ADVERTISEMENT

ಮದ್ದೂರು ಕ್ಷೇತ್ರದ ಟಿಕೆಟ್‌ ವಿಚಾರವಾಗಿ ಗುರುಚರಣ್, ಉದಯ್‌ ಜತೆ ಡಿಕೆಶಿ ಸಮಾಲೋಚನೆ

ಮೈಸೂರಿನಲ್ಲಿ ನಡೆದ ಸಭೆ, ಮದ್ದೂರು ಕ್ಷೇತ್ರದಲ್ಲಿ ಮೂಡಿದ ಕುತೂಹಲ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 10:51 IST
Last Updated 16 ಫೆಬ್ರುವರಿ 2023, 10:51 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ಗುರುಚರಣ್‌ ಹಾಗೂ ಕದಲೂರು ಉದಯ್‌ ಅವರ ಜೊತೆ ಸಮಾಲೋಚನೆ ನಡೆಸುತ್ತಿರುವುದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ಗುರುಚರಣ್‌ ಹಾಗೂ ಕದಲೂರು ಉದಯ್‌ ಅವರ ಜೊತೆ ಸಮಾಲೋಚನೆ ನಡೆಸುತ್ತಿರುವುದು   

ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆಗೆ ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬುಧವಾರ ರಾತ್ರಿ ಇಬ್ಬರು ಪ್ರಮುಖ ಆಕಾಂಕ್ಷಿಗಳ ಸಭೆ ನಡೆಸಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿರುವ ಗುರುಚರಣ್‌ ಹಾಗೂ ಕದಲೂರು ಉದಯ್‌ ಅವರ ಜೊತೆ ಡಿಕೆಶಿ ಮೈಸೂರಿನಲ್ಲಿ ಸಭೆ ನಡೆಸಿರುವ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಇಬ್ಬರು ಆಕಾಂಕ್ಷಿಗಳಲ್ಲಿ ಅಂತಿಮವಾಗಿ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ದೊರೆಯಬೇಕಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಹೋದರನ ಪುತ್ರನಾಗಿರುವ ಎಸ್‌.ಗುರುಚರಣ್‌ ಅವರಿಗೆ ರಾಜಕೀಯ ಕೌಟಂಬಿಕ ಹಿನ್ನೆಲೆ ಇದೆ. ಇದೇ ಆಧಾರದ ಮೇಲೆ ಅವರು ಟಿಕೆಟ್‌ಗೆ ಒತ್ತಾಯ ಮಾಡುತ್ತಿದ್ದಾರೆ. ಎಸ್‌.ಎಂ.ಕೃಷ್ಣ ಅವರಿಗೆ ಸಂಬಂಧಿಯೂ ಆಗಿರುವ ಡಿ.ಕೆ.ಶಿವಕುಮಾರ್‌ ಗುರುಚರಣ್‌ಗೆ ಮಣೆ ಹಾಕುವರೇ ಎಂಬ ಪ್ರಶ್ನೆ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಾಡುತ್ತಿದೆ.

ADVERTISEMENT

ಉದ್ಯಮಿ ಕದಲೂರು ಉದಯ್‌ ಕಳೆದೊಂದು ವರ್ಷದಿಂದ ಮದ್ದೂರು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂಬ ಸಂದೇಶ ನೀಡಿದ್ದಾರೆ. ಆದರೆ ಅವರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಜನರಲ್ಲಿದೆ. ಪ್ರಭಾವಿ ಕಾಂಗ್ರೆಸ್‌ ಮುಖಂಡರು ಅವರ ಸಂಪರ್ಕದಲ್ಲಿದ್ದು ಉದಯ್‌ ಅವರಿಗೇ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಕಾಂಗ್ರೆಸ್‌ ಟಿಕೆಟ್‌ ಕೋರಿ ಕದಲೂರು ಉದಯ್‌ ಅರ್ಜಿ ಸಲ್ಲಿಸಿಲ್ಲ, ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಆದರೂ ಮುಖಂಡರು ಅವರಿಗೆ ಮಣೆ ಹಾಕಲಿದ್ದಾರೆ ಎಂದೇ ಕಾರ್ಯಕರ್ತರು ಹೇಳುತ್ತಾರೆ. ಜೆಡಿಎಸ್‌ ಅಭ್ಯರ್ಥಿ, ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಸೋಲಿಸುವ ಪ್ರಬಲ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್‌ ಇದೆ. ಅವರು ಗುರುಚರಣ್‌ ಅವರಾ, ಉದಯ್‌ ಅವರಾ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಉದಯ್‌ ಬಿಜೆಪಿ ಮುಖಂಡರ ಜೊತೆಗೂ ಸಂಪರ್ಕದಲ್ಲಿದ್ದು ಬಿಜೆಪಿ ಟಿಕೆಟ್‌ಗೂ ಯತ್ನಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಡಿ.ಸಿ.ತಮ್ಮಣ್ಣ ವಿರುದ್ಧ ನಿಲ್ಲುವ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬುದು ಕುತೂಹಲ ಮೂಡಿಸಿದೆ.

‘ಸಮಾಲೋಚನೆ ನಡೆಸಿರುವ ಮಾಹಿತಿ ನಮಗೆ ತಿಳದಿಲ್ಲ. ಮದ್ದೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಅಂತಿಮ ನಿರ್ಧಾರ ಶೀಘ್ರ ಹೊರಬೀಳಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.