ADVERTISEMENT

ಮೀಸಲಾತಿಯ ಒಲವು..ಇಚ್ಛಾಶಕ್ತಿಯಿಂದ ಗೆಲುವು...

ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ: ‘ಪ್ರಜಾವಾಣಿ’ ಸಂವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 5:45 IST
Last Updated 21 ಮಾರ್ಚ್ 2023, 5:45 IST
ದಾವಣಗೆರೆಯ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‍ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ನಾಯಕಿಯರು.
ದಾವಣಗೆರೆಯ ‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ‍ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ನಾಯಕಿಯರು.   

ದಾವಣಗೆರೆ: ‘ಮಹಿಳೆಯರಿಗೆ ಶಾಸನಸಭೆಯಲ್ಲಿ ಹೆಚ್ಚಿನ ಮೀಸಲಾತಿ ಬೇಕೇ ಬೇಕು. ಮಹಿಳೆಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕರೆ ಕುಟುಂಬ, ಮಕ್ಕಳನ್ನು ಪೋಷಿಸಿದಂತೆ ಸಮಾಜವನ್ನೂ ಪೋಷಿಸಬಲ್ಲಳು. ಸಮಾಜವನ್ನು ಸರಿದಾರಿಗೆ ತರಬಲ್ಲಳು’

ಇದು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಜಿಲ್ಲಾ ಘಟಕದ ಅಧ್ಯಕ್ಷೆಯರ ಒಕ್ಕೊರಲಿನ ಹಾಗೂ ಪಕ್ಷಾತೀತ ಹೇಳಿಕೆ.

‘ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ’ ವಿಷಯದ ಕುರಿತು ‘ಪ್ರಜಾವಾಣಿ’ ಸೋಮವಾರ ಏರ್ಪಡಿಸಿದ್ದ ಫೇಸ್‌ಬುಕ್‌ ಚರ್ಚೆಯಲ್ಲಿ ಮಹಿಳಾ ಮೀಸಲಾತಿ ವಿಷಯ ಮಾತ್ರವಲ್ಲದೆ, ಇತರೆ ರಾಜಕೀಯ ವಿಷಯಗಳ ಕುರಿತು ಅವರು ಗಂಭೀರ ಚರ್ಚೆ ನಡೆಸಿದರು.

ADVERTISEMENT

ಕಾಂಗ್ರೆಸ್‌ನ ಅನಿತಾಬಾಯಿ ಮಾಲತೇಶ್‌, ಬಿಜೆಪಿಯ ಮಂಜುಳಾ ಮಹೇಶ್‌, ಜೆಡಿಎಸ್‌ ಶೀಲಾ ಕುಮಾರ್‌ ಮಹಿಳೆಯರಿಗೆ ರಾಜಕೀಯ ಆದ್ಯತೆ ದೊರೆಯಬೇಕು ಎಂದು ಪಕ್ಷಾತೀತವಾಗಿ ಹಕ್ಕೊತ್ತಾಯ ಮಂಡಿಸಿದರಲ್ಲದೆ, ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಬೆಂಬಲ ಇಲ್ಲದಿರುವ ಕುರಿತು ಮೂವರೂ ಅಸಮಾಧಾನ ಹೊರಹಾಕಿದರು. ತಮ್ಮತಮ್ಮ ಪಕ್ಷಗಳು ಮಹಿಳೆಯರಿಗೆ ಆದ್ಯತೆ ನೀಡುತ್ತಿವೆ ಎಂಬುದನ್ನು ಸಮರ್ಥಿಸಿಕೊಳ್ಳುವುದನ್ನೂ ಅವರು ಮರೆಯಲಿಲ್ಲ.

ಮಹಿಳೆಯರಿಗೆ ಪುರುಷರ ಪ್ರೋತ್ಸಾಹ ಅಷ್ಟಕಷ್ಟೇ ಎಂಬುದನ್ನೂ, ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭೆ, ಲೋಕಸಭೆಯಲ್ಲಿ ಅಧಿಕಾರ ಸಿಕ್ಕಾಗಲೂ ಪತಿ ಅಥವಾ ಮನೆಯವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬುದನ್ನೂ ಅವರು ಮುಕ್ತ ಮನಸ್ಸಿನಿಂದಲೇ ಒಪ್ಪಿಕೊಂಡರು. ಈ ಮನಸ್ಥಿತಿ ಬದಲಾಗಬೇಕು ಎಂಬ ಆಶಯ ವ‌್ಯಕ್ತಪಡಿಸಿದರು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಮಂಡನೆಗೆ ಮಹಿಳೆಯರಂತೆಯೇ ಪುರುಷ ರಾಜಕಾರಣಿಗಳೂ ಇಬ್ಬರೂ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಅನಕ್ಷರತೆ, ಕೌಟುಂಬಿಕ ಒತ್ತಡ:

ಮಹಿಳೆಯರು ಅನಕ್ಷರತೆಯ ಕಾರಣಕ್ಕೆ ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಮಕ್ಕಳ ಪಾಲನೆ, ಮನೆಯ ಜವಾಬ್ದಾರಿ, ಕುಟುಂಬದಿಂದ ಸಿಗದ ಪ್ರೋತ್ಸಾಹ.. ಹೀಗೆ ಹಲವು ಕಾರಣಕ್ಕೆ ಮಹಿಳೆಯರಲ್ಲಿ ಹಿಂಜರಿಕೆ ಇದೆ. ಅವರೇ ಮುಂದೆ ಬರಬೇಕು ಎಂಬ ಪ್ರಶ್ನೆಯನ್ನು ಬಿಜೆಪಿಯ ಮಂಜುಳಾ, ಕಾಂಗ್ರೆಸ್‌ನ ಅನಿತಾಬಾಯಿ ಎತ್ತಿದರು. ಇದು ಬದಲಾಗಬೇಕು ಎಂಬ ಒತ್ತಾಯವನ್ನೂ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮುರಳಿ, ಕೆಪಿಸಿಸಿ ವಕ್ತಾರರಾದ ನಾಗರತ್ನಾ ಮಲ್ಲೇಶಪ್ಪ, ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಷ್ಮಾ ಪಾಟೀಲ್‌, ಜೆಡಿಎಸ್ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷೆ ಲಕ್ಷ್ಮೀ ರಾಜಾಚಾರ್‌, ಜೆಡಿಎಸ್‌ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಧನಂಜಯ ಡಿ.ಆರ್‌., ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪುಷ್ಪಾ ವಾಲಿ, ಭಾಗ್ಯ ಪಿಸಾಳೆ ಇದ್ದರು. ‘ಪ್ರಜಾವಾಣಿ’ ಉಪ ಸಂಪಾದಕಿ ಅನಿತಾ ಎಚ್‌. ನಿರ್ವಹಿಸಿದರು.

ಕಾರ್ಯಾಗಾರಗಳು ಹೆಚ್ಚು ನಡೆಯಲಿ

ರಾಜಕಾರಣದಲ್ಲಿ ಮಹಿಳೆಯರು ಮುಂದೆ ಬರಲು ಅವರಿಗೆ ತರಬೇತಿ ಅಗತ್ಯವಿದೆ ಎಂದು ಮೂವರೂ ನಾಯಕಿಯರು ಒತ್ತಾಯಿಸಿದರು.

ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡರೂ ಕೆಲವು ಮಹಿಳೆಯರು ಮಾತನಾಡುವುದಕ್ಕೆ ಹಿಂಜರಿಯುತ್ತಾರೆ. ಅಂತಹ ಮಹಿಳೆಯರಿಗೆ ತರಬೇತಿ ಅಗತ್ಯವಿದೆ ಎಂದು ಅನಿತಾಬಾಯಿ ಹೇಳಿದರು. ಇದಕ್ಕೆ ದನಿಗೂಡಿಸಿದ ಶೀಲಾ ಕುಮಾರ್‌, ‘ನಮ್ಮ ಪಕ್ಷದಲ್ಲಿ ತಿಂಗಳಿಗೊಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

‘ತರಬೇತಿ ನೀಡುವ ನಿಟ್ಟಿನಲ್ಲಿ ಬಿಜೆಪಿಯಲ್ಲೂ ಕಾರ್ಯಕ್ರಮ ರೂಪಿಸಲಾಗುತ್ತಿದೆ’ ಎಂದು ಮಂಜುಳಾ ಹೇಳಿದರು.

ಮಸೂದೆ ಮಂಡನೆಗೆ ಇಚ್ಛಾಶಕ್ತಿ ಅಗತ್ಯ

ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಮಸೂದೆ ಮಂಡನೆಗೆ ಪ್ರಮುಖ ರಾಜಕಾರಣಿಗಳು ಇಚ್ಛಾಶಕ್ತಿ ತೋರಬೇಕು ಎಂದು ಬಿಜೆಪಿಯ ಮಂಜುಳಾ ಹೇಳಿದರು. ಇದಕ್ಕೆ ಅನಿತಾಬಾಯಿ, ಶೀಲಾ ಕುಮಾರ್ ದನಿಗೂಡಿಸಿದರು.

ಮಹಿಳೆ ರಾಜಕೀಯಕ್ಕೆ ಬರದಿರಲು ಹಣ‌‌ ಬಲದ ಕೊರತೆ, ಕುಟುಂಬದ ಜವಾಬ್ದಾರಿಯೂ ಕಾರಣ. ಕುಟುಂಬದಲ್ಲಿ ಪುರುಷರೊಬ್ಬರು ರಾಜಕೀಯದಲ್ಲಿದ್ದರೆ ಮಹಿಳೆಯನ್ನು ಮೂಲೆಗುಂಪು ಮಾಡುವ ಮನಸ್ಥಿತಿ ಇದೆ. ಹಿಂದೆ ಅವಿಭಕ್ತ ಕುಟುಂಬಗಳು ಅಸ್ತಿತ್ವದಲ್ಲಿದ್ದಾಗ ಮನೆಯ ಇತರೆ ಸದಸ್ಯರು ಜವಾಬ್ದಾರಿ ಹಂಚಿಕೊಳ್ಳುತ್ತಿದ್ದರು. ಅದರಿಂದ ಹಲವರು ರಾಜಕೀಯಕ್ಕೆ ಬರಲು ಸಹಕಾರಿಯಾಯಿತು. ಆದರೆ, ಈಗ ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಕಾರಣದಿಂದ ಮಹಿಳೆಗೆ ಬೆಂಬಲ ಸಿಗುತ್ತಿಲ್ಲ‘ ಎಂದು ಮಂಜುಳಾ ವಾಸ್ತವ ತೆರೆದಿಟ್ಟರು.

ಚರ್ಚೆಯಲ್ಲಿ ಕೇಳಿಬಂದದ್ದು..

 ಮೀಸಲಾತಿ ಮಸೂದೆ ಮಂಡನೆಗೆ ರಾಜಕೀಯ ಮುಖಂಡರು ಆಸಕ್ತಿ ತೋರುತ್ತಿ‌ಲ್ಲ. ಪಕ್ಷದ ಒಳಗೇ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು. ಆದರೆ ಯಾರೂ ಮುಂದೆ ಬರುತ್ತಿಲ್ಲ. ಸ್ಪರ್ಧೆ ಮಾಡುವವರೇ ಇಲ್ಲ. ಮಹಿಳೆಯರು ಮುಂದೆ ಬಂದರೆ ಬಿಜೆಪಿಯಲ್ಲಿ ಅವಕಾಶ ಇದೆ ಎಂದು ಮಂಜುಳಾ ಮಹೇಶ್‌ ಹೇಳಿದರು.ಹೆಣ್ಣು ಮಕ್ಕಳು ಹೊರಗಡೆ ಬಂದು ಹೇಗೆ ಕೆಲಸ ಮಾಡುತ್ತಾರೆ, ಗೆಲ್ಲುವ ಮಾನದಂಡ ಎಲ್ಲವನ್ನೂ ನೋಡಬೇಕಾಗುತ್ತದೆ. ಜೆಡಿಎಸ್‌ 10 ಮಹಿಳೆಯರಿಗೆ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ನೀಡುತ್ತಿದೆ ಎಂದು ಶೀಲಾ ಕುಮಾರ್‌ ಹೇಳಿದರು. ‘ನಮ್ಮ ಪಕ್ಷದಲ್ಲೂ ಅವಕಾಶ ಇದೆ. ನಾವೂ ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರಲು ಪ್ರೇರೇಪಿಸಬೇಕು’ ಎಂದು ಅನಿತಾಬಾಯಿ ಹೇಳಿದರು.

 ಜಿಲ್ಲೆಯಿಂದ ಮಹಿಳೆಯರಿಗೆ ಜೆಡಿಎಸ್‌ನಿಂದ ಎರಡು ಟಿಕೆಟ್ ಕೇಳಿದ್ದೇವೆ. ಮಾಯಕೊಂಡದಿಂದ ಶೀಲಾ ನಾಯಕ್‌, ದಾವಣಗೆರೆ ಉತ್ತರ ಕ್ಷೇತ್ರದಿಂದ ನಾನು ಆಕಾಂಕ್ಷಿ’ ಎಂದು ಶೀಲಾ ಕುಮಾರ್‌ ಹೇಳಿದರು. ‘ಆಕಾಂಕ್ಷಿಗಳು ಕಡಿಮೆ ಇದ್ದಾರೆ. ಉತ್ತರಕ್ಕೆ ಸ್ಪರ್ಧೆ ಮಾಡುತ್ತೇವೆ ಅಂದವರು ಹಿಂದೆ ಸರಿದಿದ್ದಾರೆ. ಇನ್ನೊಬ್ಬರ ಹೆಸರು ಕೇಳಿ ಬರುತ್ತಿದೆ‘ ಎಂದು ಮಂಜುಳಾ ಉತ್ತರಿಸಿದರು.ಹಲವು ಆಕಾಂಕ್ಷಿಗಳು ಇದ್ದಾರೆ. ಸವಿತಾಬಾಯಿ ಮಲ್ಲೇಶ ನಾಯ‌್ಕ ಮಾತ್ರ ಅರ್ಜಿ ಹಾಕಿದ್ದಾರೆ ಎಂದು ಅನಿತಾಬಾಯಿ ಹೇಳಿದರು.

ಶಾಸನ ಸಭೆಯಲ್ಲಿ ಪ್ರಾತಿನಿಧ್ಯ ಸಿಕ್ಕರೆ ಮಹಿಳೆಯರು ಸಮರ್ಥವಾಗಿ ನಿರ್ವಹಿಸುತ್ತಾರೆ. ಯಾವ ಯೋಜನೆ ಬೇಕು ಎಂಬ ಅರಿವು ಅವರಿಗಿದೆ. ಅಧಿಕಾರ ಸಿಕ್ಕರೆ ಎಲ್ಲರಿಗೂ ಸಮಪಾಲು ನೀಡುತ್ತಾರೆ ಎಂದು ಮಂಜುಳಾ ಅಭಿಪ್ರಾಯಪಟ್ಟರು. ಮನೆ ಹಾಗೂ ಹೊರಗಡೆಯ ಕೆಲಸವನ್ನೂ ಮಹಿಳೆ ನಿಭಾಯಿಸಬಲ್ಲಳು. ರಾಜಕೀಯ ಮೀಸಲಾತಿ ಸಿಗಲೇಬೇಕು ಎಂದು ಅನಿತಾಬಾಯಿ ಒತ್ತಾಯಿಸಿದರು. ಮನೆಯ ಕಷ್ಟವೇ ಹೊರಗೂ ಇರುತ್ತದೆ ಎಂಬುದು ಮಹಿಳೆಯರಿಗೆ ತಿಳಿದಿದೆ. ಹೆಂಗರುಳಿನ ‌ಕಾರಣ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶೀಲಾ ಕುಮಾರ್ ಸಮರ್ಥಿಸಿಕೊಂಡರು.

ಕಾವೇರಿದ ಚರ್ಚೆಯಲ್ಲಿ ಕೇಳಿಬಂದ ಸ್ವಾರಸ್ಯ

ಎಚ್‌.ಡಿ. ಕುಮಾರಸ್ವಾಮಿ ಅವರದು ತಾಯಿ ಹೃದಯ. ಮಹಿಳೆಯರಿಗೆ ಪಕ್ಷದಲ್ಲಿ ಆದ್ಯತೆ ಇದೆ. ಪ್ರಾದೇಶಿಕ ಪಕ್ಷದಿಂದ ಮಹಿಳೆಯರ ಅಭಿವೃದ್ಧಿ ಸಾಧ್ಯ.

ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕು ಎಂಬುದನ್ನು ಜಾರಿಗೆ ತಂದವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ.

 ಶೇ 50ರಷ್ಟು ಮೀಸಲಾತಿ ನೀಡಿದರೆ ಗಂಡಸರು ಸೌಟು ಹಿಡಿಯಬೇಕಾಗುತ್ತದೆ ಎಂದು ಶೇ 33 ರಷ್ಟು ನೀಡಿದ್ದಾರೆ.

 ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಎಲ್ಲದಕ್ಕೂ ಮೋದಿ ಮೋದಿ ಎನ್ನಬೇಡಿ. ರಾಜ್ಯ ಸರ್ಕಾರ ಏನು ಮಾಡಿದೆ ತಿಳಿಸಿ. ಸೋಲುತ್ತೇವೆ ಎಂಬ ಭಯದಿಂದ ಮೋದಿ, ಅಮಿತ್ ಷಾ, ನಡ್ಡಾ, ಗಡ್ಕರಿ ಸೇರಿ ಎಲ್ಲರೂ ಬರುತ್ತಿದ್ದಾರೆ ಎಂದು ಗಟ್ಟಿದನಿಯಲ್ಲೇ ಹರಿಹಾಯ್ದರು ಶೀಲಾ ಕುಮಾರ್.

ಪ್ರಧಾನಿ ಮೋದಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ವಿಷಯಕ್ಕೆ ಒತ್ತು ನೀಡುತ್ತಿದ್ದಾರೆ. ಇಲ್ಲಿಂದ ಕಮಲ ಕಳಿಸಿ ನಾವು ಲಕ್ಷ್ಮಿಯನ್ನು ಕೂರಿಸಿ ಕಳುಹಿಸುತ್ತೇವೆ ಎಂದು ಹೇಳಿದ್ದರು. ಸ್ಮಾರ್ಟ್‌ ಸಿಟಿ ಅಡಿ ದಾವಣಗೆರೆಯಲ್ಲಿ ಹಲವು ಅಭಿವೃದ್ಧಿ ಆಗಿದೆ. ಎಲ್ಲದಕ್ಕೂ ಮೋದಿಯೇ ಬರಬೇಕಾಯಿತು.

 ಜಿಲ್ಲಾಧ್ಯಕ್ಷೆ ಸ್ಥಾನ ಕೊಡುತ್ತೇವೆ ಅಂದಾಗ ನಾನೇ ಬೇಡ ಅಂದಿದ್ದೆ. ಮಹಿಳೆಯರನ್ನು ನಾವೇ ಕೈಹಿಡಿದು ಕರೆತರಲು ಆಗದು. ಕಾಂಗ್ರೆಸ್‌ ಪಕ್ಷ 75 ವರ್ಷಗಳಲ್ಲಿ ಹಾಳು ಮಾಡಿರುವುದನ್ನು 75 ದಿನಗಳಲ್ಲಿ ಸರಿಪಡಿಸಲು ಆಗದು. ಆದರೂ ಮೋದಿ ಅಭಿವೃದ್ಧಿ ಮಾಡಿದ್ದಾರೆ.

 ತರಕಾರಿ ತರಲೂ ಹೆಂಡತಿಯನ್ನು ಹೊರಗೆ ಕಳುಹಿಸದ ಮನಸ್ಥಿತಿಯ ಗಂಡಸರಿದ್ದಾರೆ. ಇದು ಬದಲಾಗಬೇಕು.

 ಕಮಲ ಕಳಿಸಿ ಎಂದು ಯಾವ ಲಕ್ಷ್ಮಿಯನ್ನು ಕಳುಹಿಸಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಬಿಜೆಪಿ ಸರ್ಕಾರದಿಂದ ಎಲ್ಲವೂ ಹಾಳಾಗಿದೆ. ಅಭಿವೃದ್ಧಿ ಆಗಿದ್ದು ಶಾಮನೂರು ಅವಧಿಯಲ್ಲಿ.

 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ. 8 ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ ಎಂಬುದನ್ನು ಜನರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.