ADVERTISEMENT

ಓದಿನ ಭವಿಷ್ಯ ಉಜ್ವಲ

ಕೊರೊನಾ ಲಾಕ್‌ಡೌನ್‌: ಪುಸ್ತಕಗಳಿಗೆ ಆನ್‌ಲೈನ್‌ನಲ್ಲಿ ಹೆಚ್ಚಾದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2020, 8:35 IST
Last Updated 8 ಮೇ 2020, 8:35 IST
   

ಹುಬ್ಬಳ್ಳಿ: ಕೋವಿಡ್ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್‌ಡೌನ್‌ ಬಹುತೇಕ ಎಲ್ಲ ಮಾರಾಟವನ್ನೂ ಸ್ಥಗಿತಗೊಳಿಸಿ, ಸಾಕಷ್ಟು ನಷ್ಟವನ್ನು ಸೃಷ್ಟಿಸಿದೆ. ಆದರೆ ಪುಸ್ತಕಗಳ ವಿಷಯದಲ್ಲಿ ಮಾತ್ರ ಪರಿಣಾಮ ಭಿನ್ನವಾಗಿದೆ. ಎಲ್ಲರಿಗೂ ಆಗಿರುವಂತೆ ಈ ಕ್ಷೇತ್ರಕ್ಕೂ ಸಾಕಷ್ಟು ಹಾನಿಯಾಗಿದ್ದರೂ, ಹಿಂದಿಗಿಂತ ಭವಿಷ್ಯ ಉಜ್ವಲವಾಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ.

ಲಾಕ್‌ಡೌನ್‌ನಿಂದ ಎಲ್ಲರೂ ಮನೆಯಲ್ಲಿದ್ದಾರೆ. ಯಾವ ಚಟುವಟಿಕೆಯೂ ಇಲ್ಲ ಎಂಬುದು ನಿಜ. ಎಲ್ಲ ಕ್ಷೇತ್ರದಲ್ಲೂ ನಷ್ಟ, ಕಡಿತ ಎಂದೆಲ್ಲ ಆಗಿದೆ. ಈ ಸಂದರ್ಭದಲ್ಲೇ ಓದುಗರು ಹೆಚ್ಚಾಗುತ್ತಿದ್ದಾರೆ ಎಂಬುದೇ ಪುಸ್ತಕ ಕ್ಷೇತ್ರದಲ್ಲಿ ಕಂಡುಬಂದಿರುವ ಸಕಾರಾತ್ಮಕ ಅಂಶ.

ಜನ ಮನೆಯಲ್ಲಿದ್ದು, ಲಭ್ಯವಿರುವ ಪುಸ್ತಕಗಳ ಓದಿನಲ್ಲಿ ತಲ್ಲೀನರಾಗಿದ್ದಾರೆ. ದಿನದಿಂದ ದಿನಕ್ಕೆ ಓದುಗರು, ಓದಿನ ಪ್ರಮಾಣ ಹೆಚ್ಚಾಗಿದೆ. ಅಷ್ಟೇ ಅಲ್ಲ, ಪುಸ್ತಕಗಳ ಮಳಿಗೆಗಳು ಮುಚ್ಚಿದ್ದರೂ ಪುಸ್ತಕಗಳ ಮಾಹಿತಿ ಪಡೆದುಕೊಂಡು, ಯಾವಾಗ ಅವುಗಳನ್ನು ಕಳುಹಿಸಿಕೊಡುತ್ತೀರಿ ಎಂದು ಓದುಗರು ಕರೆ ಮಾಡಿ ಕೇಳುತ್ತಿರುವುದು ಪ್ರಕಾಶಕರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅಲ್ಲದೆ, ಆನ್‌ಲೈನ್‌ನಲ್ಲಿ ಪುಸ್ತಕ ಖರೀದಿಗೆ ಈ ಹಿಂದಿಗಿಂತಲೂ ಹೆಚ್ಚು ಓದುಗರು ಆಸಕ್ತಿ ತೋರಿರುವುದು ಮತ್ತಷ್ಟು ಆಶಾಭಾವ ವೃದ್ಧಿಸಿದೆ.

ADVERTISEMENT

‘ಲಾಕ್‌ಡೌನ್‌ನಿಂದ ಎರಡು ಹೊಸ ಪುಸ್ತಕಗಳು ಬಿಡುಗಡೆ ಆಗಿಲಿಲ್ಲ ಎಂಬುದು ಬಿಟ್ಟರೆ, ನಮ್ಮ ಓದುಗರು ಹಿಂದಿನಂತೆ ಕರೆ ಮಾಡಿ ನಮ್ಮಿಂದ ತರಿಸಿಕೊಳ್ಳುತ್ತಲೇ ಇದ್ದಾರೆ. ಹಿಂದಿಗಿಂತಲೂ ಹೆಚ್ಚೇ ಆರ್ಡರ್‌ ಆಗುತ್ತಿವೆ. ಪೋಸ್ಟ್‌ನಲ್ಲೇ ಕಳುಹಿಸಿಕೊಡುತ್ತಿದ್ದೇವೆ, ಸ್ವಲ್ಪ ತಡವಾದರೂ ತಲುಪುತ್ತಿವೆ. 45 ದಿನಗಳಲ್ಲಿ 100ಕ್ಕೂ ಹೆಚ್ಚು ಪುಸ್ತಕಗಳನ್ನು ಕಳುಹಿಸಿದ್ದೇವೆ’ ಎನ್ನುತ್ತಾರೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ.

‘ಪುಸ್ತಕ ಮಾರಾಟವಂತೂ ಪೂರ್ತಿ ನಿಂತಿದೆ. ಎಲ್ಲ ವ್ಯಾಪಾರಸ್ಥರಿಗೆ ಆಗಿರುವ ತೊಂದರೆ ಪುಸ್ತಕ ವ್ಯಾಪಾರಸ್ಥರಿಗೂ ಆಗಿದೆ. ಆದರೆ ಸಂತಸದ ವಿಚಾರವೆಂದರೆ, ಲಾಕ್‌ಡೌನ್‌ ಸಮಯದಲ್ಲಿ ಪುಸ್ತಕ ಓದು ಹೆಚ್ಚಾಗಿದೆ. ಓದಿನ ಹವ್ಯಾಸ ಇರುವವರು ಮನೆಯಲ್ಲಿದ್ದ ಹಳೆಯ ಪುಸ್ತಕಗಳನ್ನು ಓದಿದ್ದಾರೆ. ಆನ್‌ಲೈನ್‌ನಲ್ಲಿ ಬೇಡಿಕೆಯೂ ಸಾಕಷ್ಟು ಬಂದಿದೆ. ನನಗೆ ಬರುತ್ತಿರುವ ಕರೆಗಳನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಪುಸ್ತಕಕ್ಕೆ ಅಧಿಕ ಬೇಡಿಕೆ ಬರಲಿದೆ’ ಎಂದುಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಎಂ. ಎ. ಸುಬ್ರಹ್ಮಣ್ಯ ಭರವಸೆ ವ್ಯಕ್ತಪಡಿಸಿದರು.

‘ಎರಡು ತಿಂಗಳಿಂದ ಮಾರಾಟದ ಪ್ರಶ್ನೆಯೂ ಇಲ್ಲ. ಪಿಡಿಎಫ್‌, ಇ–ಬುಕ್‌ ಎಂದು ನಮ್ಮಲ್ಲಿಲ್ಲ. ಏನಿದ್ದರೂ ಪುಸ್ತಕದ ರೂಪದಲ್ಲೇ ಮಾರಾಟವಾಗಿರುವ ಪ್ರಕಾಶಕ ಸಂಸ್ಥೆ. ನಮ್ಮದೇ ಪುಸ್ತಕ ಮಳಿಗೆ ಇಲ್ಲದಿದ್ದರೂ, ಗೋಡೌನ್‌ ಇದೆ. ಅದರ ಬಾಡಿಗೆ, ವಿದ್ಯುತ್‌ ಬಿಲ್‌ ಸೇರಿದಂತೆ ಎಲ್ಲವನ್ನೂ ಕಟ್ಟಲೇಬೇಕು. ಉಳಿದ ವ್ಯಾಪಾರಗಳಂತೆಪುಸ್ತಕ ಕ್ಷೇತ್ರದವರ ಮೇಲೂ ಗಂಭೀರವಾದ ಪರಿಣಾಮವಂತೂ ಆಗಿದೆ. ಆದರೂ ಪುಸ್ತಕಗಳ ಬೇಡಿಕೆ ಹೆಚ್ಚಾಗುತ್ತಿರುವುದು ಸಾಕಷ್ಟು ಭರವಸೆ ಮೂಡಿಸಿದೆ’ ಎನ್ನುತ್ತಾರೆ ಗದುಗಿನ ಲಡಾಯಿ ಪ್ರಕಾಶನ ಬಸವರಾಜ ಸೂಳಿಭಾವಿ.

ಕೊರಿಯರ್‌, ಪೋಸ್ಟ್‌ ಇಲ್ಲದ್ದೇ ಸಮಸ್ಯೆ

‘ಜನ ಆನ್‌ಲೈನ್‌ನಲ್ಲಿ ಪುಸ್ತಕಗಳನ್ನು ಖರೀದಿಸಲು ಉತ್ಸಾಹ ತೋರಿದ್ದಾರೆ. ನಮ್ಮಲ್ಲಿ ಬಹಳಷ್ಟು ಓದುಗರು ಬೇಡಿಕೆಯನ್ನೂ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಕಳುಹಿಸಲು ಕೊರಿಯರ್‌ ಅಥವಾ ಪೋಸ್ಟ್‌ ವ್ಯವಸ್ಥೆ ಇಲ್ಲ. ಅಂಚೆ ಇಲಾಖೆಯ ಸೇವೆ ಸಂಪೂರ್ಣವಾಗಿಲ್ಲ. ಹೀಗಾಗಿ ತೊಂದರೆಯಂತೂ ಇದೆ’ ಎನ್ನುತ್ತಾರೆ ಧಾರವಾಡದ ಮನೋಹರ ಗ್ರಂಥಮಾಲದ ಸಮೀರ ಜೋಶಿ.

‘ನಿಯಮಗಳಂತೆ ಒಂದೆರಡು ದಿನದಿಂದ ಮಳಿಗೆಗಳು ಪ್ರಾರಂಭವಾಗಿವೆ. ಖರೀದಿಗೆ ಜನ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೆಲ್ಲ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದರು.

‘ಬಹಳಷ್ಟು ಜನ ಕರೆ ಮಾಡಿ, ಹಲವು ಪುಸ್ತಕಗಳನ್ನು ಕೇಳಿ ಲಾಕ್‌ಡೌನ್‌ ಮುಗಿದ ಮೇಲೆ ಕಳುಹಿಸಿಕೊಡಿ ಎಂದೂ ಹೇಳಿದ್ದಾರೆ. ಕೆಲವರು ಹಣವನ್ನೂ ನೀಡಿದ್ದಾರೆ’ ಎನ್ನುತ್ತಾರೆ ಬಸವರಾಜ ಸೂಳಿಭಾವಿ.

‘ಪ್ರಕಾಶಕರಿಗೆ, ಮಾರಾಟಗಾರರಿಗೆ ತೊಂದರೆ ಆಗಿರುವುದು ನಿಜ. ಏಕೆಂದರೆ ಮುದ್ರಣ ಮಾಡಲಾಗುತ್ತಿಲ್ಲ. ಕಾಗದ ಪೂರೈಕೆ ಆಗುತ್ತಿಲ್ಲ. ಸಾಗಣೆ ವ್ಯವಸ್ಥೆ ಇಲ್ಲ.ಆನ್‌ಲೈನ್‌ನಲ್ಲಿ ಬೇಡಿಕೆ ಬಂದಿರುವ ಪುಸ್ತಕಗಳನ್ನು ಕಳುಹಿಸಲು ನಮಗೆ ಪೋಸ್ಟ್ ವ್ಯವಸ್ಥೆ ಇಲ್ಲ. ಹುಬ್ಬಳ್ಳಿಯಲ್ಲಿ ಇನ್ನೂ ಪುಸ್ತಕ ಕಳುಹಿಸುವ ವ್ಯವಸ್ಥೆ ಅಂಚೆ ಇಲಾಖೆಯಲ್ಲಿ ಪ್ರಾರಂಭವಾಗಿಲ್ಲ. ಖಾಸಗಿ ಕೊರಿಯರ್ ಸೇವೆಯಂತೂ ಇಲ್ಲವೇ ಇಲ್ಲ. ಹೀಗಾಗಿ ಬೇಡಿಕೆ ಬಂದಿರುವ ಪುಸ್ತಕಗಳ ಪ್ಯಾಕೆಟ್‌ಗಳ ಮೂಟೆಗಳು ನನ್ನಲ್ಲಿಯೇ ಉಳಿದಿವೆ’ ಎನ್ನುತ್ತಾರೆ ಎಂ.ಎ. ಸುಬ್ರಹ್ಮಣ್ಯ.

ಪುಸ್ತಕ ಪ್ರಕಾಶನ ಒಂದು ಸಂಸ್ಕೃತಿ ಎಂದು ಭಾವಿಸಿ ಪ್ರಕಟಿಸುತ್ತಿದ್ದೇವೆ. ಇಂದಿಗೂ ಪುಸ್ತಕಗಳಿಗೆ ಬೇಡಿಕೆ ಇದೆ. ಇದೀಗ ಇನ್ನಷ್ಟು ಹೆಚ್ಚಾಗುತ್ತಿರುವುದು ಸಂತಸ ತಂದಿದೆ- ಚನ್ನಬಸವಣ್ಣ, ಲೋಹಿಯಾ ಪ್ರಕಾಶನ, ಬಳ್ಳಾರಿ

ಪುಸ್ತಕ ಓದು ಮತ್ತೆ ಕಳೆ ಪಡೆದುಕೊಳ್ಳಲಿದೆ. ಸಾಕಷ್ಟು ಹೊಸ ಓದುಗರೂ ಹುಟ್ಟಿಕೊಂಡಿರುವುದರಿಂದ ಮುಂದೆ ಪುಸ್ತಕ ಖರೀದಿದಾರರು ಹೆಚ್ಚಾಗಲಿದ್ದಾರೆ-ಎಂ. ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

ಓದಿನಲ್ಲಿ ತೊಡಗಿಸಿಕೊಳ್ಳುವ ಗುಣ ಹೆಚ್ಚಾಗಿ ಬೆಳೆದಿರುವುದರಿಂದ ಭವಿಷ್ಯದಲ್ಲಿ ಓದಿನ ಕಡೆಗೆ ಹೆಚ್ಚು ಜನ ವಾಲುವ ನಿರೀಕ್ಷೆ ನಮ್ಮಲ್ಲಿ ಹುಟ್ಟಿಸಿದೆ. ಇದು ಸಕಾರಾತ್ಮಕ ಅಂಶ- ಬಸವರಾಜ ಸೂಳಿಭಾವಿ, ಲಡಾಯಿ ಪ್ರಕಾಶನ, ಗದಗ

ಗ್ರಂಥಾಲಯ ಇಲಾಖೆ ಮಾರ್ಚ್‌ ಒಳಗೆ ಸಾಕಷ್ಟು ಪುಸ್ತಕ ಖರೀದಿಸಬೇಕಿತ್ತು. ಅದೂ ಪೂರ್ಣವಾಗಿಲ್ಲ. ಆದ್ದರಿಂದ ಈ ರೀತಿಯ ಮಾರಾಟವೂ ಇಲ್ಲದಂತಾಗಿದೆ- ಸಮೀರ ಜೋಶಿ, ಮನೋಹರ ಗ್ರಂಥಮಾಲ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.