ADVERTISEMENT

ಅಮೃತದ ಬಟ್ಟಲಿಗೆ ವಿಷಪ್ರಾಶನ

ನಮ್‌ ಕೆರಿ ಕಥಿ

Published 10 ಫೆಬ್ರುವರಿ 2020, 3:53 IST
Last Updated 10 ಫೆಬ್ರುವರಿ 2020, 3:53 IST
ಧಾರವಾಡ ನಗರಕ್ಕೆ ನಳದ ಮೂಲಕ ಕುಡಿಯುವ ನೀರು ಕೊಟ್ಟ ಕೆಲಗೇರಿ ಕೆರೆಗೆ ಒಳಚರಂಡಿ ನೀರು ಸರಾಗವಾಗಿ ಹರಿಯುತ್ತಿದೆ  ಚಿತ್ರ: ಆರ್‌. ಮಂಜುನಾಥ್‌
ಧಾರವಾಡ ನಗರಕ್ಕೆ ನಳದ ಮೂಲಕ ಕುಡಿಯುವ ನೀರು ಕೊಟ್ಟ ಕೆಲಗೇರಿ ಕೆರೆಗೆ ಒಳಚರಂಡಿ ನೀರು ಸರಾಗವಾಗಿ ಹರಿಯುತ್ತಿದೆ  ಚಿತ್ರ: ಆರ್‌. ಮಂಜುನಾಥ್‌   
""

ಧಾರವಾಡ ಜಿಲ್ಲೆಯಲ್ಲಿ ಶತಮಾನಗಳಿಂದ ಸಾವಿರಾರು ಕೆರೆಗಳಿದ್ದವು. ಜನರಿಗೆ ಕುಡಿಯುವ ನೀರು ಒದಗಿಸಲೆಂದೇ ಹಲವು ಕೆರೆಗಳನ್ನು ನಿರ್ಮಿಸಲಾಗಿತ್ತು. ಅಂತಹ ಜೀವಜಲ ಒದಗಿಸಿದ ಕೆರೆಗಳಲ್ಲಿ ಇಂದು ಕೈ ಇಟ್ಟರೂ ರೋಗರುಜಿನಗಳು ಆವರಿಸಿಕೊಳ್ಳುವ ಸ್ಥಿತಿ ಇದೆ. ಏಕೆಂದರೆ, ಒಳಚರಂಡಿ ನೀರು, ತಾಜ್ಯಕ್ಕೆ ಕೆರೆಗಳೇ ತಾಣವಾಗಿವೆ. ಇದೆಲ್ಲರ ಜೊತೆಗೆ ನೂರಾರು ಕೆರೆಗಳು ಒತ್ತುವರಿಯೂ ಆಗಿವೆ. ಕೆಲವು ಅಸ್ತಿತ್ವವನ್ನೇ ಕಳೆದುಕೊಂಡಿವೆ. ಅದರಲ್ಲೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳ ಸ್ಥಿತಿಯಂತೂ ಶೋಚನೀಯ. ಅಭಿವೃದ್ಧಿಗೆ ಅಳಿದ ಕೆರೆಗಳ ನಡುವೆ, ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಕೆರೆಗಳು ತಿಣುಕಾಡುತ್ತಿವೆ. ಈ ನಿಟ್ಟಿನಲ್ಲಿ ಪ್ರಜಾವಾಣಿ – ‘ನಮ್‌ ಕೆರಿ ಕಥಿ’ ಮೂಲಕ ಕೆರೆಗಳ ವಾಸ್ತವ ಸ್ಥಿತಿಯನ್ನು ತೆರೆದಿಡಲಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು ಧಾರವಾಡ. ವಿದ್ಯಾಕಾಶಿ, ಪೇಢಾ ನಗರಿ, ಚೋಟಾ ಮುಂಬೈ, ವಾಣಿಜ್ಯ ನಗರಿ ಎಂದೆಲ್ಲ ಹೆಗ್ಗಳಿಕೆ ಹೊಂದುವ ಮೊದಲೇ, ಸಾವಿರಾರು ಕೆರೆಗಳನ್ನು ಹೊಂದಿದ್ದ ಈ ಜಿಲ್ಲೆಗೆ ಕೆರೆಗಳ ನಾಡು ಎಂದೂ ಕರೆಯಲಾಗುತ್ತಿತ್ತು. ಜಿಲ್ಲೆಯಲ್ಲಿರುವ ಕೆರೆಗಳಿಗೆ ಶತಮಾನಗಳ ಇತಿಹಾಸವಿದೆ. ಜನರಿಗೆ ಕುಡಿಯುವ ನೀರು ಒದಗಿಸಲೆಂದೇ ರಾಜ–ಮಹಾರಾಜರು, ಬ್ರಿಟಿಷ್‌ ಆಡಳಿತದ ಅಧಿಕಾರಿಗಳು ಕೆರೆಗಳನ್ನು ನಿರ್ಮಿಸಿದ್ದರು. ಆದರೆ, ಅಂತಹ ಕೆರೆಗಳಲ್ಲಿರುವ ನೀರನ್ನು ಮುಟ್ಟಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೀವಕ್ಕೆ ‘ಅಮೃತ’ ನೀಡುತ್ತಿದ್ದ ‘ಜಲ ಬಟ್ಟಲು’ಗಳಿಗೆ ‘ವಿಷ’ ಸೇರಿಸಲಾಗುತ್ತಿದೆ. ಒಳಚರಂಡಿ, ತ್ಯಾಜ್ಯ ಕೆರೆಯ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದರೆ, ಒತ್ತುವರಿ ಕೆರೆಗಳ ವ್ಯಾಪ್ತಿಯನ್ನು ಕರಗಿಸುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಿದ್ದವು. ಅವಿಭಜಿತ ಜಿಲ್ಲೆಯಾಗಿದ್ದಾಗ ಮೂರು ಸಾವಿರಕ್ಕೂ ಅಧಿಕ ಕೆರೆಗಳನ್ನು ಹೊಂದಿತ್ತು. ಸತತ ಬರದ ವರ್ಷಗಳ ನಂತರದ ಸಂದರ್ಭದಲ್ಲಿ ಜನರಿಗೆ ಜೀವಜಲ ನೀಡಿದ್ದು ಇದೇ ಕೆರೆಗಳು. ಬರದಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಆಶ್ರಯಿಸಿದ್ದು ಕೆರೆ–ಕುಂಟೆಗಳನ್ನೇ. ಕೆರೆಗಳ ರಕ್ಷಣೆ ಹಾಗೂ ಹೊಸ ಕೆರೆಗಳ ನಿರ್ಮಾಣಕ್ಕೆ ರಾಜ–ಮಹಾರಾಜರು ಆದ್ಯತೆ ಕೊಟ್ಟಿದ್ದರು. ಕೆಲಗೇರಿ, ಉಣಕಲ್‌ ಕೆರೆಗಳಿಂದ ನಳದ ಮೂಲಕ ಕುಡಿಯುವ ನೀರು ಸರಬರಾಜಾಗುತ್ತಿತ್ತು. ಜನಸಂಖ್ಯೆ ಹೆಚ್ಚಾದಂತೆ ನೀರಿನ ಬೇಡಿಕೆಯೂ ಹೆಚ್ಚಾಯಿತು. ಕೆರೆಗಳ ಬದಲು ಜಲಾಶಯ, ನದಿಯತ್ತ ಕುಡಿಯುವ ನೀರಿನ ಯೋಜನೆಗಳು ಸಾಗಿದವು. ಇದಾದ ನಂತರವೇ ಕೆರೆಗಳ ದುಃಸ್ಥಿತಿ ಆರಂಭವಾಗಿದ್ದು.

ADVERTISEMENT

ಕೆರೆಗಳ ನೀರನ್ನು ಕುಡಿಯಲು ಬಳಸುವುದಿಲ್ಲ ಎಂದು ಅರಿವಿಗೆ ಬಂದ ಕೂಡಲೇ ಅಲ್ಲಿ ಶುಚಿ ಕಡಿಮೆಯಾಯಿತು. ದುರ್ಬಳಕೆ ಅತಿಯಾಯಿತು. ನಮ್ಮನ್ನು ಹೊರತುಪಡಿಸಿಯೂ ಕೆರೆಗಳು ನೈಸರ್ಗಿಕವಾಗಿ ಪ್ರಾಣಿ–ಪಕ್ಷಿಗಳು ಸೇರಿದಂತೆ ಸಾವಿರಾರು ಪ್ರಭೇದಗಳಿಗೆ ಜೀವಜಲ ಎಂಬುದನ್ನು ನಾಗರಿಕರು ಮರೆತಂತೆ ಗೋಚರಿಸುತ್ತಿದೆ. ಅದಕ್ಕೇ ಕೆರೆಗಳು ತ್ಯಾಜ್ಯದ ಗುಂಡಿಗಳಾಗಿವೆ. ಒಳಚರಂಡಿಯ ತಾಣಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕೆಲವು ಕೆರೆಗಳು ಸಂಪೂರ್ಣ ನಾಶವಾದರೆ, ಇನ್ನಷ್ಟು ಕೆರೆಗಳು ತಮ್ಮ ವ್ಯಾಪ್ತಿಯನ್ನು ಕಳೆದುಕೊಂಡವು. ಇದೆಲ್ಲದರ ನಡುವೆ ವಸತಿ ಹಾಗೂ ಸಮುದಾಯಗಳ ಸೌಲಭ್ಯ ಮತ್ತು ಇನ್ನಿತರ ಒತ್ತುವರಿಯಲ್ಲಿ ಕೆರೆಗಳು ತಮ್ಮ ಮೂಲವಾದ ಕಾಲುವೆಗಳನ್ನೇ ಕಳೆದುಕೊಂಡಿವೆ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ, 4,263 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಧಾರವಾಡ ಜಿಲ್ಲೆಯಲ್ಲಿ ಇನ್ನೂ ಸಾವಿರಾರು ಕೆರೆಗಳಿವೆ. ಜೀವಂತವಾಗಿಯೂ ಇವೆ. ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಅವುಗಳನ್ನು ತೊಳೆಯಲು ಇಂದಿಗೂ ಕೆರೆಗಳೇ ಜೀವಾಳ. ಆದರೆ ಈ ಸಾವಿರಾರು ಕೆರೆಗಳು ಉಳಿದುಕೊಂಡಿರುವುದು ಅವಳಿನಗರದ ಅಂಚಿನಲ್ಲಿ ಹಾಗೂ ಹೊರಭಾಗ, ಗ್ರಾಮಗಳಲ್ಲಿ ಮಾತ್ರ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆರೆಗಳಿಗೆ ಯಾವುದೇ ಮಹತ್ವ ಇಲ್ಲ. ಒಳಚರಂಡಿ ನೀರು ಹಾಗೂ ತ್ಯಾಜ್ಯ ವಿಲೇವಾರಿಗಷ್ಟೇ ಇವುಗಳನ್ನು ಉಪಯೋಗಿಸಲಾಗುತ್ತಿರುವುದು ಶೋಚನೀಯ.

ರಾಜಧಾನಿ ಬೆಂಗಳೂರಿನ ನಂತರ ರಾಜ್ಯದಲ್ಲಿ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಯೂ ಅವಳಿನಗರದ್ದು. 202 ಚದರ ಕಿಲೋ ಮೀಟರ್‌ನಲ್ಲಿ 48 ಹಳ್ಳಿಗಳನ್ನು ಒಳಗೊಂಡು ಮಹಾನಗರವಾಗಿದೆ. ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವಳಿನಗರ ಅತ್ಯಂತ ಮುಂದಿವೆ. ಸಾಂಸ್ಕೃತಿಕ ನೆಲೆಗೆ ಹೆಸರಾಗಿರುವ ಅವಳಿನಗರ ಇದೀಗ ಸ್ಮಾರ್ಟ್‌ ಸಿಟಿ ಆಗಲು ಸಾಕಷ್ಟು ಹೆಜ್ಜೆ ಇರಿಸುತ್ತಿದೆ. ಆದರೆ, ತನ್ನ ಜಲಮೂಲಗಳನ್ನು ಉಳಿಸಿಕೊಳ್ಳುವುದರಲ್ಲಿ ಸಾಕಷ್ಟು ಹಿಂದೆ ಉಳಿದಿದೆ ಎಂಬ ಪ್ರಖ್ಯಾತಿಯೂ ಈಗ ಆವರಿಸಿಕೊಳ್ಳುತ್ತಿದೆ. ಏಕೆಂದರೆ, ಕೆರೆಗಳ ಅಭಿವೃದ್ಧಿ ಪ್ರಾತಿನಿಧಿಕ ಸಂಸ್ಥೆಗಳ್ಯಾವುವೂ ಗಮನಹರಿಸುತ್ತಿಲ್ಲ. ಧಾರವಾಡದಲ್ಲಿ ಕಂದಾಯ ಇಲಾಖೆ ದಾಖಲೆ ಪ್ರಕಾರವೇ ಒಂದು ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಆದರೆ ನಾಲ್ಕಾರು ಕೆರೆಗಳನ್ನು ಮಾತ್ರ ಉಳಿಸಿಕೊಂಡರೆ ಸಾಕು ಎಂಬ ಮನಸ್ಥಿತಿ ಇದೆ. ಅದಕ್ಕೇ ಪಾಲಿಕೆ 10 ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ಅಧ್ಯಯನದ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲೇ 101 ಕೆರೆಗಳಿವೆ. ಇದರಲ್ಲಿ 54 ಕೆರೆಗಳು ಜೀವಂತವಾಗಿಯೇ ಇವೆ. ಇದರಲ್ಲಿ 19 ಕೆರೆಗಳು ವರ್ಷದ ಬಹುತೇಕ ಸಂದರ್ಭದಲ್ಲಿ ನೀರು ಸಂಗ್ರಹ ಹೊಂದಿರುತ್ತವೆ. ಇನ್ನು ಬಳಕೆಯಲ್ಲಿರದ 47 ಕೆರೆಗಳಲ್ಲೂ ಸಾಕಷ್ಟು ಕೆರೆಗಳನ್ನು ಉಳಿಸಿಕೊಳ್ಳಲೂಬಹುದು.

ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಇಲಾಖೆಯ ‌ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಇಎಂಪಿಆರ್‌ಐ–ಎಂಪ್ರಿ) ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜಲಮೂಲಗಳ ಸಮಗ್ರ ಕುರಿತು ಅಧ್ಯಯನ ನಡೆಸಿದೆ. ಭಾರತೀಯ ವಿಜ್ಞಾನ ಸಂಸ್ಥೆಗಾಗಿ (ಐಐಎಸ್‌ಸಿ) ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ವ್ಯಾಪ್ತಿಯಲ್ಲಿರುವ ಜಲಮೂಲಗಳ ಅಭಿವೃದ್ಧಿ– ಸಂರಕ್ಷಣಾ ಕಾರ್ಯತಂತ್ರಗಳು’ ಎಂಬ ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ. ಐಐಎಸ್‌ಸಿಯ ಸಿಸ್‌ಟುಪ್‌ (ಸೆಂಟರ್‌ ಫಾರ್‌ ಇನ್‌ಫ್ರಾಸ್ಟ್ರಕ್ಚರ್‌, ಸಸ್ಟೈನಬಲ್‌ ಟ್ರಾನ್ಸ್‌ಪೋರ್ಟ್‌ ಆ್ಯಂಡ್‌ ಅರ್ಬನ್‌ ಪ್ಲಾನಿಂಗ್‌) ಈ ಅಧ್ಯಯನ ವರದಿಗೆ ಹಣಕಾಸು ನೆರವು ನೀಡಿದೆ. ಅವಳಿ ನಗರದ 101 ಕೆರೆ–ಕುಂಟೆಗಳ ಸ್ಥಿತಿ ಹಾಗೂ ಅವುಗಳಿಗಾಗಿರುವ ಧಕ್ಕೆ, ಒತ್ತುವರಿ, ಅಳಿದುಹೋಗಿರುವ ವಿವರ ಸೇರಿದಂತೆ ಎಲ್ಲ ರೀತಿಯ ಮಾಹಿತಿಯನ್ನೂ ದಾಖಲೆ ಸಹಿತ ವಿವರಿಸಿದೆ. ಇದನ್ನು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಪರಿಗಣಿಸಿದರೆ 60ಕ್ಕೂ ಹೆಚ್ಚು ಕೆರೆಗಳು ಪಾಲಿಕೆ ವ್ಯಾಪ್ತಿಯಲ್ಲೇ ನಳನಳಿಸುತ್ತವೆ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಅತಿ ಅವಶ್ಯವಾಗಿದ್ದು, ಎಲ್ಲದಕ್ಕೂ ಬೆಂಗಳೂರು ಮಾದರಿ ಎಂಬುದಾಗಿ ಹೇಳುವ ಅವರು, ರಾಜಧಾನಿ ಕೆರೆಗಳ ಅಭಿವೃದ್ಧಿಗಾಗಿರುವ ಯೋಜನೆಗಳನ್ನು ಅವಳಿ ನಗರಕ್ಕೂ ತರಬೇಕಾಗಿದೆ.

ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ನವಲಗುಂದ ತಾಲ್ಲೂಕಿನ ಮೊರಬ ಶಾಸನದಂತೆ ನೊಳಂಬಾಧಿ ರಾಜ ಜಯಸಿಂಘನು ಸ್ಥಳೀಯ ಕೆರೆಯನ್ನು ನೊಳಂಬ ಸಮುದ್ರ ಎಂದು ಹೆಸರಿಸಿ, ನಿರ್ವಹಣೆ ಮಾಡಿಸಿದ್ದನು. 14ನೇ ಶತಮಾನದ ಅಂತ್ಯದಲ್ಲಿ 12 ವರ್ಷ ಸತತ ಬರಗಾಲದ ಅನುಭವಿಸಿದ ನಂತರ ವಿಜಯನಗರದ ಅರಸರು ಧಾರವಾಡ ಜಿಲ್ಲೆಯಲ್ಲಿ ಕೆರೆಗಳ ದುರಸ್ತಿ ಹಾಗೂ ಹೊಸ ಕೆರೆಗಳ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿದರು. ಅವರ ಮಾಂಡಳಿಕ ಅರಸರೂ ಈ ಕಾರ್ಯಕ್ಕೆ ಒತ್ತು ನೀಡಿದರು. ಕೃಷ್ಣರಾಯ ಸಮುದ್ರ, ಸದಾಶಿವ ಸಮುದ್ರ, ರಾಯಾಪುರ ಕೆರೆ ಅವರ ಕಾಲದ ರಚನೆಗಳಾಗಿವೆ. ಧಾರವಾಡದಲ್ಲಿ ಸಾದೂನಕೆರೆ (ಸಾಧನಕೆರೆ), ಕೆಂಪುಗೆರೆ, ಎಮ್ಮೆಕೆರೆ (ಮಾರುಕಟ್ಟೆ), ಕೆಳಗೆರೆ (ಕೆಲಗೇರಿ), ಅತ್ತಿಕೊಳ್ಳ; ಹುಬ್ಬಳ್ಳಿಯಲ್ಲಿ ಗುಳಕವ್ವನ ಕೆರೆ (ನೆಹರೂ ಮೈದಾನ), ತಿಮ್ಮಸಾಗರ, ಉಣಕಲ್‌ ಕೆರೆ ಶತಮಾನಗಳ ಇತಿಹಾಸ ಹೊಂದಿವೆ. ಚಿಕ್ಕೆರೂರು, ಹಿರೇಕೆರೂರು, ನುಗ್ಗಿಕೇರಿ, ಕೆರವಾಡ, ಕೆರಿಕೊಪ್ಪ, ಕೆರಿಮಲ್ಲಾಪುರ, ಕೆರಿಮತ್ತಿಹಳ್ಳಿ, ಗುಡಗೇರಿ, ಮುಸಿಗೇರಿ, ತಾವರಗೇರಿ, ಅಮರಗೋಳ, ಶಿರಕೋಳ, ಗುಮ್ಮಗೋಳ, ಹಾವೇರಿ, ಮೆಡ್ಲೇರಿ ಇವೆಲ್ಲವ ಹೆಸರು ಅಲ್ಲಿದ್ದ ಕೆರೆ, ಕೊಳ, ಏರಿಯಿಂದಲೇ ಬಂದವು.

ಅಂತಹ ಪರಿಸ್ಥಿತಿ ಇದೀಗ ಬದಲಾಗಿದೆ. ಕೆರೆಗಳನ್ನು ಮುಚ್ಚಿ ವಸತಿ ಪ್ರದೇಶಗಳು ನಿರ್ಮಾಣವಾಗುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳು ನಾಶಗೊಳ್ಳುತ್ತಿವೆ. ಕೆರೆ
ಗಳನ್ನು ಉಳಿಸಿಕೊಂಡು, ಅಭಿವೃದ್ಧಿಯತ್ತ ಮುನ್ನಡೆದರೆ ಮಾತ್ರ ಅವಳಿನಗರದ ಪರಿಸರ ಉತ್ತಮಗೊಳ್ಳುತ್ತದೆ ಎಂಬುದನ್ನು ಮನಗಾಣಬೇಕಾಗಿದೆ.ಇಲ್ಲದಿದ್ದರೆ ಸ್ಮಾರ್ಟ್‌ ಸಿಟಿಯ ಉಪಮೇಯ ಕೇವಲ ಆಡಂಬರವಷ್ಟೇ ಆಗುತ್ತದೆ.

ಎರಡು ಆಣೆಗೆ ಕೊಡ ನೀರೂ ಸಿಗುತ್ತಿರಲಿಲ್ಲ...!

ಧಾರವಾಡದಲ್ಲಿ 150 ವರ್ಷಗಳ ಹಿಂದೆ ನೀರಿನ ಬರವಿದ್ದಾಗ ಎರಡು ಆಣೆ ಕೊಟ್ಟರೂ ಒಂದು ಕೊಡ ನೀರು ಸಿಗುತ್ತಿರಲಿಲ್ಲ. ನೀರು ಹಾಕುವವರು ಪ್ರತಿ ತಿಂಗಳು ₹20ರಿಂದ ₹30 ಸಂಪಾದಿಸುತ್ತಿದ್ದರು ಎಂದು 1884 ಗೆಜೆಟಿಯರ್‌ನಲ್ಲಿ ನಮೂದಾಗಿದೆ. 20ನೇ ಶತಮಾನದ ಪ್ರಾರಂಭದ ದಶಕದಲ್ಲಿ ಧಾರವಾಡ ನಗರಕ್ಕೆ ಹಿರೇಕೆರೆ, ಕೊಪ್ಪದ ಕೆರೆ, ಹಾಲಕೆರೆ ಸೇರಿದಂತೆ ಐದಾರು ಕೆರೆಗಳಿಂದಲೂ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.