ADVERTISEMENT

ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಸೆ.27ರಂದು ಹಾಸನ ಬಂದ್‌ಗೆ ಕರೆ

ಮೂರು ಕೃಷಿ ಕಾಯ್ದೆ: ದೆಹಲಿ ರೈತರ ಹೋರಾಟಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 14:04 IST
Last Updated 21 ಸೆಪ್ಟೆಂಬರ್ 2021, 14:04 IST
ಧರ್ಮೇಶ್‌
ಧರ್ಮೇಶ್‌   

ಹಾಸನ: ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ಮೇರೆಗೆ ಜಿಲ್ಲೆಯಲ್ಲಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ, ಕನ್ನಡ ಮತ್ತು ಜನಪರ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದಸೆ.27ರಂದು ‘ಹಾಸನ ಬಂದ್‌’ಗೆ ಕರೆ ನೀಡಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ಹೇಳಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆಪಡೆಯುವಂತೆ ಒತ್ತಾಯಿಸಿ ಹತ್ತು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟನಡೆಸುತ್ತಿದ್ದರೂ ಸರ್ಕಾರ ಉದಾಸೀನ ಮಾಡುತ್ತಿದೆ. ವಿದ್ಯುತ್ ಮಸೂದೆ ರದ್ದು ಮಾಡಬೇಕು. ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇಕಡಾ 50ರಷ್ಟು ಲಾಭವನ್ನು ಖಾತರಿ ಮಾಡುವ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೆ ತರಬೇಕು. ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಹೋರಾಟ–ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಬಂದ್‌ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷಿ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಲು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿ ಕೂಲಿಕಾರರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರ ಬದುಕು, ಆಹಾರ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ ಗೋ ಹತ್ಯೆ ನಿಷೇಧ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದರು.

ADVERTISEMENT

ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳಿಂದ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಳನ್ನು ತಂದ ನಾಲ್ಕು ಕಾರ್ಮಿಕ ಸಂಹಿತೆಗಳಾಗಿ ಮಾರ್ಪಡಿಸಿರುವ ಕ್ರಮವನ್ನು ಕೈ ಬಿಡಬೇಕು.ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಕೇಂದ್ರ ಸರ್ಕಾರ ನಡೆಸಿರುವ ಹಗಲು ದರೋಡೆ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಬಂದ್‌ಗೆ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯವಜನ, ಮಹಿಳೆಯರು, ಕನ್ನಡ ಪರ ಸಂಘಟನೆಗಳು, ವರ್ತಕರು, ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾಸಂಚಾಲಕ ರಾಜಶೇಖರ್‌, ಅಜಾದ್‌ ಟಿಪ್ಪು ಸಂಘದ ಮುಬಷಿರ್‌ ಅಹಮದ್‌, ಕರ್ನಾಟಕ ಪ್ರಾಂತ ರೃತಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌, ರೈತ ಸಂಘದ ರಾಜ್ಯ ಸಂಚಾಲಕಎಸ್‌.ಮೊಹಮದ್‌ ಸಾದಿಕ್‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.