ADVERTISEMENT

ಬಂಡಾಯ ನಗರಿಯಲ್ಲಿ ಶುದ್ಧ ನೀರಿಗೆ ಬವಣೆ: 24x7 ಯೋಜನೆ ಇದೆ; ನಳದಲ್ಲಿ ನೀರಿಲ್ಲ..!

ಬಸವರಾಜ ಹಲಕುರ್ಕಿ
Published 13 ಮೇ 2019, 19:45 IST
Last Updated 13 ಮೇ 2019, 19:45 IST
ನರಗುಂದ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಕೆರೆಯಿಂದ ನೀರು ತರುತ್ತಿರುವ ದೃಶ್ಯ
ನರಗುಂದ ತಾಲ್ಲೂಕಿನ ಭೈರನಹಟ್ಟಿಯಲ್ಲಿ ಕೆರೆಯಿಂದ ನೀರು ತರುತ್ತಿರುವ ದೃಶ್ಯ   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಈ ಬೇಸಿಗೆಗೆ ಸಾಲುವಷ್ಟು ನೀರಿನ ಸಂಗ್ರಹ ಇದ್ದರೂ, ಅದು ಸಮರ್ಪಕವಾಗಿ ನಳದ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಜಾರಿಗೊಂಡ ಮಲಪ್ರಭಾ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಇದರಿಂದ ಕೆಲವಡೆ ನೀರಿನ ಹಾಹಾಕಾರ ಉಂಟಾಗಿದೆ.

ತಾಲ್ಲೂಕಿನಲ್ಲಿ 33 ಹಳ್ಳಿಗಳಿದ್ದು ಈ ಎಲ್ಲ ಹಳ್ಳಿಗಳಿಗೆ ನವಿಲುತೀರ್ಥ ಬಳಿಯ ಮಲಪ್ರಭಾ ಜಲಾಶಯದಿಂದ ನೀರು ಪೂರೈಕೆಯಾಗುತ್ತದೆ. ಈ ಜಲಾಶಯದ ನೀರನ್ನು ಮಲಪ್ರಭಾ ಕಾಲುವೆ ಮೂಲಕ ಹರಿಸಿ, ಪ್ರಮುಖ ಕೆರೆಗಳನ್ನು ತುಂಬಿಸಿರುವುದರಿಂದ ಈ ಬಾರಿ ನೀರಿನ ಸಮಸ್ಯೆ ಹಿಂದಿನ ವರ್ಷಗಳಷ್ಟು ಗಂಭೀರ ಸ್ವರೂಪದಲ್ಲಿ ಇಲ್ಲ.

ನರಗುಂದ ಪಟ್ಟಣಕ್ಕೆ ಪ್ರತ್ಯೇಕವಾಗಿ ₹65 ಕೋಟಿ ವೆಚ್ಚದಲ್ಲಿ ನವಿಲುತೀರ್ಥ ಜಲಾಶಯದಿಂದ 24x7 ನಿರಂತರ ನೀರು ಪೂರೈಕೆ ಯೋಜನೆ ಜಾರಿಗೊಂಡಿದೆ. ಆದರೆ, ಪಟ್ಟಣದ ಎಲ್ಲ ಪ್ರದೇಶಗಳಿಗೂ ಇದರ ಭಾಗ್ಯ ಲಭಿಸಿಲ್ಲ. ಹೀಗಾಗಿ ಜನ ಕುಡಿಯಲು ಕೆಂಪಗೆರೆ ಕೆರೆಯನ್ನೇ ಆಶ್ರಯಿಸುವಂತಾಗಿದೆ. ಕೆರೆಯ ನೀರು 10ರಿಂದ 12 ದಿನಗಳಿಗೊಮ್ಮೆ ನಳದ ಮೂಲಕ ಪೂರೈಕೆಯಾಗುತ್ತಿದೆ.

ADVERTISEMENT

ಪಟ್ಟಣದಲ್ಲಿ 10 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇದರಲ್ಲಿ 7 ಮಾತ್ರ ಚಾಲನೆಯಲ್ಲಿವೆ. ಕೆಲವು ಓಣಿಗಳ ನಾಗರಿಕರು ಕುಡಿಯುವ ನೀರಿಗೆ ಅಲೆದಾಡಬೇಕಾದ ಸ್ಥಿತಿಯೂ ಇದೆ. ಮಲಪ್ರಭಾ ಜಲಾಶಯದ ನೀರು ಪೂರೈಕೆಯಾಗದ ಪ್ರದೇಶಗಳಲ್ಲಿ 10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ.

ಭೈರನಹಟ್ಟಿ ಗ್ರಾಮದಲ್ಲಿ ನಳದ ಮೂಲಕ ನೀರು ಪೂರೈಕೆಯಾಗುತ್ತಿಲ್ಲ. ಇತ್ತೀಚೆಗೆ 24x7 ಯೋಜನೆಯ ಪೈಪ್‌ಲೈನ್‌ ಮೂಲಕ ಕೆಲವು ಓಣಿಗಳಿಗೆ ನೀರು ಪೂರೈಕೆಯಾಗುತ್ತಿದೆ. ಚಿಕ್ಕನರಗುಂದಲ್ಲಿ ಈ ಯೋಜನೆ ಇದ್ದರೂ, ಕೊಳವೆಬಾವಿ ನೀರನ್ನು ಈ ನೀರಿನ ಜತೆಗೆ ಮಿಶ್ರಣ ಮಾಡಿ ಬಿಡುವುದರಿಂದ ಕುಡಿಯಲಿಕ್ಕೆ ಯೋಗ್ಯವಾಗಿಲ್ಲ ಎನ್ನುವುದು ಜನರ ದೂರು. ಹದಲಿಯಲ್ಲೂ ಸವಳು ನೀರು ಪೂರೈಕೆಯಾಗುವುದರಿಂದ ಜನರು ಕುಡಿಯಲು ಕೆರೆ ನೀರನ್ನೇ ಆಶ್ರಯಿಸಿದ್ದಾರೆ. ಬನಹಟ್ಟಿ, ಸುರಕೋಡ, ಕುರ್ಲಗೇರಿಯಲ್ಲಿ ಮಲಪ್ರಭಾ ನೀರು ಪೂರೈಕೆಯಾಗುತ್ತಿದ್ದು ದೊಡ್ಡ ಸಮಸ್ಯೆ ಎದುರಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.