ADVERTISEMENT

ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ನಿಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 10:55 IST
Last Updated 13 ಸೆಪ್ಟೆಂಬರ್ 2021, 10:55 IST
   

ಮಂಗಳೂರು: ತಲೆಗೆ ಪೆಟ್ಟು ಬಿದ್ದು ನಗರದ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ‌ ಆಸ್ಕರ್ ಫರ್ನಾಂಡಿಸ್ ಸೋಮವಾರ‌ ನಿಧನರಾದರು.

ಮೃತರಿಗೆ ಪತ್ನಿ ಬ್ಲಾಸಂ ಫರ್ನಾಂಡಿಸ್‌, ಪುತ್ರ ರೋಶನ್‌ ಹಾಗೂ ಪುತ್ರಿ ರೋಶನಿ ಇದ್ದಾರೆ.

80 ವರ್ಷದ‌ ಆಸ್ಕರ್ ಫರ್ನಾಂಡಿಸ್ ಯೋಗ ಮಾಡುವಾಗ ತಲೆ ಪೆಟ್ಟು ಬಿದ್ದಿತ್ತು. ಯೇನೆಪೋಯ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದ ಅವರಿಗೆ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ನಂತರ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದರು.

ADVERTISEMENT

ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾದ ಮಾಹಿತಿ ಪಡೆದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಕುಟುಂಬದವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಎಂ.ಬಿ.ಪಾಟೀಲ ಸೇರಿದಂತೆ‌ ಹಲವರು ಮಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.

ಮಾರ್ಚ್‌ 27, 1941 ರಂದು ರೊಕಿಫರ್ನಾಂಡಿಸ್‌, ಲಿಯೊನಿಸಾ ಫರ್ನಾಂಡಿಸ್‌ ದಂಪತಿ ಪುತ್ರನಾಗಿ ಉಡುಪಿಯಲ್ಲಿ ಜನಿಸಿದ ಆಸ್ಕರ್ ಫರ್ನಾಂಡಿಸ್, 1972ರಲ್ಲಿ ಉಡುಪಿ ಮುನ್ಸಿಪಲ್‌ ಕೌನ್ಸಿಲ್‌ ಸದಸ್ಯರಾಗಿ ರಾಜಕೀಯ ವೃತ್ತಿಜೀವನ ಆರಂಭಿಸಿದರು.

1980, 1984, 1989, 1991 ಹಾಗೂ 1996ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಗೆಲುವು ಸಾಧಿಸಿದ್ದರು. ನಾಲ್ಕು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಕಾರ್ಮಿಕ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ್ದ ಅವರು,ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.