ADVERTISEMENT

ಅಕ್ಷರ ಕಲಿತು ಪತಿಯ ಕುಡಿತ ಬಿಡಿಸಿದೆ

ವಿಶ್ವ ಸಾಕ್ಷರತಾ ದಿನಾಚರಣೆಯ ಸಂವಾದದಲ್ಲಿ ಕಮಲಾ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 16:51 IST
Last Updated 7 ಸೆಪ್ಟೆಂಬರ್ 2021, 16:51 IST
ಮುಡಿಪುವಿನಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಮಂಗಳವಾರ ನಡೆಯಿತು.
ಮುಡಿಪುವಿನಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಮಂಗಳವಾರ ನಡೆಯಿತು.   

ಮುಡಿಪು: ‘ಪತಿಯ ಕುಡಿತದ ಚಟ ಮಿತಿ ಮೀರಿತ್ತು. ಇಬ್ಬರು ಮಕ್ಕಳನ್ನು ಸಾಕುವ ಜವಾಬ್ದಾರಿಯೂ ನನ್ನ ಮೇಲೆ ಇತ್ತು. ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದಾಗ ಸಾಕ್ಷರತೆ ಮೂಲಕ ಅಕ್ಷರ ಜ್ಞಾನ ಪಡೆದು ಪತಿಯನ್ನೂ ಕುಡಿತದಿಂದ ಬಿಡಿಸಿದೆ. 2001ರಿಂದ ಇದುವರೆಗೂ ಅವರು ಮತ್ತೆ ಕುಡಿತದ ಚಟಕ್ಕೆ ಬೀಳಲಿಲ್ಲ. ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯೂ ಆದೆ. ಇದೆಲ್ಲ ಸಾಧ್ಯವಾದದ್ದು ಸಾಕ್ಷರತೆಯ ಮೂಲಕ’ ಎಂದು ಮೋಂಟುಗೋಳಿಯ ಆದಿವಾಸಿ ಸಮುದಾಯದ ಮಹಿಳೆ ಕಮಲಾ ಹೇಳುವಾಗ ಅವರಲ್ಲಿ ಹೆಮ್ಮೆಯ ಭಾವ.

ಮುಡಿಪು ಜನಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಕೋವಿಡ್ ಕೌನ್ಸೆಲಿಂಗ್ ಕೇಂದ್ರದಲ್ಲಿ ಮಂಗಳವಾರ ವಿಶ್ವ ಸಾಕ್ಷರತಾ ದಿನ-2021ರ ಪ್ರಯುಕ್ತ ‘ಸಾಕ್ಷರತೆ, ಸ್ವಾತಂತ್ರ್ಯ, ಸಂವಿಧಾನ,‌ ಸುಗ್ರಾಮ -ಸ್ವರಾಜ್ಯ ಸಾಕಾರ, ಸಂವಾದ-ಸಂಕಲ್ಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಶೋದಾ ಮಾತನಾಡಿ, ‘ಶಾಲೆಯ ಮೆಟ್ಟಿಲು ಏರಿರಲಿಲ್ಲ. ಆದರೆ, ಸಾಕ್ಷರತಾ ಆಂದೋಲನದ ಮೂಲಕ ಅಕ್ಷರ ಕಲಿತೆ. ಆ ಸಮಯದಲ್ಲಿ ಪತಿ ಕುಡಿತದ ಚಟ ಅಂಟಿಸಿಕೊಂಡಿದ್ದರು. ಅಕ್ಷರ ಕಲಿತ ಮೇಲೆ ಮದ್ಯವರ್ಜನ ಶಿಬಿರಕ್ಕೆ ಸೇರಿಸಿ ಕುಡಿತ ಬಿಡಿಸಿದೆ. ಬಳಿಕ, ಶಾಲೆಯಿಂದ ಹೊರಗುಳಿದ 172 ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸಿದೆ’ ಎಂದರು.

ADVERTISEMENT

‘ಶರಾಬು ಅಂಗಡಿಗೆ ಬೆಂಕಿ ಹಚ್ಚಿದೆವು’

‘ಅಕ್ಷರ‌ ಕಲಿತ ಬಳಿಕ ಊರಿನ ಜನರನ್ನು ಕುಡಿತದಿಂದ‌ ಮುಕ್ತಿ ನೀಡಲು ಯೋಚಿಸಿದೆ. ಶರಾಬು ಅಂಗಡಿ ಮುಚ್ಚಿಸಲು ಠಾಣೆಗೆ, ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನ ಆಗಲಿಲ್ಲ.‌ ಇದರಿಂದ ಬೇಸತ್ತು ನಾವು 150ರಷ್ಟು ಮಹಿಳೆಯರು ಸೇರಿ ಅಂಗಡಿಗೆ ಬೆಂಕಿ ಹಚ್ಚಿದೆವು. ಮರುದಿನ ಮತ್ತೆ ಅಂಗಡಿ‌ ತೆರೆದಾಗ ಗಂಡಸರೂ ಕೈಜೋಡಿಸಿ ಮತ್ತೆ ಬೆಂಕಿ ಹಚ್ಚಿದೆವು’ ಎಂದು ನವಸಾಕ್ಷರೆ ಸುಮತಿ ಬೆಳ್ತಂಗಡಿ ಹೇಳಿದರು.

ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಸಂವಾದ ನಡೆಸಿಕೊಟ್ಟರು. ನಾರಾಯಣ ಗೋಳಿಕಟ್ಟೆ, ಚಂದ್ರಹಾಸ ಕಣಂತೂರು, ಮಾಚುಲ‌ ಮಡಪ್ಪಾಡಿ, ಪತ್ರಕರ್ತ ಗುರುವಪ್ಪ ಬಾಳೇಪುಣಿ, ಉದ್ಯಮಿ ರಾಧಾಕೃಷ್ಣ ರೈ ಮಾತನಾಡಿದರು.

ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಝಿಯಾ, ಸದಸ್ಯ ಜನಾರ್ದನ ಕುಲಾಲ್, ಬಾಪು ಘನ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಇಬ್ರಾಹಿಂ, ಕಾರ್ಯದರ್ಶಿ ಜಯಲಕ್ಷ್ಮಿ ದೊಡ್ಡಪತ್ತಾರು, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸುಧಾಕರ್, ವೃತ್ತಿ ಕೌಶಲ ಕೇಂದ್ರದ‌ ಪ್ರಾಂಶುಪಾಲ ಶರತ್ ಕುಮಾರ್, ಉದ್ಯಮಿ ರಮೇಶ್ ಶೇಣವ, ನಾಗೇಶ್ ಕಲ್ಲೂರು, ಉದ್ಯಮಿ ರವಿರಾಜ್ ರೈ ದೇರಳಕಟ್ಟೆ, ಇಸ್ಮಾಯಿಲ್ ಬಾಳೇಪುಣಿ‌ ಉಪಸ್ಥಿತರಿದ್ದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.