ADVERTISEMENT

ಹುಬ್ಬಳ್ಳಿ: ಜ.30 ರಿಂದ ಟೈಕಾನ್‌ ಸಮಾವೇಶ

ತಂತ್ರಜ್ಞಾನದ ಮೊರೆ ಹೋದ ಟೈ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 8:18 IST
Last Updated 26 ನವೆಂಬರ್ 2020, 8:18 IST
‘ಟೈಕಾನ್’ ಸಮಾವೇಶ
‘ಟೈಕಾನ್’ ಸಮಾವೇಶ   

ಹುಬ್ಬಳ್ಳಿ: ಕೋವಿಡ್‌ 19 ಹರುಡುವಿಕೆ ತಡೆಯುವ ಉದ್ದೇಶದಿಂದ ಟೈ ಹುಬ್ಬಳ್ಳಿ ಸಂಸ್ಥೆಯು 2021ರ ಜ.30 ಹಾಗೂ 31 ರಂದು ‘ಟೈಕಾನ್’ ಸಮಾವೇಶವನ್ನು ವರ್ಚುವಲ್‌ ಆಗಿ ಆಯೋಜಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾವೇಶ ಸಂಯೋಜಕ ವಿಜಯ್‌ ಮಾನೆ, ಕೋವಿಡ್‌ 19 ಅನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದೇವೆ. ಹುಬ್ಬಳ್ಳಿ ಹಾಗೂ ಸುತ್ತ–ಮುತ್ತಲಿನ ಜನರಿಗೆ ಸೀಮಿತವಾಗಿದ್ದ ಸಮಾವೇಶ ವೀಕ್ಷಣೆಯನ್ನು ಲೈವ್‌ ಸ್ಕ್ರೀನಿಂಗ್‌ ಮೂಲಕ ವಿಶ್ವದಾದ್ಯಂತ ವಿಸ್ತರಿಸುತ್ತಿದ್ದೇವೆ. ಅಂದಾಜು 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಹೊಸ ಉದ್ಯಮಿಗಳನ್ನು ಪ್ರೇರೇಪಿಸುವುದು. ಸಂಪನ್ಮೂಲ ಸಂಗ್ರಹಕ್ಕೆ ಮಾರ್ಗದರ್ಶನ ನೀಡುವುದು. ದೊಡ್ಡ ಉದ್ಯಮಿಗಳನ್ನು ಕರೆಯಿಸಿ, ಅವರಿಂದಲೇ ಅವರ ಸಾಧನೆಯ ಯಶೋಗಾಥೆಯನ್ನು ತಿಳಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಇದು 10ನೇ ಟೈಕಾನ್‌ ಸಮಾವೇಶವಾಗಿದೆ ಎಂದು ಹೇಳಿದರು.

ADVERTISEMENT

ಸಂಸ್ಥೆಯ ಹುಬ್ಬಳ್ಳಿ ಶಾಖೆ ಆರಂಭವಾಗಿ 13 ವರ್ಷಗಳಾಗಿದೆ. 225ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತರಬೇತಿ, ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ಸ್ಟಾರ್ಟ್‌ ಅಪ್‌ಗಳಿಗೆ ಬಹಳ ನೆರವಾಗಿದೆ ಎಂದರು.

ಹಿರಿಯ ಕ್ರೀಡಾಪಟು ಮಿಲ್ಕಾ ಸಿಂಗ್‌, ಮುಂಬೈ ಆಸ್ಪತ್ರೆಯ ಡಾ.ಗೌತಮ್‌ ಬನ್ಸಾಲಿ, ಅಮೆರಿಕದಲ್ಲಿರುವ ಭಾರತೀಯ ಮೂಲದ ಉದ್ಯಮಿ ಸಬಿರ್‌ ಭಾಟಿಯಾ ಮತ್ತಿತರರು ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಇನ್ನು ಹಲವು ಉದ್ಯಮಿಗಳ ಸಂಪರ್ಕದಲ್ಲಿದ್ದು, ಅವರೂ ಭಾಗವಹಿಸುವ ನಿರೀಕ್ಷೆ ಇದೆ. ಈ ವರ್ಷವೂ ‘ಇವನಿಂಗ್‌ ವಿತ್‌ ಲೆಜೆಂಡ್’ ಕಾರ್ಯಕ್ರಮವಿರಲಿದೆ ಎಂದು ಹೇಳಿದರು.

ಟೈ ಹುಬ್ಬಳ್ಳಿಯ ಹೆಮ್ಮೆ ಯೋಜನೆಯಡಿ ಶಿಕ್ಷಣ, ಆರೋಗ್ಯ, ರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮುಂತಾದ ಕೈಗಾರಿಕೆಗಳ ಮೂಲಕ ಸಮಾಜಕ್ಕೆ ಮೌಲ್ಯದ ಸಂದೇಶ 8 ರಿಂದ 10 ಸಂಸ್ಥೆಗಳ ಯಶೋಗಾಥೆಯನ್ನು ವಿಭಿನ್ನವಾಗಿ ತೋರಿಸಲಿದ್ದೇವೆ. ಟೈ ಹುಬ್ಬಳ್ಳಿ ಗಾಟ್‌ ಟ್ಯಾಲೆಂಟ್‌ನಡಿ ಗಿನ್ನಿಸ್‌, ವರ್ಲ್ಡ್, ನ್ಯಾಷನಲ್‌ ದಾಖಲೆ ಮಾಡಿದ ಪ್ರತಿಭೆಗಳಿದ್ದು, ಅವರ ಅದ್ಭುತ ಸಾಧನೆಯನ್ನು ಪ್ರದರ್ಶಿಸಲಿದ್ದೇವೆ ಎಂದರು.

‘ಎಕ್ಸ್‌ಪೋ ಅಲ್ಟಾ’ ಅನ್ನು ವರ್ಚುವಲ್‌ ಆಗಿ ಆಯೋಜಿಸಲಾಗಿದ್ದು, ಮನೆ ಅಥವಾ ಕಚೇರಿಯಲ್ಲಿ ಕುಳಿತು ತಮ್ಮ ಉತ್ಪನ್ನಗಳ ಪ್ರದರ್ಶನ ಮಾಡಬಹುದಾಗಿದೆ. ರಿಟೇಲ್‌, ಮ್ಯಾನ್ಯುಫಾಕ್ಚರಿಂಗ್, ಟೆಕ್ನಾಲಜಿ, ಸರ್ವಿಸ್‌, ಉತ್ತಮ ಉದ್ಯಮಿ ಸೇರಿದಂತೆ ಹಲವು ವಿಭಾಗಗಳಲ್ಲಿ ಟೈ ಬಿಸಿನೆಸ್‌ ಅವಾರ್ಡ್‌ ನೀಡಲಾಗುತ್ತದೆ ಎಂದು ಹೇಳಿದರು.

ಟೈ ಘಟಕದ ಅಧ್ಯಕ್ಷ ಅಜಯ್‌ ಹಂಡಾ ಮಾತನಾಡಿ, ಉದ್ಯಮಿಗಳಿಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಟೈ ಮಾಡುತ್ತಿದೆ. ಉದ್ಯಮಗಳಿಗೆ ಬೇಕಾದ ಎಲ್ಲ ರೀತಿಯ ಮಾರ್ಗದರ್ಶನ ನೀಡುತ್ತಿದೆ ಎಂದರು.

ಉದ್ಯಮಿ ವಿಜೇಶ ಸೈಗಲ್‌ ಮಾತನಾಡಿ, ಕೋವಿಡ್‌ 19 ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಪೂರ್ಣ ಪ್ರಮಾಣದ ಚೇತರಿಕೆಗೆ ಇನ್ನಷ್ಟು ಸಮಯ ಬೇಕಾಗಬಹುದು. ಕೇಂದ್ರ ಘೋಷಿಸಿದ ಆರ್ಥಿಕ ನೆರವಿನಿಂದ ಹಲವಾರು ಉದ್ಯಮಿಗಳಿಗೆ ಸಹಾಯವಾಗಿದೆ. ನುರಿತ ಕಾರ್ಮಿಕರ ಕೊರತೆ ಎದುರಿಸುತ್ತಿದ್ದೇವೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಯನ್ನು http;//tiecon.teihubli.org ಪಡೆಯಬಹುದು.

ಉದ್ಯಮಿ ಶಶಿಧರ್‌ ಶೆಟ್ಟರ್‌, ಗೌರವ ಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.