ADVERTISEMENT

ನೃಪತುಂಗ ಬೆಟ್ಟದ ಚಿರತೆ ಸೆರೆಗೆ ಮೈಸೂರಿನ ತಜ್ಞರ ತಂಡ: ಜಿಲ್ಲಾಧಿಕಾರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 10:57 IST
Last Updated 21 ಸೆಪ್ಟೆಂಬರ್ 2021, 10:57 IST
ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಚಿರತೆ ಸೆರೆ ಕಾರ್ಯಾಚರಣೆ ಕುರಿತು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿದರು
ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಚಿರತೆ ಸೆರೆ ಕಾರ್ಯಾಚರಣೆ ಕುರಿತು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾತನಾಡಿದರು   

ಹುಬ್ಬಳ್ಳಿ: ನೃಪತುಂಗ ಬೆಟ್ಟದಲ್ಲಿ ಪತ್ತೆಯಾದ ಚಿರತೆ ಸೆರೆ ಕಾರ್ಯಾಚರಣೆಗೆ ಅಗತ್ಯವಿದ್ದರೆ ಮೈಸೂರು, ಚಾಮರಾಜ ನಗರದ ತಜ್ಞರ ತಂಡವನ್ನು ಕರೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಚಿರತೆ ಸೆರೆ ಕಾರ್ಯಾಚರಣೆ ಕುರಿತು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಗದಗ, ಧಾರವಾಡ, ಕಲಘಟಗಿ ಭಾಗಗಳಿಂದ‌ ಬಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಂಪಿಯಿಂದ ಸಫಾರಿ ವಾಹನ ತಂದು ಚಿರತೆ‌ ಪತ್ತೆ ಹಚ್ಚಿ ಸೆರೆ ಹಿಡಿಯಲು ಪ್ರಯತ್ನಿಸಲಾಗುವುದು. ಅರಿವಳಿಕೆ ತಜ್ಞರ ತಂಡವು ಸಹ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಕೇಂದ್ರೀಯ ವಿದ್ಯಾಲಯದ ಹಳೆ ಕಟ್ಟಡವನ್ನು ಚಿರತೆ ವಾಸಸ್ಥಾನ ಮಾಡಿಕೊಂಡಿರುವುದು ಖಚಿತವಾಗಿದೆ. ಅಲ್ಲಿ ಅದರ ಹೆಜ್ಜೆ ಹಾಗೂ ಉಗುರಿನಿಂದಾದ ಗೀರು ಗುರುತು ಪತ್ತೆಯಾಗಿದೆ. ಕಟ್ಟಡ ತೆರವು ಕಾರ್ಯಾಚರಣೆ ನಾಳೆಯಿಂದಲೇ ಆರಂಭವಾಗಲಿದೆ. ಇದರಿಂದ ಚಿರತೆ ಸ್ಥಳ ಬದಲಿಸಲಿದ್ದು, ಸುಲಭವಾಗಿ ಸೆರೆ ಹಿಡಿಯಬಹುದು ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ತಿಳಿಸಿದರು.

ಚಿರತೆ ಬಂದು ಒಂದು ವಾರ ಕಳೆದರೂ ಅದರ ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಸಾಧ್ಯವಾಗಿಲ್ಲ. ಕೈಯ್ಯಲ್ಲಿ ಬಡಿಗೆ ಹಿಡಿದುಕೊಂಡು ಓಡಾಡಿದರೆ ವರ್ಷವಾದರೂ ನಿಮ್ಮಿಂದ‌ ಚಿರತೆ ಹಿಡಿಯಲು ಆಗಲ್ಲ. ನಿಮ್ಮಿಂದ ಆಗದಿದ್ದರೆ ನಮ್ಮ ಹಿಂದೆ ಬನ್ನಿ, ನಾವೇ ಹಿಡಿಯುತ್ತೇವೆ. ನಿಮ್ಮ ವೈಫಲ್ಯದಿಂದ ನಾವು ಆತಂಕದಲ್ಲಿ ದಿನ ಕಳೆಯುವಂತಾಗಿದೆ ಎಂದು ಸಭೆಯಲ್ಲಿ ಶಿರಡಿ ನಗರ, ಶಕ್ತಿನಗರ, ಸಾಯಿನಗರ, ರಾಜನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ್, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಡಿಸಿಪಿ ಕೆ. ರಾಮರಾಜನ್, ತಹಶೀಲ್ದಾರ್ ಶಶಿಧರ ಮಾಡ್ಯಾಳ, ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ಹಾಗೂ ವೀರಣ್ಣ ಸವಡಿ, ವಿಜಯಾನಂದ ಹೊಸಕೋಟೆ, ಸಿದ್ದು ಮೊಗಲಿಶೆಟ್ಟರ್, ಎಂ.ಎಸ್. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.