ADVERTISEMENT

ಗಣಪಗೆ ಸಂಭ್ರಮದ ವಿದಾಯ

ತಡರಾತ್ರಿವರೆಗೂ ನಡೆದ ವಿಸರ್ಜನಾ ಕಾರ್ಯಕ್ರಮ; 160ಕ್ಕೂ ಹೆಚ್ಚು ಮೂರ್ತಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 16:34 IST
Last Updated 19 ಸೆಪ್ಟೆಂಬರ್ 2021, 16:34 IST
ಹುಬ್ಬಳ್ಳಿ ಕಂಚಗಾರ ಓಣಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಯುವಕರು ಭಾನುವಾರ ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಿದರು
ಹುಬ್ಬಳ್ಳಿ ಕಂಚಗಾರ ಓಣಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಯುವಕರು ಭಾನುವಾರ ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಿದರು   

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಗಣೇಶನ ಹಬ್ಬ ಈ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ನಡೆದು, ಅಷ್ಟೇ ಸರಳವಾಗಿ ಮುಕ್ತಾಯವಾಗಿದೆ.

ಭಾನುವಾರ ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ 160ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಬಾಣ, ಬಿರುಸುಗಳ ಚಿತ್ತಾರ, ಅಬ್ಬರ ವಿಸರ್ಜನಾ ಮೆರವಣಿಗೆಗೆ ಮೆರುಗು ತಂದುಕೊಟ್ಟಿತು.

11ನೇ ದಿನಕ್ಕೆ ಮುಕ್ತಾಯವಾಗುತ್ತಿದ್ದ ಗಣೇಶನ ಹಬ್ಬ, ಈ ವರ್ಷ ಹತ್ತನೇ ದಿನವಾದ ಭಾನುವಾರವೇ ಮುಗಿಯಿತು. ಹನ್ನೊಂದನೇ ದಿನ ಹುಣ್ಣಿಮೆ ಬಂದಿರುವ ಹಿನ್ನೆಲೆಯಲ್ಲಿ ಗಣೇಶೋತ್ಸವ ಮಂಡಳಿ ಒಂದು ದಿನ ಮುಂಚಿತವಾಗಿ ವಿಸರ್ಜಿಸಿದವು. ಇಂದಿರಾ ಗಾಜಿನ ಮನೆ ಪಕ್ಕ ಮತ್ತು ಹೊಸೂರು ಬಾವಿಯಲ್ಲಿ ವಿಸರ್ಜನೆ ನಡೆಯಿತು. ಒಂಬತ್ತನೇ ದಿನವಾದ ಶನಿವಾರ ಹಳೇಹುಬ್ಬಳ್ಳಿ ಭಾಗದ 90ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು.

ADVERTISEMENT

ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಅಬ್ಬರವಿರಲಿಲ್ಲ. ಕೆಲವು ಗಣೇಶೋತ್ಸವ ಸಮಿತಿಗಳು ಮಾತ್ರ ತೆರೆದ ವಾಹನಗಳಲ್ಲಿ ಗಣೇಶ ಮೂರ್ತಿ ಇಟ್ಟು, ಹತ್ತರಿಂದ ಹದಿನೈದು ಮಂದಿ ಮೆರವಣಿಗೆಯಲ್ಲಿ ಸಾಗಿ ಪಟಾಕಿ ಸಿಡಿಸಿ ಗಣೇಶನನ್ನು ಬೀಳ್ಕೊಟ್ಟರು. ಯುವಕರು ಕುಣಿದು ಕುಪ್ಪಳಿಸಿ ಗಣಪತಿ ಬಪ್ಪ ಮೋರೆಯಾ ಎನ್ನುತ್ತ ಜೈ ಘೋಷ ಹಾಕುತ್ತ ಪಾಲ್ಗೊಂಡಿದ್ದರು.

ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ: ದುರ್ಗದ ಬೈಲ್‌ನಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ವಿಸರ್ಜನಾ ಕಾರ್ಯಕ್ರಮ ನಡೆಯಿತು.

ಮಜೇಥಿಯಾ ಫೌಂಡೇಷನ್‌ ಚೇರಮೆನ್‌ ಜಿತೇಂದ್ರ ಮಜೇಥಿಯಾ, ‘ಗಣೇಶ ಎಲ್ಲ ವಿಘ್ನಗಳನ್ನು ದೂರ ಮಾಡಿ ಜನತೆಯಲ್ಲಿ ಸುಖ–ಶಾಂತಿ, ಆರೋಗ್ಯ ದಯಪಾಲಿಸಲಿ’ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಇದ್ದರು. ಗಾಯಕರಾದ ಚಂದ್ರಶೇಖರ ಗಾಣಿಗೆರ ಮತ್ತು ಸಂತೋಷ ಕಟ್ಟಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ವೀರಣ್ಣ ಪಾಳೆದ, ಅಶೋಕ ಬೆಳ್ಳಿಗಟ್ಟಿ, ಈಶ್ವರ ನಾಯಕ, ರೂಪಾ ಅಂಗಡಿ, ಚನ್ನಬಸಪ್ಪ ಧಾರವಾಡಶೆಟ್ಟರ್‌, ಅನಿಲ ಬೆವಿನಕಟ್ಟಿ, ಸರೇಶ ರೇವಣಕರ, ಮಂಜು ಗೌಳಿ, ಮಹೇಶ ಪತ್ತಾರ, ಅಕ್ಕಮ್ಮ ಕಂಬಳಿ, ಎಸ್.ಎಂ. ಅಂಗಡಿ, ಎಂ.ಎಂ. ಡಂಬಳ, ಸಾಯಿನಾಥ ಹಿತ್ತಾಳಿ, ಡಾ. ಚಿದಾನಂದ ತೆಗ್ಗಿಹಳ್ಳಿ, ರಮೇಶ ಯಾದವಾಡ, ಮಹೇಶ ಗೌಳಿ, ಅಲ್ತಾಫ್‌ ಕಿತ್ತೂರ, ರಾಘವೇಂದ್ರ ಮುರಗೋಡ, ಶಿವು ಕಾದಪ್ಪನವರ, ಶಾಂತರಾಜ ಪೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.