ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಮತ್ತು 7ನೇ ತರಗತಿಗಳು ಆರಂಭ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 14:35 IST
Last Updated 20 ಸೆಪ್ಟೆಂಬರ್ 2021, 14:35 IST
ಸೋಮವಾರ ವಾಮಂಜೂರಿನ ತಿರುವೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳಲ್ಲಿ ಕುಳಿತು ಪಾಠ ಕೇಳಿದ ಮಕ್ಕಳು  –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌
ಸೋಮವಾರ ವಾಮಂಜೂರಿನ ತಿರುವೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳಲ್ಲಿ ಕುಳಿತು ಪಾಠ ಕೇಳಿದ ಮಕ್ಕಳು  –ಪ್ರಜಾವಾಣಿ ಚಿತ್ರ/ಇರ್ಷಾದ್‌ ಮಹಮ್ಮದ್‌   

ಮಂಗಳೂರು: ಕೋವಿಡ್ ಕಾರಣಕ್ಕೆ ಮನೆಯಲ್ಲಿ ಬಂಧಿಯಾಗಿ, ಮೊಬೈಲ್‌ನಲ್ಲಿ ಪಾಠ ಕೇಳುತ್ತಿದ್ದ ಮಕ್ಕಳು ಸೋಮವಾರ ಸಮವಸ್ತ್ರ ತೊಟ್ಟು, ಚೀಲ ಬೆನ್ನಿಗೇರಿಸಿಕೊಂಡು ಸಂಭ್ರಮದಿಂದ ಶಾಲೆಯೆಡೆಗೆ ಹೆಜ್ಜೆ ಹಾಕಿದರು.

ನಿಶ್ಚಲವಾಗಿದ್ದ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡು ಶಿಕ್ಷಕರ ಸಂತಸಕ್ಕೆ ಪಾರವೇ ಇರಲಿಲ್ಲ. ತಳಿರು–ತೋರಣಗಳಿಂದ ಶೃಂಗರಿಸಿ, ಹೂಮಳೆ ಗರೆದು, ಮಕ್ಕಳನ್ನು ಸ್ವಾಗತಿಸಿದರು. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ತಗ್ಗಿರುವ ಕಾರಣ 6 ಮತ್ತು 7ನೇ ಕ್ಲಾಸ್‌ಗಳಿಗೆ ಭೌತಿಕ ತರಗತಿ ಪ್ರಾರಂಭಿಸಲಾಗಿದೆ. ಪ್ರೌಢಶಾಲೆಗಳಲ್ಲಿ ಭೌತಿಕ ತರಗತಿಗಳು ಸೆ.17ರಿಂದ ಆರಂಭವಾಗಿವೆ. ಕೆಲ ಕಡೆಗಳಲ್ಲಿ ಮಕ್ಕಳೊಂದಿಗೆ ಪಾಲಕರು ಶಾಲೆಗೆ ಬಂದಿದ್ದು ಕಂಡುಬಂತು.

ಥರ್ಮಲ್ ಸ್ಕ್ಯಾನರ್‌ನಲ್ಲಿ ದೇಹದ ಉಷ್ಣತೆ ಪರೀಕ್ಷಿಸಿ, ಕೈಗೆ ಸ್ಯಾನಿಟೈಸರ್ ಹಾಕಿ ಮಕ್ಕಳನ್ನು ತರಗತಿ ಒಳಗೆ ಬರಮಾಡಿಕೊಳ್ಳಲಾಯಿತು. ಮಾಸ್ಕ್ ಧಾರಣೆ ಕಡ್ಡಾಯವಾಗಿತ್ತು. ಕುಡಿಯಲು ಬಿಸಿ ನೀರನ್ನು ತರುವಂತೆ ಸೂಚಿಸಲಾಯಿತು.

ADVERTISEMENT

‘6 ಮತ್ತು 7ನೇ ತರಗತಿಗಳಿಗೆ ಶೇ 90ರಷ್ಟು ಮಕ್ಕಳ ಹಾಜರಾತಿ ಇತ್ತು. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳು ಪ್ರಯಾಣದ ಅನಾನುಕೂಲದಿಂದ ಗೈರು ಹಾಜರಾಗಿದ್ದರು. 1ರಿಂದ 7ನೇ ತರಗತಿವರೆಗೆ ಭೌತಿಕ ತರಗತಿಗಳು ಇದ್ದಾಗ ಬಸ್ ವ್ಯವಸ್ಥೆ ಇರುತ್ತಿತ್ತು. ಶಾಲೆಗೆ ಬರಲು ಮಕ್ಕಳು ಉತ್ಸುಕರಾಗಿದ್ದರು. ಖುಷಿಯಿಂದ ಕುಳಿತು ಪಾಠ ಕೇಳಿದರು’ ಎಂದು ವಾಮಂಜೂರಿನ ತಿರುವೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗೋಪಾಲ ಯು ಪ್ರತಿಕ್ರಿಯಿಸಿದರು.

6 ಮತ್ತು 7ನೇ ತರಗತಿಗಳು ಬೆಳಗಿನಿಂದ ಮಧ್ಯಾಹ್ನದವರೆಗೆ ನಡೆದವು. ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ನಂತರ 8 ಮತ್ತು 9ನೇ ಕ್ಲಾಸಿನ ಭೌತಿಕ ತರಗತಿಗಳು, ಬೆಳಗಿನ ಹೊತ್ತು ಎಸ್ಸೆಸ್ಸೆಲ್ಸಿ ತರಗತಿಗಳು ನಡೆಯುತ್ತಿವೆ.

‘ಶಾಲೆಯಲ್ಲಿ ನೇರ ಪಾಠ’

‘ಮನೆಯಲ್ಲಿ ಕುಳಿತು ಆನ್‌ಲೈನ್ ಕ್ಲಾಸ್ ಕೇಳುವುದಕ್ಕಿಂತ ಶಾಲೆಗೆ ಬಂದು, ಸ್ನೇಹಿತೆಯರೊಡನೆ ಕುಳಿತು ಪಾಠ ಕೇಳುವುದು ಖುಷಿ. ಶಾಲೆಗೆ ಬಂದರೆ ಹೊಸತನ್ನು ಕಲಿಯುತ್ತೇವೆ. ಮನೆಯಲ್ಲಿದ್ದರೆ ಅಭ್ಯಾಸದಲ್ಲಿ ನಿರಾಸಕ್ತಿಯಾಗುತ್ತದೆ. ಆನ್‌ಲೈನ್‌ನಲ್ಲಿ ನೆಟ್‌ವರ್ಕ್ ಸಮಸ್ಯೆ. ಶಾಲೆಯಲ್ಲಿ ಟೀಚರ್ ನೇರವಾಗಿ ಪಾಠ ಮಾಡುತ್ತಾರೆ. ನೆಟ್‌ವರ್ಕ್ ಗೊಡವೆಯಿಲ್ಲ’ ಎಂದು ವಿದ್ಯಾರ್ಥಿನಿ ಅನುಷಾ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.