ADVERTISEMENT

ಸಾಮಾಜಿಕ ನ್ಯಾಯಕ್ಕೆ ಸದಾಶಿವ ವರದಿ ಪೂರಕ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 4:56 IST
Last Updated 22 ಸೆಪ್ಟೆಂಬರ್ 2021, 4:56 IST
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹರಿಹರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹರಿಹರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.   

ಹರಿಹರ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಪೂರಕವಾಗಿದೆ. ಈ ವರದಿಯಿಂದ ಪರಿಶಿಷ್ಟ ಜಾತಿ ಪಟ್ಟಿಯ ಎಲ್ಲಾ ಸಮಾಜಗಳಿಗೂ ನ್ಯಾಯ ದೊರೆಯಲಿದೆ ಎಂದು ನಗರಸಭೆ ಸದಸ್ಯ ಹಾಗೂ ಮಾದಿಗ ಸಮಾಜದ ಮುಖಂಡ ಎನ್. ರಜನಿಕಾಂತ್ ಅಭಿಪ್ರಾಯಪಟ್ಟರು.

ನಗರದ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಂಗಳವಾರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳಿದ್ದು, ಅದರಲ್ಲಿ 99 ಜಾತಿಗೆ ಅನ್ಯಾಯವಾಗುತ್ತದೆ ಎಂದು ಕೆಲ ಸಹೋದರ ಸಮಾಜದ ಮುಖಂಡರು ತಪ್ಪು ಮಾಹಿತಿಯಿಂದ ಆರೋಪಿಸುತ್ತಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ವರದಿಯ ಸಂಪೂರ್ಣ ಅಧ್ಯಯನ ನಡೆಸಿ ನಂತರ, ಹೇಳಿಕೆ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ವರದಿಯಲ್ಲಿ ಜನಸಂಖ್ಯೆೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸುವಂತೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸದೇ ಪರಿಶಿಷ್ಟ ಜಾತಿ ಪಟ್ಟಿಯಿಂದ ಜಾತಿಯ ಹೆಸರುಗಳನ್ನು ತೆಗೆದುಹಾಕಲಾಗುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ವರದಿಯ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವರದಿಯಿಂದ ಯಾವುದೇ ಜಾತಿಯನ್ನು ಪಟ್ಟಿಯಿಂದ ಕೈ ಬಿಡುವುದಿಲ್ಲ. ಸುಮಾರು ಎರಡು ದಶಕಗಳ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮಾದಿಗ ಸಮಾಜದ ಮುಖಂಡ ಸಿ. ನಾಗರಾಜ್ ಮಾತನಾಡಿ, ‘ಸಹೋದರ ಸಮಾಜದ ಕೆಲ ಮುಖಂಡರು ವರದಿ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ನ್ಯಾ.ಸದಾಶಿವ ಅವರ ಭಾವಚಿತ್ರಗಳನ್ನು ಸುಡುವುದು ಮತ್ತು ಹರಿದು ಹಾಕುವುದು ಸಂವಿಧಾನ ಬಾಹಿರ. ಸರ್ಕಾರ, ವರದಿಯ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೂ ತಾಳ್ಮೆಯಿಂದ ಇರಬೇಕು’ ಎಂದು ಮನವಿ ಮಾಡಿದರು.

ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ವೈ.ಬಿ. ಪ್ರಭಾಕರ್ ಮಾತನಾಡಿದರು. ಮುಖಂಡರಾದ ಕೊತ್ವಾಲ್ ಹನುಮಂತಪ್ಪ, ಜಿ. ಮಂಜುನಾಥ್ ಕೊಪ್ಪಳ, ಎಚ್. ದೇವೇಂದ್ರಪ್ಪ, ಎಸ್.ಪಿ. ರವಿಚಂದ್ರ, ಕೃಷ್ಣ, ಹೋಟೆಲ್ ಚಂದ್ರಪ್ಪ, ದಸಂಸ ತಾಲ್ಲೂಕು ಸಂಚಾಲಕ ಆರ್. ಶ್ರೀನಿವಾಸ್, ಚಿದಾನಂದ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.