ADVERTISEMENT

‘ರಫ್ತು ಮಾಡುವ ಮಟ್ಟಕ್ಕೆ ಆಮ್ಲಜನಕ ಉತ್ಪಾದನೆ’

ಲಾಯಿಲ: ಉಚಿತ ಲಸಿಕಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:58 IST
Last Updated 4 ಸೆಪ್ಟೆಂಬರ್ 2021, 3:58 IST
ಲಾಯಿಲ ಗ್ರಾಮ ಪಂಚಾಯಿತಿ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿದರು.
ಲಾಯಿಲ ಗ್ರಾಮ ಪಂಚಾಯಿತಿ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ ಮಾತನಾಡಿದರು.   

ಬೆಳ್ತಂಗಡಿ: ‘ತಾಲ್ಲೂಕಿನಲ್ಲಿ ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ, ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಇಷ್ಟು ವ್ಯವಸ್ಥಿತವಾಗಿ ಅಭಿಯಾನ ನಡೆಯುತ್ತಿರುವುದು ರಾಜ್ಯದಲ್ಲೇ ಮೊದಲು’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಲಾಯಿಲ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ‘ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಆಮ್ಲಜನಕ ಘಟಕಗಳನ್ನು ದೇಶದ ವಿವಿಧ ಕಡೆಗಳಲ್ಲಿ ಸ್ಥಾಪಿಸಿ ಆಮ್ಲಜನಕದ ಕೊರತೆ ನೀಗಿಸಲಾಗಿದೆ. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೂ ಆಮ್ಲಜನಕ ರಫ್ತು ಮಾಡುವ ಮಟ್ಟಕ್ಕೆ ದೇಶ ಬೆಳೆದು ನಿಂತಿದೆ’ ಎಂದರು.

‘ಬೆಳ್ತಂಗಡಿ ಕೋವಿಡ್ ಆರೈಕೆ ಕೇಂದ್ರದ ಬಗ್ಗೆ ಸಚಿವರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿ, ಈ ಕೇಂದ್ರ ಹೇಗಿರಬೇಕು ಎಂಬುದನ್ನು ಬೆಳ್ತಂಗಡಿಯ ಕೋವಿಡ್ ಆರೈಕೆ ಕೇಂದ್ರ ನೋಡಿ ತಿಳಿದುಕೊಳ್ಳಬೇಕು ಎಂದು ಅನೇಕ ಕಾರ್ಯಕ್ರಮಗಳಲ್ಲಿ ಉಲ್ಲೇಖ ಮಾಡಿದ್ದಾರೆ. ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಕೇವಲ ಕೋವಿಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಆಸ್ಪತ್ರೆಗಳು ಇತರ ರೋಗಿಗಳಿಗೆ ಚಿಕಿತ್ಸೆ ಹಾಗೂ ಉಚಿತ ಹೆರಿಗೆ ಮಾಡಿಸುವ ಮೂಲಕ ಸಹಕಾರ ನೀಡಿದವು’ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಬೆನಡಿಕ್ಟ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಣೇಶ್ ಲಾಯಿಲ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕಲಾ ಮಧು, ಉಜಿರೆ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅಕ್ಷತಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧಾಕರ್ ಬಿ. ಎಲ್ ಇದ್ದರು.

ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಸ್ವಾಗತಿಸಿದರು. ಪಂಚಾಯಿತಿ ಕಾರ್ಯದರ್ಶಿ ಪುಟ್ಟಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

ಸದಸ್ಯ ಅರವಿಂದ ಲಾಯಿಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.