ADVERTISEMENT

ಉ.ಕ ಕೈಗಾರಿಕೋದ್ಯಮ ಅಭಿವೃದ್ಧಿಗೆ ಒತ್ತು: ಆನಂದ್‌ ಪೊತ್ನೀಸ್‌

ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ‘ಪರಿವರ್ತನ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:34 IST
Last Updated 22 ಸೆಪ್ಟೆಂಬರ್ 2021, 3:34 IST
ಆನಂದ್‌ ಪೊತ್ನೀಸ್‌
ಆನಂದ್‌ ಪೊತ್ನೀಸ್‌   

ಗದಗ: ‘ಕೈಗಾರಿಕೋದ್ಯಮಕ್ಕೆ ಸೂಕ್ತ ಪ್ರೋತ್ಸಾಹ ದೊರಕದ ಕಾರಣ ಉತ್ತರ ಕರ್ನಾಟಕದ ಬೆಳವಣಿಗೆ ಕುಂಠಿತಗೊಂಡಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ತಡೆಯಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪರಿಹಾರೋಪಾಯ ಕಂಡುಕೊಳ್ಳಲು ಸೆ.25 ಮತ್ತು 26ರಂದು ನಗರದಲ್ಲಿ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಆನಂದ ಎಲ್. ಪೊತ್ನೀಸ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪರಿವರ್ತನ’ ಹೆಸರಿನ ಅಡಿಯಲ್ಲಿ ಆಯೋಜಿಸಿರುವ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಪೂರಕ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸುವುದರ ಜತೆಗೆ ಕೈಗಾರಿಕೋದ್ಯಮಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಚಿಂತನ-ಮಂಥನ ನಡೆಸಲಾಗುವುದು. ಈ ಸಮ್ಮೇಳನ ಮೊದಲಬಾರಿಗೆ ಗದಗ ನಗರದಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿವರ್ಷ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ’ ಎಂದು ಅವರು ಹೇಳಿದರು.

‘ಗದುಗಿನ ಎಪಿಎಂಸಿ ಯಾರ್ಡ್‍ನಲ್ಲಿರುವ ಕೆ.ಎಚ್.ಪಾಟೀಲ ಸಭಾಭವನದಲ್ಲಿ ನಡೆಯುವ ಸಮ್ಮೇಳನವನ್ನು ಸೆ.25ರಂದು ಸಂಜೆ 4ಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಶಾಸಕರಾದ ಎಚ್.ಕೆ.ಪಾಟೀಲ, ಕಳಕಪ್ಪ ಬಂಡಿ,ಎಸ್.ವಿ. ಸಂಕನೂರ, ರಾಮಣ್ಣ ಲಮಾಣಿ, ವೀರಣ್ಣ ಚರಂತಿಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಉತ್ತರ ಕರ್ನಾಟಕ ಜಿಲ್ಲೆಗಳ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿಗಳಿಗೆ ಸನ್ಮಾನ ನಡೆಯಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಸೆ.26ರಂದು ಬೆಳಿಗ್ಗೆ 10ರಿಂದ 11.30ರ ನಡುವೆ ನಾಲ್ಕು ವಿಚಾರಗೋಷ್ಠಿಗಳು ನಡೆಯಲಿವೆ.ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ 16 ಜಿಲ್ಲೆಗಳ 300ರಿಂದ 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ವೀರೇಶ ಕೂಗು, ಉಪಾಧ್ಯಕ್ಷರಾದ ಈಶ್ವರಪ್ಪ ಮುನವಳ್ಳಿ, ಮಧುಸೂಧನ ಪುಣೇಕರ, ಮಾಜಿ ಅಧ್ಯಕ್ಷರಾದ ಎಚ್.ವಿ.ಶಾನಭೋಗರ, ಎಸ್.ಪಿ.ಸಂಶಿಮಠ, ತೋಂಟೇಶ (ರಾಜು) ಕುರಡಗಿ, ಶೇಖಣ್ಣ ಗದ್ದಿಕೇರಿ, ಪದಾಧಿಕಾರಿಗಳಾದ ಸದಾಶಿವಯ್ಯ ಮದರಿಮಠ, ಹರೀಶ ಶಹಾ, ಸೋಮನಾಥ ಜಾಲಿ, ನಾಗೇಶ ಹುಬ್ಬಳ್ಳಿ, ರಾಜು ಗುಡಿಮನಿ ಇದ್ದರು.

ಸಮ್ಮೇಳನದಲ್ಲಿ ಕೈಗಾರಿಕೋದ್ಯಮ ಅಭಿವೃದ್ಧಿಗೆ ತೊಡಕಾಗಿರುವ ವಿಚಾರಗಳ ಬಗ್ಗೆ ಚರ್ಚಿಸಿ, ಪರಿಹಾರಕ್ಕೆ ನೆರವಾಗುವ ಅಂಶಗಳನ್ನು ಕ್ರೋಡೀಕರಿಸಿ ಸಲ್ಲಿಸಲಾಗುವುದು

ಆನಂದ ಪೊತ್ನೀಸ್‌, ಗದಗ ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ

ಸೆ.26ರಂದು ಸಿಎಂ ಬೊಮ್ಮಾಯಿ ಭಾಗಿ

ಸೆ.26ರಂದು ಮಧ್ಯಾಹ್ನ 12ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.

ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್, ಸಂಸದ ಶಿವಕುಮಾರ ಉದಾಸಿ, ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಉಪಸ್ಥಿತರಿದ್ದು, ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಆನಂದ ಎಲ್. ಪೊತ್ನೀಸ್ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.