ADVERTISEMENT

ಮಹಾನಗರ ಪಾಲಿಕೆ ವಿಶೇಷ ಸಭೆ: ತ್ಯಾಜ್ಯ ನಿರ್ವಹಣೆಗೆ ಹೊಸ ಯೋಜನೆ

ಡಿಪಿಆರ್‌ಗೆ ಪ್ರತಿಪಕ್ಷದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 12:51 IST
Last Updated 15 ಸೆಪ್ಟೆಂಬರ್ 2021, 12:51 IST
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಸದಸ್ಯ ಶಶಿಧರ ಹೆಗ್ಡೆ ಮಾತನಾಡಿದರು –ಪ್ರಜಾವಾಣಿ ಚಿತ್ರ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ಸದಸ್ಯ ಶಶಿಧರ ಹೆಗ್ಡೆ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಸಂಬಂಧ ಆ್ಯಂಟಿ ಪಾಲ್ಯೂಷನ್ ಡ್ರೈವ್ ಸಂಸ್ಥೆ ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಯ ಮಾದರಿ–2 ಅನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲು ಪಾಲಿಕೆಯ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು. ಪ್ರತಿಪಕ್ಷದ ಸದಸ್ಯರು ಈ ವರದಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಬುಧವಾರ ನಡೆದ ಸಭೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ‘ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಮನೆ–ಮನೆ ಕಸ ಸಂಗ್ರಹ ಮತ್ತು ಸಾಗಣೆ ಕಾರ್ಯ ಮಾಡುತ್ತಿದ್ದ ಆ್ಯಂಟನಿ ವೇಸ್ಟ್ ಹ್ಯಾಂಡಲಿಂಗ್ ಕಂಪನಿಯ ಏಳು ವರ್ಷಗಳ ಗುತ್ತಿಗೆ 2022ರ ಜನವರಿಗೆ ಅಂತ್ಯಗೊಳ್ಳಲಿದೆ. ಸ್ವಚ್ಛ ಭಾರತ್ ಮಿಷನ್‍ನಡಿ ಮುಂದಿನ ಅವಧಿಯ ತ್ಯಾಜ್ಯ ಸಂಗ್ರಹ ಮತ್ತು ಸಾಗಣೆ ಕಾರ್ಯಕ್ಕೆ ಆ್ಯಂಟಿ ಪಾಲ್ಯೂಷನ್ ಡ್ರೈವ್ (ಎಪಿಡಿ) ಸಂಸ್ಥೆ ಮೂಲಕ ಡಿಪಿಆರ್ ಸಿದ್ಧಪಡಿಸಲಾಗಿದೆ. ಪೌರಾಡಳಿತ ನಿರ್ದೇಶನಾಲಯದ ಮಾರ್ಗಸೂಚಿ ಪ್ರಕಾರ ಈ ಯೋಜನೆ ರೂಪಿಸಲಾಗಿದೆ’ ಎಂದರು.

ಆ್ಯಂಟಿ ಪಾಲ್ಯೂಷನ್ ಡ್ರೈವ್ ಸಂಸ್ಥೆಯ ಪ್ರತಿನಿಧಿ ಅಕ್ಷಯ್, ತ್ಯಾಜ್ಯ ನಿರ್ವಹಣೆಯ ಮೂರು ಮಾದರಿಗಳ ವಿವರ ನೀಡಿದರು. ‘ಮೊದಲನೇ ಮಾದರಿಯು ಕಸ ಸಂಗ್ರಹ ವಾಹನ ಮತ್ತು ಅಗತ್ಯ ಸಿಬ್ಬಂದಿಯನ್ನು ಪಾಲಿಕೆಯೇ ನಿಯೋಜಿಸಿ, ನಿರ್ವಹಿಸುವುದಾಗಿದೆ. ಎರಡನೇ ಮಾದರಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಬೇಕಾದ ವಾಹನಗಳನ್ನು ಮಹಾನಗರ ಪಾಲಿಕೆ ಖರೀದಿಸಿ, ಸಿಬ್ಬಂದಿ ನೇಮಕ ಮತ್ತು ಇಂಧನವನ್ನು ಐದು ವರ್ಷದ ಅವಧಿಗೆ ಗುತ್ತಿಗೆ ನೀಡುವ ಅವಕಾಶಗಳಿವೆ. ಮೂರನೇ ಮಾದರಿಯ ಪ್ರಕಾರ ವಾಹನ, ಮಾನವ ಶಕ್ತಿ, ನಿರ್ವಹಣೆ ಎಲ್ಲವನ್ನೂ ಹೊರಗುತ್ತಿಗೆ ನೀಡುವುದಾಗಿದೆ’ ಎಂದು ತಿಳಿಸಿದರು.

ADVERTISEMENT

‘ಎಪಿಡಿ ಸಂಸ್ಥೆಗೆ ತ್ಯಾಜ್ಯ ನಿರ್ವಹಣೆಯಲ್ಲಿ ಯಾವುದೇ ಪರಿಣಿತಿ ಇಲ್ಲವಾಗಿದ್ದು, ಡಿಪಿಆರ್‌ ತಯಾರಿಕೆಯನ್ನು ಬೇರೆ ಸಂಸ್ಥೆಗೆ ನೀಡಿರುವಾಗ ನಿರ್ವಹಣೆಯ ಬಗ್ಗೆ ಅನುಮಾನ ಮೂಡುತ್ತದೆ. ಮಾದರಿ–2 ಅನೇಕ ನ್ಯೂನತೆಗಳನ್ನು ಹೊಂದಿದೆ. ಪಾಲಿಕೆ ವತಿಯಿಂದ ವಾಹನಗಳನ್ನು ಖರೀದಿಸಿ, ನಿರ್ವಹಣೆ ಮಾಡುವುದು ಸುಲಭವಲ್ಲ. ಇದಕ್ಕೆ ನಮ್ಮ ಆಕ್ಷೇಪವಿದೆ’ ಎಂದ ವಿನಯ್‌ರಾಜ್, ಮಾದರಿ–3ರ ಅನುಷ್ಠಾನಕ್ಕೆ ಒತ್ತಾಯಿಸಿದರು.

ಪ್ರತಿಪಕ್ಷದ ಸದಸ್ಯರನ್ನು ಒಳಗೊಂಡ ಉಪ ಸಮಿತಿಯೊಂದನ್ನು ರಚಿಸಿ ಶಾಸಕರ ಸಮ್ಮುಖದಲ್ಲಿ ಮತ್ತೊಮ್ಮೆ ಮಾದರಿ–2ರ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರೇಮಾನಂದ ಶೆಟ್ಟಿ ಭರವಸೆ ನೀಡಿದರು.

ಮಾದರಿ–3ರಿಂದ ಪಾಲಿಕೆಗೆ ಯಾವುದೇ ಆಸ್ತಿ ಸೃಷ್ಟಿಯಾಗುವುದಿಲ್ಲ. ಗುತ್ತಿಗೆ ಸಂಸ್ಥೆ ಅರ್ಧಕ್ಕೆ ಬಿಟ್ಟು ಹೋದರೆ, ವಾಹನಗಳ ಮೇಲಿನ ಅಧಿಕಾರವೂ ಪಾಲಿಕೆಗೆ ಇರುವುದಿಲ್ಲ. ಸ್ವಚ್ಛ ಭಾರತ್ ಮಿಷನ್‍ನಡಿಅನುದಾನವೂ ಲಭ್ಯವಾಗುವುದಿಲ್ಲ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.

ಏನಿದು ಮಾದರಿ–2: ಈ ಮಾದರಿಯ ವಾರ್ಷಿಕ ಬಂಡವಾಳದ ಮೊತ್ತ ಅಂದಾಜು ₹ 37.99 ಕೋಟಿ. ಶೇ 35ರಷ್ಟನ್ನು ಕೇಂದ್ರ ಸರ್ಕಾರ, ಶೇ 23.33ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಇನ್ನುಳಿದ ಶೇ 41.67ರಷ್ಟು ಅಂದರೆ ₹ 15.83 ಕೋಟಿ ಮೊತ್ತವನ್ನು ಪಾಲಿಕೆಯ ಸಾಮಾನ್ಯ ನಿಧಿ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಿಂದ ಭರಿಸಬೇಕಾಗಿದೆ ಎಂದು ಮುಖ್ಯ ಸಚೇತಕ ಸುಧೀರ್ ಶೆಟ್ಟಿ ತಿಳಿಸಿದರು.

ತ್ಯಾಜ್ಯ ನಿರ್ವಹಣೆಯಿಂದ ಪಾಲಿಕೆಗೆ ಅಂದಾಜು ₹ 18ರಿಂದ 20 ಕೋಟಿ ಆದಾಯ ಬರುತ್ತದೆ. ಹೆಚ್ಚುವರಿ ಹೊಣೆಯನ್ನು ಹೇಗೆ ನಿಭಾಯಿಸಲಾಗುತ್ತದೆ ಎಂದು ಸದಸ್ಯ ಅಬ್ದುಲ್ ರವೂಫ್ ಪ್ರಶ್ನಿಸಿದರು. ಹೆಚ್ಚುವರಿ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ವಿಶೇಷ ಅನುದಾನ ತಂದು ಭರಿಸಬಹುದು ಎಂದು ಸುಧೀರ್ ಶೆಟ್ಟಿ ಪ್ರತಿಕ್ರಿಯಿಸಿದರು.

ಸಭೆಗೆ ಮಾಹಿತಿ ಇಲ್ಲ: ಆಕ್ಷೇಪ

ಎಪಿಡಿ ಸಂಸ್ಥೆ ಸಿದ್ಧಪಡಿಸಿದ ಮೂರು ಮಾದರಿಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 7ರಂದು ನಡೆದ ಪೂರ್ವಭಾವಿ ಸಭೆಗೆ ಪ್ರತಿಪಕ್ಷದ ಸದಸ್ಯರನ್ನು ಕರೆಯದೆ, ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರಾದ ವಿನಯ್‌ರಾಜ್, ಶಶಿಧರ ಹೆಗ್ಡೆ, ಭಾಸ್ಕರ್ ಕೆ, ನವೀನ್ ಡಿಸೋಜ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.