ADVERTISEMENT

ದಕ್ಷಿಣ ಕನ್ನಡದಲ್ಲಿ ಲಾಕ್‌ಡೌನ್‌ ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 20:26 IST
Last Updated 1 ಜುಲೈ 2021, 20:26 IST

ಬೆಂಗಳೂರು: ಕೋವಿಡ್‌ ಪ್ರಕರಣಗಳ ದೃಢಪ್ರಮಾಣ ದರ ಇಳಿಕೆಯಾಗಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗಲಿನ ವೇಳೆ ಲಾಕ್‌ಡೌನ್‌ ಪೂರ್ಣ ಸಡಿಲಿಸಿ ಕಂದಾಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

‘ದಕ್ಷಿಣ ಕನ್ನಡ ಜಿಲ್ಲೆಯನ್ನು ವರ್ಗ–1ರ ಜಿಲ್ಲೆಗಳ ಪಟ್ಟಿಗೆ ಸೇರಿಸಲಾಗಿದೆ. ಈ ಆದೇಶವು ಜುಲೈ 5ರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಆದೇಶದಲ್ಲಿ ತಿಳಿಸಿದ್ದಾರೆ.

ಶುಕ್ರವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ ಎಲ್ಲ ಬಗೆಯ ಅಂಗಡಿಗಳನ್ನೂ ತೆರೆಯಲು ಅವಕಾಶ ದೊರೆಯಲಿದೆ. ಹೋಟೆಲ್‌ಗಳಲ್ಲಿ ಕುಳಿತು ಆಹಾರ ಸೇವಿಸಲು, ಲಾಡ್ಜ್‌ ಮತ್ತು ರೆಸಾರ್ಟ್‌ಗಳಲ್ಲಿ ಗ್ರಾಹಕರು ತಂಗಲು ಅನುಮತಿ ದೊರಕಲಿದೆ.

ADVERTISEMENT

ಕೇರಳದಿಂದ ಬರುವವರ ಮೇಲೆ ನಿಗಾ: ಕೇರಳದಲ್ಲಿ ರೂಪಾಂತರಿ ಕೊರೊನಾ ವೈರಾಣು ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಅಲ್ಲಿಂದ ಕರ್ನಾಟಕಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಗುರುವಾರ ಆದೇಶ ಹೊರಡಿಸಿದ್ದಾರೆ.

ಕೇರಳದಿಂದ ಬರುವವರು ಆರ್‌ಟಿ–ಪಿಸಿಆರ್‌ ವಿಧಾನದ ಪರೀಕ್ಷೆಯಲ್ಲಿ 72 ಗಂಟೆಗಳಿಗೂ ಮೊದಲು ಪಡೆದಿರುವ ‘ನೆಗೆಟಿವ್‌’ ವರದಿ ಹೊಂದಿರುವುದು ಕಡ್ಡಾಯ. ವರದಿ ಹೊಂದಿರುವವರಿಗೆ ಮಾತ್ರವೇ ವಿಮಾನ, ಬಸ್‌ ಮತ್ತು ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅಂತರರಾಜ್ಯ ಗಡಿಗಳಲ್ಲಿ ತನಿಖಾ ಠಾಣೆಗಳನ್ನು ತೆರೆದು, ರಾಜ್ಯಕ್ಕೆ ಬರುವವರ ತಪಾಸಣೆ ನಡೆಸಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.