ADVERTISEMENT

ಗೋಳ್ವಾಲ್ಕರ್, ಸಾವರ್ಕರ್ ಇಬ್ಬರೂ ರಾಷ್ಟ್ರಧ್ವಜ ವಿರೋಧಿಸಿದ್ದರು: ಸಿದ್ದರಾಮಯ್ಯ

'ಡೋಂಗಿ ರಾಷ್ಟ್ರಭಕ್ತಿ ಇರಬಾರದು'

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:04 IST
Last Updated 10 ಆಗಸ್ಟ್ 2022, 4:04 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಹುಬ್ಬಳ್ಳಿ: ‘ಡೋಂಗಿ ರಾಷ್ಟ್ರಭಕ್ತಿ ಇರಬಾರದು. ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋಳ್ವಾಲ್ಕರ್ ಮತ್ತು ಸಾವರ್ಕರ್ ಇಬ್ಬರೂ ರಾಷ್ಟ್ರಧ್ವಜವನ್ನು ವಿರೋಧಿಸಿದ್ದರು. ಈಗ, ಅದೇ ಸಂಘದ ಪಕ್ಷದವರು ಮನೆಮನೆಯಲ್ಲಿ ತ್ರಿವರ್ಣ ಅಭಿಯಾನ ಆರಂಭಿಸಿದ್ದಾರೆ. ಇದನ್ನೇ ಡೋಂಗಿ ರಾಜಕೀಯ ಎಂದು ಹೇಳಿದ್ದೇನೆ. ಇದರಲ್ಲಿ ರಾಜಕೀಯವೇನೂ ಇಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಆರ್‌ಎಸ್‌ಎಸ್‌ನವರು ತಮ್ಮ ಕಚೇರಿ ಮೇಲೆ ಎಂದಾದರೂ ಧ್ವಜ ಹಾರಿಸಿದ್ದಾರೆಯೇ? ಅಭಿಯಾನದ ಅಂಗವಾಗಿ ಆದರೂ ಹಾರಿಸುತ್ತಾರೆಯೇ? ರಾಷ್ಟ್ರಧ್ವಜದ ಜೊತೆಗೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಸಹ ಆರ್‌ಎಸ್‌ಎಸ್‌ನವರು ವಿರೋಧಿಸಿದ್ದರು’ ಎಂದರು.

‘ಸಮಾಜವಾದಿ ಹಿನ್ನೆಲೆಯ ಬಿಹಾರದ ನಿತೀಶ್‌ಕುಮಾರ್ ಮತ್ತು ಎನ್‌ಡಿಎ ಮೈತ್ರಿಯೊಂದಿಗೆ ಬಿರುಕಿನ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಕೋಮುವಾದಿ ಪಕ್ಷದ ಮೈತ್ರಿಯನ್ನು ತೊರೆದು ಮತ್ತೆ ಆರ್‌ಜೆಡಿ ಮತ್ತು ಕಾಂಗ್ರೆಸ್ ಸಖ್ಯ ಮಾಡಿ ಒಳ್ಳೆಯದನ್ನೇ ಮಾಡಿದ್ದಾರೆ’ ಎಂದರು.

ADVERTISEMENT

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕೆಲವರು ತಮ್ಮ ಕ್ಷೇತ್ರಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ. ಹೋದ ಕಡೆಯೆಲ್ಲಾ ಸ್ಪರ್ಧಿಸುವುದಕ್ಕೆ ಆಗುವುದಿಲ್ಲ. ಆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡ ಬಳಿಕ ತಿಳಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂಬುದರ ಕುರಿತು ನನಗೆ ಗೊತ್ತಿಲ್ಲ. ಹಿಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ಗೊತ್ತಿತ್ತು. ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುವ ಕುರಿತು ಮಾಹಿತಿ ಇಲ್ಲ. ಆ ಬಗ್ಗೆ ಮಾತನಾಡಿರುವವರನ್ನೇ ಕೇಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.