ADVERTISEMENT

ಮೀನುಗಾರಿಕೆ ಬೋಟ್‌ಗಳಲ್ಲಿ ಸಿಹಿ ನೀರು ಘಟಕ

ಸಹಾಯಧನ ಒದಗಿಸಲು ಚರ್ಚಿಸಿ ನಿರ್ಧಾರ: ಸಚಿವ ಎಸ್. ಅಂಗಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:55 IST
Last Updated 4 ಸೆಪ್ಟೆಂಬರ್ 2021, 3:55 IST
ಮಂಗಳೂರಿನ ಅಳಿವೆಯಲ್ಲಿ ಶುಕ್ರವಾರ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಯನ್ನು ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ
ಮಂಗಳೂರಿನ ಅಳಿವೆಯಲ್ಲಿ ಶುಕ್ರವಾರ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಯನ್ನು ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ವೀಕ್ಷಿಸಿದರು –ಪ್ರಜಾವಾಣಿ ಚಿತ್ರ   

ಮಂಗಳೂರು: ಆಳ ಸಮುದ್ರದ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಕುಡಿಯುವ ನೀರಿನ ಅಭಾವ ಎದುರಾಗುತ್ತದೆ. ಇದನ್ನು ತಪ್ಪಿಸಲು ಬೋಟ್‌ಗಳಲ್ಲಿ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಘಟಕ ಅಳವಡಿಸಬಹುದಾಗಿದೆ. ಈ ಘಟಕಕ್ಕೆ ಸಹಾಯಧನ ಒದಗಿಸುವ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ತಿಳಿಸಿದರು.

ಶುಕ್ರವಾರ ನಗರದ ಹಳೆ ಬಂದರು ದಕ್ಕೆಯ ಅಳಿವೆಬಾಗಿಲು ಬಳಿ ದೋಣಿಯಲ್ಲಿ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಘಟಕದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆಸ್ಟ್ರೇಲಿಯ ತಂತ್ರಜ್ಞಾನ ಆಧಾರಿತ ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಮಾಡುವ ಘಟಕದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೋಡಿದ್ದೇನೆ. ಈ ಘಟಕದಿಂದ ನಮ್ಮ ಮೀನುಗಾರರಿಗೆ ಅನುಕೂಲ ಆಗಲಿದೆ’ ಎಂದರು.

ADVERTISEMENT

4 ರಿಂದ 15 ದಿನಗಳ ಕಾಲ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ ಮೀನುಗಾರರು, ಕುಡಿಯಲು, ಸ್ನಾನ ಹಾಗೂ ಇತರ ಕೆಲಸ ಕಾರ್ಯಗಳಿಗೆ ಅಗತ್ಯವಾದ ಸಿಹಿ ನೀರನ್ನು ದೋಣಿಯಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಅದರ ಬದಲು ಈ ಘಟಕವನ್ನು ಬೋಟ್‌ಗಳಲ್ಲಿ ಅಳವಡಿಸಿದರೆ ನೀರನ್ನು ತೆಗೆದುಕೊಂಡು ಹೋಗುವ ತೊಂದರೆ ತಪ್ಪಲಿದೆ. ಜೊತೆಗೆ ಬೋಟ್‌ನಲ್ಲಿ ಭಾರವೂ ಕಡಿಮೆಯಾಗಲಿದೆ. ಮೀನುಗಾರಿಕೆ ಸಂದರ್ಭದಲ್ಲಿ ಸಿಹಿ ನೀರಿನ ಅಗತ್ಯ ಬಂದಾಗ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಬಹುದಾಗಿದೆ ಎಂದು ಹೇಳಿದರು.

ಮೀನುಗಾರಿಕಾ ದೋಣಿಗಳಲ್ಲಿ ಈ ಉಪಕರಣವನ್ನು ಅಳವಡಿಸಲು ಸರ್ಕಾರದಿಂದ ಯಾವ ರೀತಿಯಲ್ಲಿ ಸಹಾಯಧನ ನೀಡಬಹುದು ಎಂಬ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿ, ನಿರ್ಧರಿಸಲಾಗುವುದು. ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿಯೂ ಸಹಾಯ
ಧನ ಒದಗಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಮೀನುಗಾರಿಕೆಗೆ ತೆರಳಿದಾಗ ದಾರಿ ಮಧ್ಯೆ ಈ ಘಟಕದಲ್ಲಿ ಏನಾದರೂ ದೋಷ ಕಂಡು ಬಂದಲ್ಲಿ ಮೀನುಗಾರರು ನೀರಿಗಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಲಾಗುತ್ತದೆ ಎಂಬುದರ ಬಗ್ಗೆ ಚರ್ಚಿಸಲು ಸಚಿವರ ಗಮನ ಸೆಳೆಯಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ ತಿಳಿಸಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ಕುಮಾರ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಹರೀಶ್ ಕುಮಾರ್, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಇದ್ದರು.

‘ಹಲವು ದೇಶಗಳಲ್ಲಿ ಬಳಕೆ’

ಈ ತಂತ್ರಜ್ಞಾನವನ್ನು ಈಗಾಗಲೇ ಯೂರೋಪ್ ರಾಷ್ಟ್ರಗಳು ಸೇರಿದಂತೆ ಪ್ರಪಂಚದ ಅನೇಕ ದೇಶಗಳ ಮೀನುಗಾರರು ಬಳಕೆ ಮಾಡುತ್ತಿದ್ದಾರೆ ಎಂದು ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ತಿಳಿಸಿದರು.

ಕರಾವಳಿಯ ಮೀನುಗಾರರಿಗೆ ಇದು ಉಪಯುಕ್ತವಾಗಲಿದೆ. ದೇಶದಲ್ಲಿ ಪ್ರಥಮ ಬಾರಿಗೆ ಮಂಗಳೂರಿನ ಮೀನುಗಾರಿಕೆ ಬೋಟ್‌ಗಳಲ್ಲಿ ಘಟಕ ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.