ADVERTISEMENT

ವಾರಾಂತ್ಯ ಅಂಗಡಿ ತೆರೆಯಲು ನಿರ್ಧಾರ

ಉಪ್ಪಿನಂಗಡಿ ವರ್ತಕ ಸಂಘದ ವಿಶೇಷ ಸಭೆ, ವ್ಯಾಪಾರಸ್ಥರ ಸಮಸ್ಯೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 4:01 IST
Last Updated 2 ಸೆಪ್ಟೆಂಬರ್ 2021, 4:01 IST
ಉಪ್ಪಿನಂಗಡಿ ವರ್ತಕ ಸಂಘದ ವಿಶೇಷ ಸಭೆ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಅಧ್ಯಕ್ಷತೆಯಲ್ಲಿ ನಡೆಯಿತು.
ಉಪ್ಪಿನಂಗಡಿ ವರ್ತಕ ಸಂಘದ ವಿಶೇಷ ಸಭೆ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಅಧ್ಯಕ್ಷತೆಯಲ್ಲಿ ನಡೆಯಿತು.   

ಉಪ್ಪಿನಂಗಡಿ: ಶನಿವಾರ ಮತ್ತು ಭಾನುವಾರದಂದು ಎಲ್ಲ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುವ ಮೂಲಕ ವಾರಾಂತ್ಯ ಕರ್ಫ್ಯೂ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ವರ್ತಕ ಸಂಘ) ನಿರ್ಣಯ ಅಂಗೀಕರಿಸಿದೆ.

ಬುಧವಾರ ಉಪ್ಪಿನಂಗಡಿ ಪೃಥ್ವಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.

ವಾರಾಂತ್ಯ ಕರ್ಫ್ಯೂ ನಿಯಮದಿಂದ ವರ್ತಕ ಸಮುದಾಯ ತೀವ್ರ ಸಂಕಷ್ಟಕ್ಕೆ ತುತ್ತಾಗಿದೆ. ವರ್ತಕ ಸಮುದಾಯದ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸದ ಕಾರಣ ಶನಿವಾರ ಮತ್ತು ಭಾನುವಾರದಂದು ವ್ಯಾಪಾರ ನಡೆಸಬೇಕು ಮತ್ತು ಸಂಘದ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಿಕೊಡಲು ನಿರ್ಣಯಿಸಲಾಯಿತು.

ADVERTISEMENT

ವಾರಾಂತ್ಯ ಕರ್ಫ್ಯೂ ದಿನ ಅಂಗಡಿ ವ್ಯವಹಾರ ನಡೆಸುವುದು, ದಂಡ ವಿಧಿಸಿದರೆ, ಪ್ರಕರಣ ಹಾಕಿದರೆ ಎಲ್ಲ ವರ್ತಕರು ಒಟ್ಟಾಗಿ ಎದುರಿಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಈ ವಿಚಾರದಲ್ಲಿ ಸಮಸ್ಯೆ ಉಂಟಾದರೆ ವರ್ತಕರು ತಕ್ಷಣ ಸಂಪರ್ಕಿಸಲು ವರ್ತಕರ ತಂಡವೊಂದನ್ನು ರಚಿಸಲಾಯಿತು.
ಸರ್ಕಾರಕ್ಕೆ ಆದಾಯ ತರುವ ಮದ್ಯವನ್ನು ಅವಶ್ಯಕ ವಸ್ತು ಎಂದು ಪರಿಗಣಿಸಿದಂತೆ ಎಲ್ಲ ವ್ಯಾಪಾರ ಮಳಿಗೆಗಳನ್ನು ಅವಶ್ಯಕ ವಸ್ತುಗಳ ಮಾರಾಟ ಮಳಿಗೆ ಎಂದು ಪರಿಗಣಿಸಿ ವಾರದ ಎಲ್ಲ ದಿನಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲೇ ಬೇಕು ಎಂದಾದರೆ ವರ್ತಕ ಸಮುದಾಯಕ್ಕೆ ಸರ್ಕಾರದಿಂದ ಮಾಸಿಕ ಪರಿಹಾರ ಧನವನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಯಿತು.

ಉಪಾಧ್ಯಕ್ಷ ಶಬ್ಬೀರ್ ಕೆಂಪಿ, ಸದಸ್ಯರಾದ ಹಾರೂನ್ ರಶೀದ್ ಅಗ್ನಾಡಿ, ಯು.ಟಿ. ತೌಸೀಫ್, ಕೈಲಾರ್ ರಾಜಗೋಪಾಲ್ ಭಟ್, ಯು.ಎಲ್. ಉದಯಕುಮಾರ್, ಝಕರಿಯಾ ಕೊಡಿಪ್ಪಾಡಿ, ಜಲೀಲ್ ಮುಕ್ರಿ, ಇಸ್ಮಾಯಿಲ್ ಇಕ್ಬಾಲ್, ಅಮೀನ್ ಅಹ್ಸನ್ ಮಾತನಾಡಿದರು.

ಸುರೇಶ್ ಕಿಣಿ, ನಿತ್ಯಾನಂದ ಕಿಣಿ, ಜಯಪ್ರಕಾಶ್, ಕೆ.ಜೆ. ವಿಶ್ವನಾಥ, ಸಿದ್ದಿಕ್ ಕೆಂಪಿ ಇದ್ದರು.

ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ಸ್ವಾಗತಿಸಿದರು. ಯು.ಟಿ. ಇರ್ಷಾದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.