ADVERTISEMENT

ಒಳನಾಡು ಮೀನುಗಾರಿಕೆಗೆ ಆದ್ಯತೆ: ಸಚಿವ ಎಸ್. ಅಂಗಾರ

ಸಂಚಾರಿ ಶಿಥಲೀಕರಣ ವಾಹನ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಎಸ್. ಅಂಗಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 17:07 IST
Last Updated 6 ಸೆಪ್ಟೆಂಬರ್ 2021, 17:07 IST
ಸಂಚಾರಿ ಶಿಥಲೀಕರಣ ವಾಹನಗಳ ಸಂಚಾರಕ್ಕೆ ಸಚಿವ ಎಸ್. ಅಂಗಾರ ಸೋಮವಾರ ಮಂಗಳೂರಿನಲ್ಲಿ ಚಾಲನೆ ನೀಡಿದರು.
ಸಂಚಾರಿ ಶಿಥಲೀಕರಣ ವಾಹನಗಳ ಸಂಚಾರಕ್ಕೆ ಸಚಿವ ಎಸ್. ಅಂಗಾರ ಸೋಮವಾರ ಮಂಗಳೂರಿನಲ್ಲಿ ಚಾಲನೆ ನೀಡಿದರು.   

ಮಂಗಳೂರು: ‘ಒಳನಾಡು ಮೀನುಗಾರಿಕೆಗೆ ಹೆಚ್ಚು ಒತ್ತು ನೀಡುವುದರ ಜತೆಗೆ ಅದಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಗ್ರಾಹಕರಿಗೆ ಗುಣಮಟ್ಟದ ಮೀನು ಒದಗಿಸಬೇಕು’ ಎಂದು ಮೀನುಗಾರಿಕಾ ಸಚಿವ ಎಸ್. ಅಂಗಾರ ಹೇಳಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಂಟು ಸಂಚಾರಿ ಶಿತಲೀಕರಣ ವಾಹನಗಳಿಗೆ ನಗರದ ಹೊಯ್ಗೆ ಬಜಾರಿನಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಮೀನು ಕೆಟ್ಟು ಹೋಗದಂತೆ ಇಡಲು ಶಿತಲೀಕರಣ ಘಟಕದ ವ್ಯವಸ್ಥೆ ಅತಿ ಅಗತ್ಯ. ಇದರಿಂದ ಮೀನಿನ ಗುಣಮಟ್ಟ ಕಾಪಾಡಿಕೊಂಡು ಜನರಿಗೆ ಒಳ್ಳೆಯ ಮೀನು ಕೊಡಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸಿರುವ ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಜನರಿಗೆ ಪರ್ಯಾಯ ಉದ್ಯೋಗ ದೊರಕಿಸಿ ಕೊಡಲು ಒಳನಾಡು ಮೀನುಗಾರಿಕೆಗೆ ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ಮೀನು ಕೃಷಿ ಸೇರಿದಂತೆ ಎಲ್ಲ ಕೃಷಿಗಳೂ ಪರಿಸರ ಪೂರಕವಾಗಿರಬೇಕು. ಮನುಷ್ಯನ ಅತಿಆಸೆಯಿಂದ ಅನಾಹುತಗಳು ಆಗುತ್ತಿವೆ. ಶುಂಠಿ, ಅನಾನಸ್, ರಬ್ಬರ್ ಬೆಳೆಯಲ್ಲಿ ಅಧಿಕ ಇಳುವರಿ ಪಡೆಯಲು ಅತಿಯಾದ ರಾಸಾಯನಿಕ ಬಳಸುವ ಪರಿಣಾಮ ಮಣ್ಣಿನ ಫಲವತ್ತತೆ ನಷ್ಟವಾಗುತ್ತಿದೆ. ಎಲ್ಲ ರೀತಿಯ ಕೃಷಿಯಲ್ಲೂ ರಾಸಾಯನಿಕ ಬಳಕೆ ಕಡಿಮೆ ಮಾಡಬೇಕು.ಸಮುದ್ರದ ಮೀನುಗಾರಿಕೆ ನಡೆಸುವಾಗ ಸಹ ಮೀನಿನ ಸಂತತಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಆಗ ಸಮುದ್ರದಿಂದ ಹೆಚ್ಚು ಮೀನು ಪಡೆಯಲು ಸಾಧ್ಯ. ಮೀನು ಕೃಷಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಇನ್ನಷ್ಟು ಶಿತಲೀಕರಣ ಘಟಕ ಮಾಡಲು ಯೋಚಿಸಲಾಗಿದೆ ಎಂದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ನಿಗಮದ ಸಲಹೆಗಾರರಾದ ವಿ.ಕೆ.ಶೆಟ್ಟಿ, ನಿರ್ದೇಶಕ ಸಂದೀಪ್ ಕುಮಾರ್, ಪಾಲಿಕೆ ಸದಸ್ಯರಾದ ದಿವಾಕರ ಪಾಂಡೇಶ್ವರ, ಸದಸ್ಯೆ ರೇವತಿ ಉಪಸ್ಥಿತರಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುಂಡುಮಣಿ ವಂದಿಸಿದರು. ಜಿ.ಎಂ ಮುದ್ದಣ್ಣ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.