ADVERTISEMENT

ಹಾಸನ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ

ಇಂದಿನಿಂದ ವಾರದ ಎಲ್ಲಾ ದಿನ ವ್ಯಾಪಾರ ವಹಿವಾಟಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 5:49 IST
Last Updated 12 ಜುಲೈ 2021, 5:49 IST
ಹಾಸನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಆಟೊ ಹಾಗೂ ಬಸ್‌ಗಳ ಸಂಚಾರ ಎಂದಿನಂತೆ ಇತ್ತು
ಹಾಸನ ನಗರ ಸಾರಿಗೆ ಬಸ್‌ ನಿಲ್ದಾಣದಲ್ಲಿ ಆಟೊ ಹಾಗೂ ಬಸ್‌ಗಳ ಸಂಚಾರ ಎಂದಿನಂತೆ ಇತ್ತು   

ಹಾಸನ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಸೋಮವಾರ ದಿಂದ (ಜು.12) ಲಾಕ್‌ಡೌನ್‌ ಸಂಪೂರ್ಣ ಸಡಿಲಿಕೆ ಮಾಡಲಾಗಿದ್ದು, ವಾರದ ಎಲ್ಲಾ ದಿನ ವ್ಯಾಪಾರ ವಹಿವಾಟಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ.

ಸರ್ಕಾರದ ಮಾರ್ಗಸೂಚಿಯಂತೆ ದೇವಾಲಯ, ಬಾರ್, ಪಬ್‌, ಹೋಟೆಲ್‌, ಮಾಲ್‌ಗಳನ್ನು ತೆರೆಯಲು ಅವಕಾಶವಿದೆ. ಸರ್ಕಾರಿ, ಖಾಸಗಿ ಕಚೇರಿ, ಕೈಗಾರಿಕೆಗಳಲ್ಲಿ ಶೇಕಡಾ ನೂರರಷ್ಟು ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶವಿದ್ದು, ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಶೇಕಡಾ ನೂರರಷ್ಟು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಈಜುಕೊಳ, ಕ್ರೀಡಾ ಸಂಕೀರ್ಣಗಳನ್ನು ಕ್ರೀಡಾಪಟುಗಳ ತರಬೇತಿಗಾಗಿ ಮಾತ್ರ ಬಳಸಿಕೊಳ್ಳಬಹುದು. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅಂತ್ಯ ಸಂಸ್ಕಾರದಲ್ಲಿ 20 ಮಂದಿ ಮಾತ್ರ
ಪಾಲ್ಗೊಳ್ಳಬಹುದು.

ADVERTISEMENT

ಶಾಲೆ ಕಾಲೇಜುಗಳನ್ನು ತೆರೆಯುವಂತಿಲ್ಲ. ಆದರೆ, ಆನ್‌ಲೈನ್ ತರಗತಿಗಳು ಮುಂದುವರಿಯಲಿದೆ. ಚಿತ್ರಮಂದಿರಗಳು ತೆರೆಯಲು ಅವಕಾಶವಿಲ್ಲ. ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರ ಮಿತಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ನೈರ್ಟ್ ಕರ್ಫ್ಯೂ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ವಾರಾಂತ್ಯಕರ್ಫ್ಯೂ ಇರುವುದಿಲ್ಲ.

ಜಿಲ್ಲೆಯಲ್ಲಿ ಲಾಕ್‌ಡೌನ್‌ ತೆರವುಗೊಳ್ಳುವ ನಿರೀಕ್ಷೆಯಲ್ಲಿದ್ದ ವಿವಿಧ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಯನ್ನು ಭಾನುವಾರವೇ ಸ್ವಚ್ಛಗೊಳಿಸಲು ಮುಂದಾದರು. ಎರಡು ತಿಂಗಳಿನಿಂದ ಸತತವಾಗಿ ಬಂದ್‌ ಆಗಿದ್ದ ಅಂಗಡಿಗಳು, ಕಚೇರಿಗಳನ್ನು ಸ್ವಚ್ಛ ಮಾಡಿ ಬಣ್ಣ ಬಳಿದು ಸಿದ್ಧಪಡಿಸಿಕೊಳ್ಳುತ್ತಿದ್ದರು.

ಕಳೆದ ವಾರವೇ ಹಾಸನದಲ್ಲಿ ಲಾಕ್‌ಡೌನ್‌ ಸಡಿಲಿಕೆ ಆಗಲಿದೆ ಎಂದು ಜನರು ನಿರೀಕ್ಷೆಇಟ್ಟುಕೊಂಡಿದ್ದರು. ಆದರೆ, ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗದ ಹಿನ್ನೆಲೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಜು.12ರ ವರೆಗೂ ಲಾಕ್‌ಡೌನ್‌ ವಿಸ್ತರಣೆ ಮಾಡಿ ವಾರದ ಮೂರು ದಿನ ಮಾತ್ರವೇ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ್ದರು. ಇದರಿಂದ ಜನರ ನಿರೀಕ್ಷೆಹುಸಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.