ADVERTISEMENT

ಲಾಂಛನದಲ್ಲಿ ಮಾರ್ಪಾಡು, ಸ್ಥಳ ಬದಲಾವಣೆ

ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:13 IST
Last Updated 23 ನವೆಂಬರ್ 2022, 13:13 IST
   

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿದ್ದ ಕನಕದಾಸ, ಸರ್ವಜ್ಞ, ಶಿಶುನಾಳ ಷರೀಫ ಮುಂತಾದ ಮಹನೀಯರ ಭಾವಚಿತ್ರಗಳನ್ನು ಕೈಬಿಟ್ಟು, ಕೆಲವು ಮಾರ್ಪಾಡುಗಳೊಂದಿಗೆ ಪರಿಷ್ಕೃತ ಲಾಂಛನವನ್ನು ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ಬುಧವಾರ ಬಿಡುಗಡೆ ಮಾಡಿದರು.

ಅಕ್ಟೋಬರ್‌ 29ರಂದು ಹಾವೇರಿಯಲ್ಲಿ ಬಿಡುಗಡೆ ಮಾಡಿದ್ದ ಲಾಂಛನದಲ್ಲಿದ್ದ ಹಾನಗಲ್‌ ಕುಮಾರ ಶಿವಯೋಗಿ, ವಿ.ಕೃ. ಗೋಕಾಕ್‌, ಅಂಬಿಗರ ಚೌಡಯ್ಯ, ಪಂಚಾಕ್ಷರಿ ಗವಾಯಿ, ಶರಣೆ ಹೆಳವನಕಟ್ಟೆ ಗಿರಿಯಮ್ಮ, ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವಪ್ಪ, ಕಾದಂಬರಿ ಪಿತಾಮಹ ಗಳಗನಾಥರ ಭಾವಚಿತ್ರಗಳನ್ನು ಪರಿಷ್ಕೃತ ಲಾಂಛನದಲ್ಲಿ ಕೈಬಿಡಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಹೇಶ ಜೋಶಿ ಮಾತನಾಡಿ, ಲಾಂಛನದಲ್ಲಿ ಸಂತ–ಕವಿ–ಸ್ವಾತಂತ್ರ್ಯ ಹೋರಾಟಗಾರರ ಮತ್ತಷ್ಟು ಭಾವಚಿತ್ರಗಳನ್ನು ಸೇರ್ಪಡೆ ಮಾಡುವಂತೆ ಬೇಡಿಕೆಗಳು ಬಂದವು. ಎಲ್ಲರನ್ನೂ ಲಾಂಛನದಲ್ಲಿ ಸೇರಿಸಲು ಸಾಧ್ಯವಾಗದ ಕಾರಣ, ಹಾವೇರಿ ಜಿಲ್ಲೆಯನ್ನು ಪ್ರತಿನಿಧಿಸುವ ಮಹನೀಯರ ಚಿತ್ರ ಕೈಬಿಟ್ಟು, ಜಿಲ್ಲೆಯ ಐತಿಹಾಸಿಕ ಸ್ಥಳ, ಸಾಂಸ್ಕೃತಿಕ ಅಸ್ಮಿತೆ ಬಿಂಬಿಸುವ ಮೂಲಕ ಲಾಂಛನದಲ್ಲಿ ಮಾರ್ಪಾಡು ಮಾಡಲಾಗಿದೆ. ವಿಶೇಷವಾಗಿ ‘ಸಾಮರಸ್ಯದ ಭಾವ– ಕನ್ನಡದ ಜೀವ’ ಎಂಬ ಧ್ಯೇಯವಾಕ್ಯವನ್ನು ಹೊಸದಾಗಿ ಸೇರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸ್ಥಳ ಬದಲಾವಣೆ:
ನಗರದ ಜಿ.ಎಚ್‌.ಕಾಲೇಜು ಸಮೀಪದ ಸುವರ್ಣಕಾರರ ಕೋ ಆಪರೇಟಿಸ್‌ ಸೊಸೈಟಿಗೆ ಸೇರಿದ ಜಾಗ ವಿವಾದದಲ್ಲಿದ್ದ ಕಾರಣ ನಗರದ ಹೊರವಲಯದ ಅಜ್ಜಯ್ಯನ ದೇವಸ್ಥಾನ ಹತ್ತಿರದ 80 ಎಕರೆಯುಳ್ಳ ವಿಶಾಲವಾದ ಪ್ರದೇಶದಲ್ಲಿ ಸಮ್ಮೇಳನಕ್ಕೆ ಸ್ಥಳ ನಿಗದಿಪಡಿಸಿದ್ದು, ಸ್ವಚ್ಛತೆ ಆರಂಭಿಸಲಾಗಿದೆ ಎಂದು ಹೇಳಿದರು.

ಕನ್ನಡ ರಥ ನಿರ್ಮಾಣ:
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಜಾನಪದ ವಿವಿಯಲ್ಲಿ ತಯಾರಿಸಲಾಗುತ್ತಿರುವ ‘ಕನ್ನಡ ರಥ’ವನ್ನು ವೀಕ್ಷಣೆ ಮಾಡಿ, ಕೆಲವು ಬದಲಾವಣೆಗಳನ್ನು ಮಾಡಲು ಸಲಹೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪೂರ ತಾಲೂಕಿನ ಭುವನಗಿರಿ ಭುವನೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 1ರಂದು ಕನ್ನಡ ರಥಕ್ಕೆ ಪೂಜೆ ಸಲ್ಲಿಸಲಾಗುವುದು ಎಂದರು.

ಕನ್ನಡ ರಥವು ರಾಜ್ಯದ 31 ಜಿಲ್ಲೆಗಳಿಗೆ ಸಂಚರಿಸಿ ಜ.1ಕ್ಕೆ ಹಾವೇರಿಗೆ ಆಗಮಿಸಲಿದೆ. ರಥದಲ್ಲಿ ಭುವನೇಶ್ವರಿ ದೇವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ, ಸಮ್ಮೇಳನಾಧ್ಯಕ್ಷರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಭಾವಚಿತ್ರಗಳಿರಲಿವೆ ಎಂದರು.

ಪ್ರತಿನಿಧಿಗಳ ನೋಂದಣಿ:
ಕಸಾಪ ವತಿಯಿಂದ ಆ್ಯಪ್‌ ಸಿದ್ಧಪಡಿಸಿದ್ದು, ಇದರ ಮೂಲಕವೇ ಪ್ರತಿನಿಧಿಗಳ ಮತ್ತು ಮಳಿಗೆಗಳ ನೋಂದಣಿ ಮಾಡಿಕೊಳ್ಳಬೇಕು. ಶೀಘ್ರದಲ್ಲೇ ಪ್ರತಿನಿಧಿಗಳ ನೋಂದಣಿ ಆರಂಭವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.