ADVERTISEMENT

ಹಾಸನ: ಫಸಲ್ ಬಿಮಾ ಯೋಜನೆ ನೋಂದಣಿಗೆ ರೈತರ ನಿರಾಸಕ್ತಿ

ಅರಸೀಕೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ನೋಂದಣಿ, ಉಳಿದೆಡೆ ಆಸಕ್ತಿ ತೀರಾ ಕಡಿಮೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 8:19 IST
Last Updated 20 ಸೆಪ್ಟೆಂಬರ್ 2021, 8:19 IST
ಸಕಲೇಶಪುರ ಭಾಗದಲ್ಲಿ ಭತ್ತದ ಸಸಿ ಕೀಳುತ್ತಿರುವ ಕೂಲಿ ಕಾರ್ಮಿಕರು
ಸಕಲೇಶಪುರ ಭಾಗದಲ್ಲಿ ಭತ್ತದ ಸಸಿ ಕೀಳುತ್ತಿರುವ ಕೂಲಿ ಕಾರ್ಮಿಕರು   

ಹಾಸನ: ಕರ್ನಾಟಕ ರೈತ ಸುರಕ್ಷಾ –ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ನೋಂದಣಿಗೆ ಅರಸೀಕೆರೆ ತಾಲ್ಲೂಕಿನ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಉಳಿದ ತಾಲ್ಲೂಕಿನಲ್ಲಿ ರೈತರು ಅಷ್ಟೊಂದು ಮುಂದಾಗುತ್ತಿಲ್ಲ. ಆದರರೆ, ಮೂರು ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಬಾರಿ ನೋಂದಣಿ ಮಾಡಿಕೊಂಡಿರುವ ಸಂಖ್ಯೆ ದುಪ್ಪಟ್ಟಾಗಿದೆ.

2019-20ನೇ ಸಾಲಿನಲ್ಲಿ 12,498 ರೈತರು, 2020-21ನೇ ಸಾಲಿನಲ್ಲಿ 24,654 ಹಾಗೂ 2021-22ನೇ ಸಾಲಿನಲ್ಲಿ 28,585 ರೈತರು (ಸೆ. 9ರವರೆಗೆ) ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು ನೋಂದಣಿಯ ಶೇ 80 ರಿಂದ 90 ಭಾಗ ಅರಸೀಕೆರೆ ತಾಲ್ಲೂಕಿನ ರೈತರಿದ್ದಾರೆ. ಈ ವರ್ಷವೂ ಅರಸೀಕೆರೆಯ 26,202 ಮಂದಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಕೆಲವೆಡೆ ಮಳೆಯಾಶ್ರಿತವಾದರೆ, ಕೆಲವೆಡೆ ನೀರಾವರಿ ಸೌಲಭ್ಯವಿದೆ. ಸಕಲೇಶಪುರ ಭಾಗದಲ್ಲಿ ಹೆಚ್ಚು ಮಳೆ ಸುರಿದರೆ, ಅರಸೀಕೆರೆ ಭಾಗದಲ್ಲಿ ಬರಗಾಲ ಆವರಿಸುತ್ತದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರ ಬೆಳೆ ನಾಶವಾಗುತ್ತಿದ್ದು, ಬೆಳೆ ವಿಮೆ ನೋಂದಣಿಗೆ ಅರಸೀಕೆರೆ ತಾಲ್ಲೂಕಿನ ರೈತರು ಮುಂದಾಗುತ್ತಿದ್ದಾರೆ. ಸಕಲೇಶಪುರ, ಆಲೂರು, ಬೇಲೂರು, ಚನ್ನರಾಯ
ಪಟ್ಟಣ, ಹಾಸನ, ಹೊಳೆನರಸೀಪುರ, ಅರಕಲಗೂಡು ತಾಲ್ಲೂಕುಗಳಲ್ಲಿ ರೈತರು ನಿರಾಸಕ್ತಿ ಹೊಂದಿದ್ದಾರೆ.

ADVERTISEMENT

ಹವಾಮಾನ ವೈಪರೀತ್ಯದಿಂದ ರೈತರ ಬೆಳೆಗಳಿಗೆ ಹಾನಿಯಾದಾಗ ಪರಿಹಾರ ದೊರೆಯಬೇಕು ಎಂಬ ಉದ್ದೇಶದಿಂದ ವಿಮಾ ಯೋಜನೆ ಜಾರಿಯಾಗಿದೆ. ಹಿಂಗಾರು, ಮುಂಗಾರು ಬೆಳೆಗಳಿಗೆ ವಿಮೆ ಕಟ್ಟಲು ಅವಕಾಶ ಕಲ್ಪಿಸಲಾಗುತ್ತದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ಆಲೂಗಡ್ಡೆ, ರಾಗಿ, ಭತ್ತ, ಮುಸುಕಿನ ಜೋಳ, ಉದ್ದು, ತೊಗರಿ, ಹೆಸರು, ಹುರುಳಿ, ಸೂರ್ಯಕಾಂತಿ, ಎಳ್ಳು, ನೆಲಗಡಲೆ, ಅಲಸಂದೆ, ಹತ್ತಿ, ಟೊಮೆಟೊ ಬೆಳೆಯಲಾಗುತ್ತದೆ. ಈ ಎಲ್ಲಾ ಬೆಳೆಗಳು ಬೆಳೆ ವಿಮೆ ವ್ಯಾಪ್ತಿಗೆ ಸೇರಿವೆ.

ನಾನಾ ಕಾರಣಗಳನ್ನು ನೀಡಿ ಕ್ಲೇಮುಗಳನ್ನು ತಿರಸ್ಕರಿಸುತ್ತಿರುವುದು, ಪರಿಹಾರ ಬಾಕಿ ಮತ್ತು ಹೆಚ್ಚಿನ ರೈತರಿಗೆ ಪಾವತಿಸಿದ ಮೊತ್ತಕ್ಕಿಂತಲೂ ಕಡಿಮೆ ಹಣ ಪರಿಹಾರವಾಗಿ ದೊರೆಯುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿಯೂ ರೈತರು ವಿಮೆ ಯೋಜನೆ ಬಗ್ಗೆ ಆಸಕ್ತಿ ಕಳೆದುಕೊಳ್ಳುವಂತಾಗಿದೆ.

ಫಸಲ್‌ ಬಿಮಾ ಯೋಜನೆಗೆ ನೋಂದಾಯಿಸಿಕೊಳ್ಳಲು ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ ಪುಸ್ತಕ, ಬ್ಯಾಂಕ್‌ ಪಾಸ್‌ ಪುಸ್ತಕ ಹಾಗೂ ಕಂದಾಯ ರಶೀದಿಯನ್ನು ನೀಡಬೇಕು. ಸರ್ಕಾರ ವಿಮಾ ಕಂತಿನ ಅರ್ಧ ಭಾಗ ಪಾವತಿಸಲಿದ್ದು, ಉಳಿದ ಅರ್ಧ ಭಾಗ ರೈತರು ಪಾವತಿಸಬೇಕು.

‘ಅರೆಮಲೆನಾಡು ಅರಕಲಗೂಡು ತಾಲ್ಲೂಕಿನಲ್ಲಿ ನಿಶ್ಚಿತ ಪ್ರಮಾಣದಲ್ಲಿ ಮಳೆಯಾಗುತ್ತದೆ. ಹೀಗಾಗಿ ರೈತರಲ್ಲಿ ಬೆಳೆ ವಿಮೆ ಕುರಿತು ಆಸಕ್ತಿ ಕಡಿಮೆ. ಕೃಷಿ ಸಾಲ ಪಡೆಯುವ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕಿದ್ದರಿಂದ ವಿಮೆ ಮಾಡಲಾಗುತ್ತಿತ್ತು. ಈಗಇದನ್ನು ರೈತರ ಇಚ್ಛೆಗೆ ಬಿಟ್ಟಿರುವ ಕಾರಣ ಬೆಳೆ ವಿಮೆ ಮಾಡಿಸಲು ಯಾರೂ ಮುಂದಾಗುತ್ತಿಲ್ಲ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್

‘ಹಿರೀಸಾವೆ ಭಾಗದಲ್ಲಿ ಶೇ 20ರಷ್ಟು ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಬೆಳೆ ನಾಶವಾದರೆ ವಿಮೆ ಪರಿಹಾರ ಸಿಗುವುದಿಲ್ಲ. 3–4 ವರ್ಷದಿಂದ ಈ ಭಾಗಕ್ಕೆ ಬೆಳೆ ವಿಮೆ ಹಣ ಬಂದಿಲ್ಲ’ ಎಂಬುದು ರೈತರ ಆರೋಪ.

‘ಬ್ಯಾಂಕ್‌ನಲ್ಲಿ ಬೆಳೆಸಾಲ ಮಂಜೂರಾದ ರೈತರು ಕಡ್ಡಾಯವಾಗಿ ಈ ಯೋಜನೆಗೆ ಒಳಪಡುತ್ತಾರೆ. ರೈತರು ಈ ಯೋಜನೆಗೆ ಭಾಗವಹಿಸಲು ನಿರಾಕರಿಸಿದರೆ ಬ್ಯಾಂಕ್‌ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ ಏಳು ದಿನ ಮುಂಚಿತವಾಗಿ ಲಿಖಿತವಾಗಿ ಮಚ್ಚಳಿಕೆ ಪತ್ರ ನೀಡಿದರೆ ಯೋಜನೆಯಿಂದ ಕೈಬಿಡಲಾಗುವುದು. ವಿಮಾ ಪರಿಹಾರ ನಷ್ಟವನ್ನು ನೀಡಲು ಪ್ರಾರಂಭಿಕ ಇಳುವರಿ ಮತ್ತು ವಾಸ್ತವಿಕ ಇಳುವರಿಯ ವ್ಯತ್ಯಾಸವನ್ನು ಲೆಕ್ಕ ಹಾಕುವಾಗ ಹಿಂದಿನ 7 ವರ್ಷಗಳವರೆಗಿನ ಸರಾಸರಿ ಇಳುವರಿಯನ್ನು ಪರಿಗಣಿಸಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌.ರವಿ ಮಾಹಿತಿ ನೀಡಿದರು.

‘ಫಸಲ್‌ ಬಿಮಾ ಯೋಜನೆ ಕುರಿತು ಕರಪತ್ರ ಹಂಚಿಕೆ, ಆಟೊ ಪ್ರಚಾರ, ರೇಡಿಯೊ ಹಾಗೂ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಹೆಚ್ಚಿನ ಪ್ರಚಾರ ನೀಡಿದ್ದರಿಂದ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 9,908 ಫಲಾನುಭವಿಗಳಿಗೆ ₹ 435.77 ಲಕ್ಷ, ಹಿಂಗಾರಿನಲ್ಲಿ 14 ಫಲಾನುಭವಿಗಳಿಗೆ ₹ 84 ಸಾವಿರ ವಿಮಾ ಪರಿಹಾರ ನೀಡಲಾಗಿದೆ. 2020-21ನೇ ಸಾಲಿನ ಮುಂಗಾರಿನಲ್ಲಿ 23,745 ಫಲಾನುಭವಿಗಳಿಗೆ ₹ 15.64 ಕೋಟಿ ವಿಮಾ ಪರಿಹಾರ ನೀಡಲಾಗಿದೆ. ಕಳೆದ ಸಾಲಿನಲ್ಲಿ ನೋಂದಾಯಿಸಿಕೊಂಡ ರೈತರಿಗೆ ವಿಮಾ ಪರಿಹಾರ ಹಣ ಘೋಷಣೆ ಆಗಿದೆ. ಆದರೆ ಇನ್ನೂ ಬಿಡುಗಡೆಯಾಗಿಲ್ಲ’ ಎಂದು ವಿವರಿಸಿದರು.

ಪ್ರಜಾವಾಣಿ ತಂಡ: ಕೆ.ಎಸ್.ಸುನಿಲ್, ಜೆ.ಎಸ್‌.ಮಹೇಶ್‌, ಹಿ.ಕೃ ಚಂದ್ರು, ಅನಿಲ್‌ ಕುಮಾರ್‌, ಸಿದ್ದರಾಜು, ಚಂದ್ರಶೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.