ADVERTISEMENT

ಎಲ್‌ಐಸಿ ಖಾಸಗೀಕರಣ ಬೇಡ: ಮನವಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 15:29 IST
Last Updated 16 ಮಾರ್ಚ್ 2021, 15:29 IST
ಎಲ್‌ಐಸಿ ಖಾಸಗೀಕರಣಗೊಳಿಸದಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಶಾಖೆ ಜಿಲ್ಲಾ ಸಂಘದ ಪದಾಧಿಕಾರಿಗಳು ಕೋಲಾರದಲ್ಲಿ ಮಂಗಳವಾರ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಎಲ್‌ಐಸಿ ಖಾಸಗೀಕರಣಗೊಳಿಸದಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಶಾಖೆ ಜಿಲ್ಲಾ ಸಂಘದ ಪದಾಧಿಕಾರಿಗಳು ಕೋಲಾರದಲ್ಲಿ ಮಂಗಳವಾರ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಖಾಸಗೀಕರಣಗೊಳಿಸದಂತೆ ಒತ್ತಾಯಿಸಿ ಭಾರತೀಯ ಜೀವ ವಿಮಾ ಶಾಖೆ ಜಿಲ್ಲಾ ಸಂಘದ ಪದಾಧಿಕಾರಿಗಳು ಇಲ್ಲಿ ಮಂಗಳವಾರ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎಲ್‌ಐಸಿ ಖಾಸಗೀಕರಣಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ವಿಮೆದಾರರ ಜೀವನದ ಜತೆ ಚೆಲ್ಲಾಟವಾಡುತ್ತಿದೆ’ ಎಂದು ಸಂಘದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಸಚಿವೆ ನಿರ್ಮಲಾ ಸೀತಾರಾಮನ್‌ ಎಲ್‌ಐಸಿಯನ್ನು ಷೇರು ಬಂಡವಾಳ ಮಾರುಕಟ್ಟೆಯಲ್ಲಿ ನೋಂದಾಯಿಸಿ ಸ್ವಲ್ಪ ಪ್ರಮಾಣದ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ ಬರುವ ಹಣದಿಂದ ವಿತ್ತಿಯ ಕೊರತೆ ಸರಿದೂಗಿಸುವುದಾಗಿ ಹೇಳಿದ್ದಾರೆ. ಎಲ್ಐಸಿಯನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆ’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಕೆ.ಮುರಳಿ ದೂರಿದರು.

ADVERTISEMENT

‘ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಪಾತಾಳಕ್ಕೆ ಕುಸಿದಿದೆ. ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಎಲ್‌ಐಸಿ ಷೇರು ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಮಾಡುವ ಸರ್ಕಾರ ನಡೆಸಲು ಹೊರಟಿದೆ’ ಎಂದು ಕಿಡಿಕಾರಿದರು.

ಸಂಚಕಾರ: ‘ಎಲ್‌ಐಸಿಯಲ್ಲಿ 1.20 ಲಕ್ಷ ನೌಕರರು, 12 ಲಕ್ಷ ಮಂದಿ ಪ್ರತಿನಿಧಿಗಳು ಹಾಗೂ 30 ಕೋಟಿ ಪಾಲಿಸಿದಾರರು ಇದ್ದಾರೆ. ಕೇಂದ್ರವು ಈ ನೌಕರರು ಹಾಗೂ ಪಾಲಿಸಿದಾರರ ಜೀವನೋಪಾಯಕ್ಕೆ ಸಂಚಕಾರ ತರಲು ಹೊರಟಿದೆ. ಕೇಂದ್ರವು ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಪರವಾದ ಧೋರಣೆ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರವು ಈಗಾಗಲೇ ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿದೆ. ವಿಮಾ ಕ್ಷೇತ್ರದ ದೈತ್ಯ ಸಂಸ್ಥೆ ಹಾಗೂ ಕೋಟ್ಯಂತರ ಗ್ರಾಹಕರ ಜೀವನಾಡಿಯಾಗಿರುವ ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ನಿರ್ಧಾರ ಕೈಬಿಡಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಗೌರಿಶಂಕರ್, ಸದಸ್ಯರಾದ ರಾಮಕೃಷ್ಣ, ಶ್ರೀಧರ್, ಕೆ.ಎಸ್‌.ಕುಮಾರ್, ಶ್ರೀಕಾಂತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.