ADVERTISEMENT

ಧಾರವಾಡ: ಒಂಟಿ ಮಹಿಳೆಯರ ಕೊಲೆ, ಆರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 12:57 IST
Last Updated 26 ಜುಲೈ 2022, 12:57 IST
ಕೊಲೆ ಆರೋಪಿಗಳು
ಕೊಲೆ ಆರೋಪಿಗಳು   

ಧಾರವಾಡ: ಚಿನ್ನಾಭರಣದೋಚಲು ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿ ನಂತರ ಸುಟ್ಟುಹಾಕುತ್ತಿದ್ದ ಆರು ಜನರ ತಂಡವನ್ನು ನಗರ ಮತ್ತು ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇ 11ರಂದು ಹುಬ್ಬಳ್ಳಿಯ ಈಶ್ವರನಗರದ 75 ವರ್ಷದ ಇಂದಿರಾಬಾಯಿ ಪವಾರ್ ಹಾಗೂ ಜುಲೈ 2ರಂದು ನಡೆದ ಇದೇ ಬಡಾವಣೆಯ ಎಮ್ಮೆ ಮೇಯಿಸುತ್ತಿದ್ದ ಮಹಾದೇವಿ ನೀಲಣ್ಣವರ (59) ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣವನ್ನು ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ವಿವಿಧ ಠಾಣೆಗಳ ಇನ್‌ಸ್ಪೆಕ್ಟರ್‌ಗಳ ತಂಡವನ್ನು ರಚಿಸಲಾಗಿತ್ತು.

ಅತ್ಯಂತ ಚಾಣಾಕ್ಷತನದಿಂದ ಕೊಲೆ ಮಾಡಿದ್ದರೂ, ಬಿಟ್ಟ ಕೆಲವೊಂದು ಸುಳಿವಿನ ಬೆನ್ನು ಹತ್ತಿದ ಪೊಲೀಸರು ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದವನಾದ ಈಶ್ವರನಗರ ನಿವಾಸ ದೇವರಾಜ ಮೊಗಲೆ ಹಾಗೂ ಅದರಗುಂಚಿಯ ಕಾಳಪ್ಪ ಕೋಗಣ್ಣವರ, ಬಸವರಾಜ ವಾಳದ, ಮಹಮ್ಮದ್ ರಫೀಕ್‌ ಬಡಿಗೇರ, ಬೆಳಗಲಿಯ ಶಿವಾನಂದ ಕೆಂಚಣ್ಣವರ ಹಾಗೂ ರೊಟ್ಟಿಗವಾಡದ ಗಂಗಪ್ಪ ಮರ್ತಂಗಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಹಮಾಲಿ ವೃತ್ತಿ ಮಾಡುತ್ತಿದ್ದ ಈ ಆರು ಜನರು 29ರಿಂದ 30 ಯವಸ್ಸಿನವರು. ತಮ್ಮ ಮೋಜಿಗಾಗಿ ಅಗತ್ಯವಿರುವ ಹಣ ಗಳಿಸಲು ಕೃತ್ಯದ ಸಂಚು ರೂಪಿಸಿದ್ದರು. ಈಶ್ವರನಗರದ ಸುತ್ತಮುತ್ತ ಒಂಟಿ ವೃದ್ಧ ಮಹಿಳೆಯರು ಇರುವುದನ್ನು ಪತ್ತೆ ಮಾಡುತ್ತಿದ್ದ ಈ ತಂಡ, ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ, ರಾಡ್‌ನಿಂದ ಹಲ್ಲೆ ನಡೆಸುತ್ತಿದ್ದರು. ನಂತರ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡುತ್ತಿದ್ದರು. ನಂತರ ಮೃತದೇಹವನ್ನು ಚೀಲಕ್ಕೆ ತುಂಬಿ, ಹೆದ್ದಾರಿ ಬಳಿ ಪೆಟ್ರೋಲ್ ಹಾಕಿ ಸುಡುತ್ತಿದ್ದರು. ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಈ ತಂಡ ಮತ್ತೆ ಯಾವ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂಬ ಅಂಶವನ್ನು ತಿಳಿಯಲು ಇನ್ನಷ್ಟು ತನಿಖೆಯ ಅಗತ್ಯವಿದೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ತಿಳಿಸಿದರು.

ಇವರಲ್ಲಿ ಮಹಮ್ಮದ್ ರಫೀಕ್ ಚಾಲಕನಾಗಿ ಹಾಗೂ ದೇವರಾಜ ಸ್ಟಿಕರ್‌ ಕಟ್ಟಿಂಗ್ ವೃತ್ತಿಯಲ್ಲಿದ್ದರು. ಒಂಟಿ ಹಾಗೂ ವೃದ್ಧ ಮಹಿಳೆಯರನ್ನೇ ದೇವರಾಜ ಗುರುತಿಸುತ್ತಿದ್ದ. ಕೊಲೆಯ ಸಂಚನ್ನು ಕಾಳಪ್ಪ ರೂಪಿಸುತ್ತಿದ್ದರು. ಕೊಲೆಯ ಹಿಂದಿನ ದಿನ ತೋಟದಲ್ಲಿ ಕುಳಿತು ಮದ್ಯ ಸೇವಿಸಿ ಯೋಜನೆ ರೂಪಿಸುತ್ತಿದ್ದರು. ತಮ್ಮ ಸುಳಿವು ಸಿಗದಿರಲೆಂದು ಮೊಬೈಲ್ ಬಂದ್ ಮಾಡುತ್ತಿದ್ದರು.

ಪ್ರಕರಣ ಬೇಧಿಸಲುಉತ್ತರ ವಿಭಾಗದ ಐಜಿಪಿ ಎನ್.ಸತೀಶಕುಮಾರ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭುರಾಮ್, ಡಿಎಸ್‌ಪಿ ಎಂ.ಬಿ.ಸಂಕದ, ನೇತೃತ್ವದ ಈ ತಂಡದಲ್ಲಿ ಕಲಘಟಗಿ ಪೊಲೀಸ್ ಇನ್‌ಸ್ಪೆಕ್ಟರ್‌ ಶ್ರೀಶೈಲ ಕೌಜಲಗಿ, ರಮೇಶ ಗೋಕಾಕ, ಪ್ರಮೋದ ಯಲಿಗಾರ, ಜಯಪಾಲ ಪಾಟೀಲ, ಬಿ.ಎಸ್. ಮಂಟೂರ, ಬಿ.ಎನ್. ಸಾತನ್ನವರ ಅವರನ್ನು ಒಳಗೊಂಡ ತನಿಖಾ ತಂಡ ಪ್ರಕರಣ ಬೇಧಿಸಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಗಳು ಪತ್ತೆ

ಈಶ್ವರನಗರ ಬಡಾವಣೆಯ ಇಬ್ಬರು ಮಹಿಳೆಯರ ಹತ್ಯೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಮೇ ತಿಂಗಳಲ್ಲಿವೃದ್ಧೆಯೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಕಲಘಟಗಿ–ಹುಬ್ಬಳ್ಳಿಯ ನಡುವಿನ ಕಾಡನಕೊಪ್ಪ ಗ್ರಾಮದ ಬಳಿ ದೊರೆತಿತ್ತು. ಕಲಘಟಗಿ ಪೊಲೀಸರು 35ರಿಂದ 45 ವರ್ಷದೊಳಗಿನ ಮಹಿಳೆಯ ಶವ ಎಂದು ದಾಖಲಿಸಿದ್ದರು. ಹಾಗೆಯೇ ವೃದ್ಧೆಯ ಮಕ್ಕಳೂ ದೂರು ದಾಖಲಿಸಲು ಹಲವು ದಿನಗಳನ್ನೇ ತೆಗೆದುಕೊಂಡಿದ್ದು ತನಿಖೆ ಹಿಂದೇಟಿಗೆ ಕಾರಣವಾಗಿತ್ತು.

ಆದರೆ ಈಶ್ವರನಗರದವರೇ ಆದ ಮಹಾದೇವಿ ಅವರು ಎಮ್ಮೆ ಮೇಯಿಸುತ್ತಿದ್ದಾಗ, ಅವರನ್ನು ಹೊತ್ತೊಯ್ದ ಆರೋಪಿಗಳು, ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು. ಈ ಇಬ್ಬರು ಮಹಿಳೆಯರ ಬಳಿ ಇದ್ದ ಸರ, ಓಲೆ, ಬಳೆಗಳನ್ನು ಇವರು ದೋಚಿ, ಪರಸ್ಪರ ಹಂಚಿಕೊಂಡಿದ್ದರು. ಮಹಿಳೆಯರ ತಲೆಗೆ ರಾಡಿನಿಂದ ಹೊಡೆಯುತ್ತಿದ್ದ ಆರೋಪಿಗಳು, ಚಾಕು ಬಳಸಿ ಹೊಟ್ಟೆ ಬಗೆಯುತ್ತಿದ್ದರು. ಕೈ, ಕಾಲುಗಳನ್ನು ಕತ್ತರಿಸಿ ಮುರಿದು ಚೀಲದಲ್ಲಿ ತುಂಬಿಕೊಂಡು ನಗರದ ಹೊರವಲಯಕ್ಕೆ ಸಾಗಿಸಿ, ಪೆಟ್ರೋಲ್ ಹಾಕಿ ಸುಡುತ್ತಿದ್ದರು. ಎರಡನೇ ಪ್ರಕರಣದಲ್ಲಿ ಮೃತದೇಹದೊಂದಿಗೆ ಮೂರು ಗಂಟೆಗಳ ಕಾಲ ಮದ್ಯ ಸೇವಿಸುತ್ತಾ ಕಾಲ ಕಳೆದ ಅಂಶ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

***

ತನಿಖೆಯಲ್ಲಿ ಈಶ್ವರನಗರ ಬಡಾವಣೆ ನಿವಾಸಿಗಳು ಬಹಳಷ್ಟು ಸಹಕಾರ ನೀಡಿದ್ದಾರೆ. ತನಿಖಾ ತಂಡದ ಪರಿಶ್ರಮದಿಂದ ಆರೋಪಿಗಳನ್ನು ಬಂಧಿಸಿ ಮೂರನೇ ಕೊಲೆಯ ಸಂಚನ್ನು ವಿಫಲಗೊಳಿಸಲಾಗಿದೆ..

– ಲೋಕೇಶ ಜಗಲಾಸರ, ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.