ADVERTISEMENT

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ನಿರ್ಗಮನ ಶೇ 40, ಆಗಮನ ಶೇ 35 ವೃದ್ಧಿ

ಆಗಸ್ಟ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:55 IST
Last Updated 3 ಸೆಪ್ಟೆಂಬರ್ 2021, 3:55 IST
ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು ವಿಮಾನ ನಿಲ್ದಾಣ   

ಮಂಗಳೂರು: ವಿವಿಧ ರಾಜ್ಯಗಳಲ್ಲಿ ನಿರ್ಬಂಧ ಸಡಿಲಿಕೆ ಮಾಡಿದ ನಂತರ ಇಲ್ಲಿನ ವಿಮಾನ ನಿಲ್ದಾಣದಿಂದ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜುಲೈಗೆ ಹೋಲಿಕೆ ಮಾಡಿದಲ್ಲಿ, ಆಗಸ್ಟ್‌ನಲ್ಲಿ ಇಲ್ಲಿನ ವಿಮಾನ ನಿಲ್ದಾಣದಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣ ಬೆಳೆಸಿದ್ದಾರೆ.

ಆಗಸ್ಟ್‌ನಲ್ಲಿ ಇಲ್ಲಿನ ವಿಮಾನ ನಿಲ್ದಾಣದಿಂದ 26,067 ಪ್ರಯಾಣಿಕರು ನಿರ್ಗಮಿಸಿದ್ದು, ಜುಲೈನಲ್ಲಿ 18,557 ಜನರು ಪ್ರಯಾಣಿಸಿದ್ದರು. ಇದರಿಂದಾಗಿ ದೇಶಿಯ ಪ್ರಯಾಣಿಕರ ನಿರ್ಗಮನ ಸಂಖ್ಯೆ ಶೇ 40.5 ರಷ್ಟು ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ಒಟ್ಟು 26,732 ಪ್ರಯಾಣಿಕರು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಜುಲೈನಲ್ಲಿ 19,744 ಜನರು ಇಲ್ಲಿಗೆ ಬಂದಿದ್ದರು. ಇದರಲ್ಲೂ ಶೇ 35.4 ರಷ್ಟು ವೃದ್ಧಿ ಕಂಡು ಬಂದಿದೆ.

ಭಾರತದೊಳಗೆ ಮತ್ತು ವಿದೇಶಗಳ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ವಿವಿಧ ವಿಮಾನ ಯಾನ ಸಂಸ್ಥೆಗಳು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ವಿಮಾನಯಾನವನ್ನು ಆರಂಭಿಸಿದ್ದಾರೆ. ಈ ತಿಂಗಳಿನಿಂದ ಹಲವಾರು ಹಬ್ಬಗಳು ಬರಲಿದ್ದು, ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ADVERTISEMENT

ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ನಿತ್ಯ ಮಂಗಳೂರಿನಿಂದ ಮುಂಬೈ ಮತ್ತು ಕೊಯಮತ್ತೂರಿಗೆ ವಿಮಾನಗಳ ಹಾರಾಟ ಸಂಖ್ಯೆಯನ್ನು ಹೆಚ್ಚಿಸಿದ್ದು, ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಗಸ್ಟ್‌ನಲ್ಲಿ ಗಲ್ಫ್‌ ರಾಷ್ಟ್ರಗಳ ವಿವಿಧ ನಗರಗಳಿಗೆ ವಿಮಾನ ಹಾರಾಟವನ್ನು ಆರಂಭಿಸಿದೆ.

ಯುಎಇ ಸರ್ಕಾರವು ತನ್ನ ದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದ ಬಳಿಕ, ಇಂಡಿಗೋ ಸಂಸ್ಥೆ ಶಾರ್ಜಾಗೆ ವಿಮಾನಯಾನ ಪುನರಾರಂಭಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿಗೆ ವಿಮಾನ ಹಾರಾಟವನ್ನು ಪುನರಾರಂಭಿಸಿದೆ. ಇದೇ ವೇಳೆ ಭಾರತಾದ್ಯಂತ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇಂಡಿಗೋ ಹೈದಾರಾಬಾದ್‌ಗೆ ಹೆಚ್ಚುವರಿ ವಿಮಾನ ಹಾರಾಟ ಆರಂಭಿಸಿದೆ.

ಗಲ್ಫ್‌ ರಾಷ್ಟ್ರಗಳಿಗೆ ಸಂಚರಿಸಲು ಅಗತ್ಯವಿರುವ ರ‍್ಯಾಪಿಡ್‌ ಆರ್‌ಟಿಪಿಸಿಆರ್ ಸೌಲಭ್ಯವನ್ನು ಹೆಚ್ಚಿನ ವಿಮಾನ ನಿಲ್ದಾಣಗಳು ಅಳವಡಿಸಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಸುಧಾರಿಸುವ ನಿರೀಕ್ಷೆಯಿದೆ. ಅಪೋಲೋ ಡಯಾಗ್ನಾಸ್ಟಿಕ್ಸ್‌ನ ಸಹಯೋಗದೊಂದಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ರ‍್ಯಾಪಿಡ್‌ ಆರ್‌ಟಿಪಿಸಿಆರ್ ಸೌಲಭ್ಯ ಆರಂಭಿಸಲಾಗಿದೆ.

ಆಗಸ್ಟ್‌ನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ, ದುಬೈ, ತಿರುವನಂತಪುರ, ಮುಂಬೈ ಮತ್ತು ಕೊಯಮತ್ತೂರಿಗೆ ವಿಮಾನ ಯಾನ ನಡೆಸಿದೆ. ಇಂಡಿಗೋ ಹೈದರಾಬಾದ್ ಮತ್ತು ಶಾರ್ಜಾಕ್ಕೆ ಪ್ರತಿನಿತ್ಯದ ಯಾನ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.