ADVERTISEMENT

ಅಮೆಜಾನ್‌ ಲಂಚ ಹಗರಣ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:50 IST
Last Updated 10 ಅಕ್ಟೋಬರ್ 2021, 5:50 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಗದಗ: ‘ಮಾಧ್ಯಮಗಳ ತನಿಖಾ ವರದಿಯಿಂದ ಬಹಿರಂಗಗೊಂಡಿರುವ ಅಮೆಜಾನ್‌ ಬ್ರೈಬರಿ ಸ್ಕ್ಯಾಮ್‌ ಬಗ್ಗೆ ಪ್ರಧಾನಿ ಮೋದಿ ಅವರು ತುಟಿಬಿಚ್ಚುತ್ತಿಲ್ಲ. ₹8,586 ಕೋಟಿ ಹಣ ಯಾವ ರಾಜಕಾರಣಿ, ಅಧಿಕಾರಿಗಳಿಗೆ ಹೋಗಿದೆ? ಎಂಬ ಸತ್ಯ ಹೊರಬರಬೇಕು. ಅದಕ್ಕಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ನೇತೃತ್ವದಲ್ಲಿ ತಂಡ ರಚಿಸಿ, ಸಮಗ್ರ ತನಿಖೆ ನಡೆಸಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಒತ್ತಾಯಿಸಿದರು.

ಶನಿವಾರ ಗದುಗಿನಲ್ಲಿ ಮಾತನಾಡಿದ ಅವರು,‘ರೈತರ ಕೂಗಿಗೆ ಸ್ಪಂದಿಸದ ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರಗಳು ಈಗ ಜನರ ಆಕ್ರೋಶಕ್ಕೆ ಗುರಿಯಾಗಿವೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಿರಿ ಎಂಬ ಬೇಡಿಕೆಗೆ ಸ್ಪಂದಿಸುವ ಬದಲು ರೈತರನ್ನು ಬಲಿ ಪಡೆದುಕೊಂಡಿದ್ದು ದುರ್ದೈವದ ಸಂಗತಿ’ ಎಂದರು.

‘ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾರ ಮಗ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ ಕೊಲೆ ಮಾಡಿರುವ ಕೃತ್ಯ ಜಗಜ್ಜಾಹೀರಾಗಿದೆ.ಇಷ್ಟಾದರೂ ಆರೋಪಿಯನ್ನು ಬಂಧಿಸಿಲ್ಲ.ಪ್ರಧಾನಿ ಮೋದಿ ಅವರು ಸಹೋದ್ಯೋಗಿ ಮೇಲೂ ಕ್ರಮ ಜರುಗಿಸಿಲ್ಲ’ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರಾಜ್ಯದಲ್ಲಿ ನಡೆದ ಐಟಿ ದಾಳಿಗೆ ಪ್ರತಿಕ್ರಿಯಿಸಿದ ಅವರು,‘ಚಾಲಕ ಕಂ ನಿರ್ವಾಹಕನ ಬಳಿ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಜನರು ಕಟ್ಟಿದ ತೆರಿಗೆ ಹಣ ಈಗ ಕೆಲವರ ಪಾಲಾಗುತ್ತಿದೆ.ಈ ಪ್ರಕರಣದ ಹಿಂದಿರುವ ಸರ್ಕಾರಿ ಅಧಿಕಾರಿಗಳನ್ನು ಮುಖ್ಯಮಂತ್ರಿ ತಕ್ಷಣವೇ ಅಮಾನತುಗೊಳಿಸಬೇಕು.ತನಿಖೆ ನಡೆಸಿ ಭ್ರಷ್ಟರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.