ADVERTISEMENT

ತರಳಬಾಳು ಮಠಕ್ಕೆ 200 ಕ್ವಿಂಟಲ್ ಅಕ್ಕಿ ಸಮರ್ಪಣೆ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಎಸ್‌ಎಸ್‌ಎಂ ಹುಟ್ಟು ಹಬ್ಬದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:41 IST
Last Updated 22 ಸೆಪ್ಟೆಂಬರ್ 2021, 4:41 IST
ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಿಂದ 200 ಕ್ವಿಂಟಲ್ ಅಕ್ಕಿಯನ್ನು ಸಿರಿಗೆರೆ ಮಠಕ್ಕೆ ಕಳುಹಿಸಿ ಕೊಡಲಾಯಿತು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೂ ಇದ್ದರು.
ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ದಾವಣಗೆರೆಯ ಕಲ್ಲೇಶ್ವರ ಮಿಲ್ ಆವರಣದಿಂದ 200 ಕ್ವಿಂಟಲ್ ಅಕ್ಕಿಯನ್ನು ಸಿರಿಗೆರೆ ಮಠಕ್ಕೆ ಕಳುಹಿಸಿ ಕೊಡಲಾಯಿತು. ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೂ ಇದ್ದರು.   

ದಾವಣಗೆರೆ: ಎಸ್.ಎಸ್. ಮಲ್ಲಿಕಾರ್ಜುನ ಅವರ ಅಭಿಮಾನಿಗಳ ಬಳಗದ ವತಿಯಿಂದ ತರಳಬಾಳು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ 200 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮರ್ಪಿಸಿದರು.

ನಗರದ ಕಲ್ಲೇಶ್ವರ ಮಿಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಕ್ಕಿಯನ್ನು ಸಮರ್ಪಿಸಲಾಯಿತು.

ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ‘ಪ್ರತಿವರ್ಷವೂ ದಾವಣಗೆರೆ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದ ಭಕ್ತರು ಅಕ್ಕಿ ಸಮರ್ಪಿಸುತ್ತಾ ಬಂದಿದ್ದರು. ಈ ಬಾರಿಯೂ ನೀಡುತ್ತಿದ್ದಾರೆ. ತರಳಬಾಳು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಕೋವಿಡ್‌ ಕಾರಣದಿಂದ ಸರಳವಾಗಿ ಆಚರಿಸಲಾಗುವುದು. ಆದರೂ ಇಲ್ಲಿನ ಭಕ್ತರು 200 ಕ್ವಿಂಟಲ್ ಅಕ್ಕಿಯನ್ನು ಮಠದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಮರ್ಪಿಸಿರುವುದು ಶ್ಲಾಘನೀಯ’ ಎಂದು ಪ್ರಶಂಶಿಸಿದರು.

ADVERTISEMENT

ಎಸ್.ಎಂ.ಸಮರ್ಥ, ಎಸ್.ಎಸ್.ಮಲ್ಲಿಕಾರ್ಜುನ ಅವರ ಅಭಿಮಾನಿಗಳ ಬಳಗದ ಮುದೇಗೌಡ್ರ ಗಿರೀಶ್, ಬಿ.ಕರಿಬಸಪ್ಪ, ಬಿ.ಕೆ. ಪರಶುರಾಮ್, ಜಿ.ಎಸ್. ಮಂಜುನಾಥ್, ಶ್ಯಾಗಲೆ ಜಯಕುಮಾರ್, ಕಾಡಜ್ಜಿ ಚಂದ್ರಣ್ಣ, ಬೂದಾಳ್ ಬಾಬು, ಕೆ.ಎಸ್. ಬಸವಂತಪ್ಪ, ಎಚ್.ಆನಂದಪ್ಪ, ಕಡ್ಲೆಬಾಳು ಮರುಳಸಿದ್ದೇಶ್, ಬೇವಿನಹಳ್ಳಿ ಯಶವಂತಗೌಡ, ಬೇತೂರು ಬಸವರಾಜಯ್ಯ, ಮಂಜುನಾಯ್ಕ, ಕರಿಬಸಪ್ಪ ಯರಗುಂಟೆ, ಕಲಪನಹಳ್ಳಿ ಚೇತನಕುಮಾರ್ ಅವರೂ ಇದ್ದರು.

ಮಿಲ್ಲತ್‌ ಶಾಲೆಯಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ 54ನೇ ಜನ್ಮದಿನದ ಅಂಗವಾಗಿ ನಗರದ ಮಿಲ್ಲತ್ ಶಾಲೆಯಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಯಿತು.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಮಿಲ್ಲತ್ ಸಂಸ್ಥೆಯ ಗೌರವ ಕಾರ್ಯದರ್ಶಿ ಸೈಯದ್ ಸೈಫುಲ್ಲ ಉದ್ಘಾಟಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಹಿರಿಯ ಕಾಂಗ್ರೆಸ್ ಮುಖಂಡ ಸಿ.ಆರ್ ನಸೀರ್ ಅಹ್ಮದ್, ಪಾಲಿಕೆ ಸದಸ್ಯ ಕೆ. ಚಮನ್ ಸಾಬ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಇಂಟಕ್ ಅಧ್ಯಕ್ಷ ಮಂಜುನಾಥ್, ಅಲ್ತಾಫ್, ಲಿಯಾಖತ್ ಅಲಿ, ಮೊಹಮ್ಮದ್ ಜಿಕ್ರಿಯಾ, ಸುರೇಶ್ ಎಂ. ಜಾಧವ್, ರಂಜಿತ್, ರಿಯಾಜುದ್ದೀನ್, ತಿಪ್ಪೇಶ್, ಶಿಲ್ಪಾ, ಜಯಾ ಶಾಮನೂರು, ಮಹಬೂಬ್ ಬಾಷಾ, ವಿನೋದ್, ಶಾಲಾ ಸಿಬ್ಬಂದಿ ಇದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

‘ನಾನು ಚುನಾವಣೆ ಎದುರಿಸಲು ಸಿದ್ಧ’

‘ನಾನು ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ. ಚುನಾವಣೆ ಎದುರಿಸಲು ದಿನದ 24 ಗಂಟೆಯೂ ಸಿದ್ಧನಿದ್ದೇನೆ’ ಎಂದು ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಅಲೆಯಿಂದಲೇ ಕೆಲವರು ಗೆದ್ದಿರುವುದು ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರಿಯಾಗಿಯೇ ಹೇಳಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಇದು ಜಾಸ್ತಿ ಸಹಾಯ ಆಗಲ್ಲ ಎಂಬ ಮಾತು ಕೂಡ ಸತ್ಯ ಎಂದರು.

‘ಜನರಿಗೆ, ರೈತರಿಗೆ ಅನುಕೂಲವಾಗುವ ಯಾವುದೇ ನಿರ್ಣಯವನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ತೆಗೆದುಕೊಂಡಿಲ್ಲ. ಎರಡು ದಿನ ಕೇವಲ ಸಭೆ ಮಾಡಿದರು. ದುಡ್ಡಿತ್ತು, ಬಂದು ಖರ್ಚು ಮಾಡಿದರು. ಊಟ ಮಾಡಿದ್ರು ಹೋದ್ರು. ಈ ಕಾರ್ಯಕಾರಿಣಿಯಿಂದ ಏನು ಪ್ರಯೋಜನ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಇದ್ದಲ್ಲಿಯೇ ಹಾರೈಸಿ: ಹುಟ್ಟು ಹಬ್ಬಕ್ಕೆ ಹಾರೈಸುವವರು ಮನೆಗೆ ಬಾರದೇ ಎಲ್ಲಿದ್ದಿರೋ ಅಲ್ಲಿಂದಲೇ ಹಾರೈಸಿ. ಈ ಮೂಲಕ ಎಲ್ಲರೂ ಕೊರೊನಾ ನಿಯಮಗಳನ್ನು ಪಾಲನೆ ಮಾಡೋಣ ಎಂದು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು, ಅಭಿಮಾನಗಳಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.