ADVERTISEMENT

ಪುಟ್ಟರಾಜ ಗವಾಯಿ 11ನೇ ಪುಣ್ಯಸ್ಮರಣೋತ್ಸವ

‘ಶಿವಯೋಗಿ ಶ್ರೀ ಪುಟ್ಟರಾಜ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:13 IST
Last Updated 17 ಸೆಪ್ಟೆಂಬರ್ 2021, 2:13 IST
ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ. ಪಂಡಿತ್‌ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ನಡೆದ ಶಿವಯೋಗಿ ಡಾ. ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳವರ 11ನೇ ಪುಣ್ಯಸ್ಮರಣೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಂ. ಫಕ್ಕಿರೇಶ ಕಣವಿ, ಪೌರೋಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಎಸ್.ಶಶಿಧರ ಶಾಸ್ತ್ರಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರಿಗೆ ‘ಶಿವಯೋಗಿಶ್ರೀ ಪುಟ್ಟರಾಜ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ. ಪಂಡಿತ್‌ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ನಡೆದ ಶಿವಯೋಗಿ ಡಾ. ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳವರ 11ನೇ ಪುಣ್ಯಸ್ಮರಣೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಂ. ಫಕ್ಕಿರೇಶ ಕಣವಿ, ಪೌರೋಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಎಸ್.ಶಶಿಧರ ಶಾಸ್ತ್ರಿ ಹಾಗೂ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅವರಿಗೆ ‘ಶಿವಯೋಗಿಶ್ರೀ ಪುಟ್ಟರಾಜ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಗದಗ: ‘ಒಂದು ದೀಪ ಉರಿದು ಶಾಂತವಾದರೆ ಅದಕ್ಕೆ ಸಾವು ಇದೇ ಎಂದರ್ಥ. ಆದರೆ, ಒಂದು ದೀಪ ಸಾವಿರಾರು ದೀಪಗಳನ್ನು ಉರಿಸಿದರೆ ಅದು ಅಮರದೀಪ. ಅದರಂತೆ ಪುಟ್ಟರಾಜ ಗವಾಯಿಗಳು ಅಮರದೀಪವಾಗಿದ್ದಾರೆ’ ಎಂದು ಶಿವಾನಂದಮಠದ ಸದಾಶಿವಾನಂದ ಸ್ವಾಮೀಜಿ ಬಣ್ಣಿಸಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ. ಪಂಡಿತ್‌ ಪುಟ್ಟರಾಜ ಸೇವಾ ಸಮಿತಿ ವತಿಯಿಂದ ನಡೆದ ಶಿವಯೋಗಿ ಡಾ. ಪಂಡಿತ್‌ ಪುಟ್ಟರಾಜ ಕವಿ ಗವಾಯಿಗಳವರ 11ನೇ ಪುಣ್ಯಸ್ಮರಣೋತ್ಸವ, ಶಿವ
ಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಹಾಗೂ ಅಹೋರಾತ್ರಿ ಸಂಗೀತ ಸ್ವರನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಯಾರು ದೀನ-ದಲಿತರು, ಅಂಧ-ಅನಾಥರ ಸೇವೆ ಮಾಡುತ್ತಾರೋ ಅವರನ್ನು ಸಮಾಜ ಸದಾ ಸ್ಮರಿಸುತ್ತಾರೆ ಎನ್ನುವುದಕ್ಕೆ ಶಿವಸ್ವರೂಪಿ ಶಿವಯೋಗಿ ಲಿಂ. ಪಂ. ಪುಟ್ಟರಾಜ ಗವಾಯಿಗಳು ಸಾಕ್ಷಿ’ ಎಂದು ಹೇಳಿದರು.

ADVERTISEMENT

‘ಪಂ.ಪುಟ್ಟರಾಜ ಗವಾಯಿಗಳು ಭವ ಬಂಧನದಿಂದ ಹೊರಬಂದು ಸಿದ್ಧಿ ಪಡೆದು ಶಿವಯೋಗಿಗಳಾಗಿರುವುದು ಸಾಮಾನ್ಯದ ವಿಷಯವಲ್ಲ. ಇಂತಹ ಮಹಾನ್‌ ಪುರುಷರು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಪುಣ್ಯಾಶ್ರಮದ ಮಕ್ಕಳಿಗೆ ಸಂಗೀತ, ಪ್ರಸಾದ ಹಾಗೂ ಶಿಕ್ಷಣ ದೊರೆತು ಸಮಾಜದಲ್ಲಿ ಅವರೂ ಸಹ ನಿರ್ಭಯವಾಗಿ ಬದುಕಬೇಕು ಎಂಬ ಮಹದಾಸೆ ಹೊಂದಿದ್ದರು. ಅವರ ಆಸೆ ಮತ್ತು ಸೇವೆಯನ್ನು ಇಂದಿನ ಪೀಠಾಧಿಪತಿ ಕಲ್ಲಯ್ಯಜ್ಜನವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದರು.

ಕೊಪ್ಪಳದ ಜಂಗಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಷಡಕ್ಷರಯ್ಯ ನವಲಿಹಿರೇಮಠ ಮಾತನಾಡಿ, ‘ಲಕ್ಷಾಂತರ ಜನರಿಗೆ
ಅನ್ನ, ವಿದ್ಯೆ ದಾಸೋಹ, ಅಂಧ-ಅನಾಥರಿಗೆ ಅಭಯಹಸ್ತ ನೀಡಿದ ಪುಣ್ಯಕ್ಷೇತ್ರ ಗದುಗಿನವೀರೇಶ್ವರ ಪುಣ್ಯಾಶ್ರಮವಾಗಿದೆ. ನಾಡಿದ್ಯಾಂತ ಇರುವ ಸುಮಾರು 3,600ಕ್ಕೂ ಹೆಚ್ಚು ಮಠಗಳು ಮಕ್ಕಳಿಗೆ ಅನ್ನ ಹಾಗೂ ವಿದ್ಯೆ ನೀಡಿ ಸರ್ಕಾರದ ಅರ್ಧ ಕೆಲಸವನ್ನು ಮಾಡುತ್ತಿವೆ’ ಎಂದು ಹೇಳಿದರು.

ಸೇವಾ ಸಮಿತಿ ಅಧ್ಯಕ್ಷ ಶಿವಲಿಂಗಶಾಸ್ತ್ರಿ ಸಿದ್ದಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ಬಿ.ಶ್ರೀರಾಮುಲು ಅವರ ಅಪ್ತ ಸಹಾಯಕ ಎಸ್.ಎಚ್.ಶಿವನಗೌಡ್ರ, ಉದ್ಯಮಿ ರಾಜು ಗುಡಿಮನಿ, ಕಿರಣ ಭೂಮಾ, ಕಲ್ಲಯ್ಯ ಸಂಕಿನಮಠ, ಪಂಚಾಕ್ಷರ ಹಿಡ್ಕಿಮಠ, ಸಿದ್ಧೇಶ್ವರ ಶಾಸ್ತ್ರಿ, ಮಲ್ಲು ದೇಸಾಯಿ ಬೀಳಗಿ ಇದ್ದರು.

ಸಿದ್ಧೇಶ್ವರ ಶಾಸ್ತ್ರಿ ಬೂದಿಹಾಳ ನಿರೂಪಿಸಿದರು. ಮಡಿವಾಳೇಶ್ವರ ಶಾಸ್ತ್ರಿ ಜೆರಟಗಿ ಸ್ವಾಗತಿಸಿದರು. ಕುಮಾರೇಶ್ವರ ಕೃಪಾ ಪೋಷಿತ ಪಂ.ಪಂ.ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ನಂತರ ಅಹೋರಾತ್ರಿ ಸಂಗೀತ ಸ್ವರನಮನ ಕಾರ್ಯಕ್ರಮ ನಡೆಯಿತು.

ಪಂ. ಪುಟ್ಟರಾಜ ಗವಾಯಿಗಳವರ ಪಾದ ಸ್ಪರ್ಶದಿಂದ ಈ ಕ್ಷೇತ್ರ ಪವಿತ್ರವಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದವರು ಪುಣ್ಯವಂತರು

ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ಅಡ್ನೂರ- ಗದಗ ದಾಸೋಹ ಮಠ

‘ಜಯಂತ್ಯುತ್ಸವ ಆಚರಿಸಲು ಕ್ರಮವಹಿಸಿ’

‘ನಾಡಿನಾದ್ಯಂತ ಇರುವ ಅಂಧ- ಅನಾಥರ ಬಾಳನ್ನು ಬೆಳಗಿದ ಲಿಂಗೈಕ್ಯ ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳವರ ಜಯಂತಿಯನ್ನು ಸರ್ಕಾರವೇ ಆಚರಿಸಬೇಕು ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರ ಭಕ್ತರ ಬೇಡಿಕೆ ಈಡೇರಿಸಲು ಕ್ರಮವಹಿಸಬೇಕು’ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.