೆಗಳಲ್ಲಿ ಪಾಳುಬಿದ್ದ ಜಾಗದಲ್ಲಿ ಗಿಡಗಳನ್ನು ನಾಟಿ ಮಾಡಿ, ಹಸಿರು ಹೆಚ್ಚಿಸುವ ಕಾಯಕದಲ್ಲಿ ತೊಡಗಿದೆ.

20 ವರ್ಷಗಳಿಂದ ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಎನ್ಇಸಿಎಫ್) ನಗರದ ಶಕ್ತಿನಗರದ ಬಡಾವಣೆಯಲ್ಲಿ ತ್ಯಾಜ್ಯ ತುಂಬಿದ್ದ ಜಾಗದಲ್ಲಿ ವನ ನಿರ್ಮಿಸಿದೆ. ಒಂದು ವರ್ಷದ ಹಿಂದೆ ಎರಡೂವರೆ ಎಕರೆ ಪ್ರದೇಶದಲ್ಲಿ ನಾಟಿ ಮಾಡಿರುವ ಸುಮಾರು 1,350 ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ.

‘ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಹಸಿರೀಕರಣಕ್ಕೆ ಮತ್ತೆ ನಾಲ್ಕು ಬಡಾವಣೆಗಳನ್ನು ನೀಡಿದೆ. ಈ ಮುಂಗಾರಿನಲ್ಲಿ ನಗರ ಹಾಗೂ ಅರಣ್ಯ ಪ್ರದೇಶ ಸೇರಿ ಸುಮಾರು 4,500 ಗಿಡಗಳನ್ನು ನೆಡುವ ಯೋಜನೆಯಿದೆ. ನಾವು ಜೂನ್, ಜುಲೈನಲ್ಲಿ ನಡೆಸುವ ಪ್ರತಿ ಭಾನುವಾರದ ‘ವೃಕ್ಷ ಯಜ್ಞ’ ಕಾರ್ಯಕ್ರಮವನ್ನು ಲಾಕ್‌ಡೌನ್ ನಡುವೆಯೇ ಎರಡು ವಾರಗಳ ಹಿಂದೆ ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ ಸಂಘಟನೆಯ ಪ್ರಮುಖ ಶಶಿಧರ್ ಶೆಟ್ಟಿ.

ADVERTISEMENT

‘ಮಂಗ, ಕರಡಿಗಳಿಗೆ ಅರಣ್ಯದಲ್ಲಿ ಆಹಾರ ದೊರೆತರೆ ಅವು ನಾಡಿಗೆ ಬರುವುದಿಲ್ಲ. ಹೀಗಾಗಿ, ಕಾಡಂಚಿನ ಪ್ರದೇಶಗಳಲ್ಲಿ ಶೇ 90ರಷ್ಟು ಹಣ್ಣಿನ ಗಿಡಗಳನ್ನೇ ನಾಟಿ ಮಾಡುತ್ತೇವೆ. ನಗರದಲ್ಲೂ ಪಕ್ಷಿಗಳಿಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆ ಸಹಕಾರದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ನಿರಂತರವಾಗಿ ನೀರುಣಿಸುವ ಕಾರ್ಯಕರ್ತರ ಕಾಳಜಿಯಿಂದ ಶೇ 90ರಷ್ಟು ಸಸಿಗಳು ಸಮೃದ್ಧವಾಗಿ ಮೇಲೆದ್ದಿವೆ.ಹಸಿರು ಚರ್ಚೆಗೆ ಲಾಕ್‌ಡೌನ್ ಅಡ್ಡಿಯಾಗಿಲ್ಲ. ಯುವಜನರು, ಚಿಕ್ಕ ಮಕ್ಕಳು ಪರಿಸರ ಆಸಕ್ತಿ ಬೆಳೆಸಿಕೊಂಡಿರುವುದು ತಂಡಕ್ಕೆ ದೊರೆತಿರುವ ದೊಡ್ಡ ಯಶಸ್ಸು’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

‘ಗುದ್ದಲಿ, ಪಿಕಾಸು ಹಿಡಿದು ಹೊಂಡ ತೆಗೆಯುವ, ಗಿಡ ನೆಡುವ ಶ್ರಮದಾನದಲ್ಲಿ ಎಲ್ಲರಿಗೂ ಸಮಪಾಲು. 85 ವರ್ಷದ ಹಿರಿಯ ಮಾಧವ ಭಕ್ತ, ಏಳು ವರ್ಷದ ಬಾಲಕ ಶೌರ್ಯನೂ ಈ ತಂಡದ ಸದಸ್ಯರು. ಉದ್ಯಮಿಗಳು, ವೃತ್ತಿಪರರು, ನಿವೃತ್ತರು, ವಿದ್ಯಾರ್ಥಿಗಳು ಸ್ವಯಂ ಖುಷಿಗಾಗಿ ಹಸಿರು ಉಕ್ಕಿಸುವ ಕಾರ್ಯಕ್ಕೆ ಕೈಜೋಡಿಸುತ್ತಾರೆ. ಮಣ್ಣಿನ ನಂಟು ನೀಡುವ ಆಪ್ಯಾಯ ಅನುಭವಕ್ಕೆ ಹೋಲಿಕೆಯಿಲ್ಲ’ ಎಂದು ಪರಿಸರ ಪ್ರೇಮಿ ಜೀತ್ ಮಿಲನ್ ರೋಚ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.