ADVERTISEMENT

ಯಕ್ಷಗಾನದಲ್ಲಿ ರೈತ ಹೋರಾಟಕ್ಕೆ ವ್ಯಂಗ್ಯ: ರೈತ ಮುಖಂಡರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:28 IST
Last Updated 22 ಸೆಪ್ಟೆಂಬರ್ 2021, 3:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ‘ನಕಲಿ ಹೋರಾಟ’ ಎಂದು ಅಪಹಾಸ್ಯ ಮಾಡಿದಯಕ್ಷಗಾನದವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಯಕ್ಷಗಾನದವೇದಿಕೆಯಲ್ಲಿ ಕಲಾವಿದರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ಉಲ್ಲೇಖಿಸಿ, ‘ಹಲವಾರುತಿಂಗಳುಗಳಿಂದ ಹಸಿರು ಶಾಲು, ಟೊಪ್ಪಿ ಧರಿಸಿ ಹೋರಾಟ ಮಾಡುತ್ತಿರುವವರು ನಿಜವಾದ ರೈತರಲ್ಲ, ನಕಲಿಗಳು. ಅವರು ಆರು ವರ್ಷ ಹೋರಾಟ ನಡೆಸಿದರೂ ಏನೂ ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ರೈತರು ರಸ್ತೆಯಲ್ಲಿ ಕುಳಿತಿದ್ದರೆ ನಮಗೆ ಅಕ್ಕಿ ಎಲ್ಲಿಂದ ಸಿಗುತ್ತಿತ್ತು ? ನಿಜವಾದ ರೈತರು ಇನ್ನೂ ಗದ್ದೆಯಲ್ಲೇ ಇದ್ದಾರೆ’ ಎಂದು ಟೀಕಿಸಿದ್ದಾರೆ.

ಖಂಡನೆ: ‘ರೈತರನ್ನು ಅವಮಾನಿಸುವ, ರಾಜಕೀಯ ಪಕ್ಷಗಳ ಪರವಾಗಿ ಮಾತನಾಡುವ ಮಾತುಗಾರಿಕೆಯು ಯಕ್ಷಗಾನದ ಘನತೆಗೆ ಕುಂದು ತರುವಂತಾಗಿದೆ’ ಎಂದು ರೈತ ಸಂಘದ ಮುಖಂಡರು ಖಂಡಿಸಿದ್ದಾರೆ.

‘ರೈತ ಚಳವಳಿಯ ಬಗ್ಗೆ ನಡೆಸುತ್ತಿರುವ ಅಪಪ್ರಚಾರಕ್ಕೆ ಯಕ್ಷಗಾನ ಕಲೆಯನ್ನು ಬಳಸಿಕೊಳ್ಳುತ್ತಿರುವುದು ಖಂಡನೀಯ. ಆ ಮೂಲಕ ಯಕ್ಷಗಾನವನ್ನೂ ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ಪ್ರದೇಶ ರೈತ ಸಂಘದ ಉಪಾಧ್ಯಕ್ಷ ಯಾದವ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಯಕ್ಷಗಾನದ ಬಗ್ಗೆ ಗೌರವ ಇದೆ. ಆದರೆ,ಜೀವನಾನುಭವ ಇಲ್ಲದವರು ಕಲೆಯ ಮೂಲಕ ಅನ್ನದಾತರನ್ನೇ ಹೀಯಾಳಿಸುವುದು ನೋವು ಉಂಟು ಮಾಡಿದೆ’ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.