ADVERTISEMENT

ಮಳೆಯಿಂದ ಬೆಳೆಹಾನಿ: ಪರಿಹಾರಕ್ಕೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 15:30 IST
Last Updated 20 ಸೆಪ್ಟೆಂಬರ್ 2021, 15:30 IST
ಹಿರೇಕೆರೂರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು
ಹಿರೇಕೆರೂರು ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು   

ಹಿರೇಕೆರೂರು: ಮಳೆಯಿಂದ ಅಪಾರ ಬೆಳೆಹಾನಿ, ಮನೆಗಳು ಹಾನಿಯಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಪ್ರತಿ ಎಕೆರೆಗೆ ರೂ 25 ಸಾವಿರ ಬೆಳೆನಷ್ಟ ಪರಿಹಾರ ಹಾಗೂ ಮನೆ ಕಳೆದುಕೊಂಡವರಿಗೆ ಮನೆ ಮಂಜೂರು ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಳೆದ ಎರಡು ತಿಂಗಳು ಸುರಿದ ಮಳೆಯಿಂದ ಬೆಳೆ ಹಾಗೂ ಮನೆ ಕಳೆದುಕೊಂಡು ನೊಂದ ರೈತ ಸಮುದಾಯದ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್ ಖಾಸಗೀಕರಣವನ್ನು ಹಿಂಪಡೆಯಬೇಕು. ದೆಹಲಿ ಗಡಿಭಾಗದಲ್ಲಿ ಕಳೆದ 10 ತಿಂಗಳಿಂದ ಕೃಷಿ ಕಾಯ್ದೆ ವಿರುದ್ಧ ಚಳುವಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸದೇ ಹಠಮಾರಿ ಧೋರಣೆ ಅನುಸರಿಸುತ್ತಿದೆ, ಕೂಡಲೇ ಸರ್ಕಾರ ಕೃಷಿ ಕಾನೂನುಗಳನ್ನು ಕೈಬಿಡಬೇಕು. ಹಿರೇಕೆರೂರು-ರಟ್ಟೀಹಳ್ಳಿ ತಾಲ್ಲೂಕಿನ 1360 ರೈತರಿಗೆ 2019-20ನೇ ಸಾಲಿನ ವಿಮಾ ಹಣ ನೀಡಬೇಕು. ತುಂಗಾ ಮೇಲ್ದಂಡೆ ಯೋಜನೆಗೆ ಜಮೀನು ಕಳೆದುಕೊಂಡ ರೈತರಿಗೆ ಬಡ್ಡಿ ಸಹಿತವಾಗಿ ಪರಿಹಾರ ನೀಡಬೇಕು. ರೈತರಿಗೆ ನೀಡಬೇಕಾದ ಮೂರು ತಿಂಗಳ ಹಾಲಿನ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್‌ನಿಂದ ಮೃತಪಟ್ಟ ಕುಟುಂಬದವರಿಗೆ ₹5 ಲಕ್ಷ ಪರಿಹಾರ ನೀಡಬೇಕು. ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಸರ್ಕಾರ ಬಡವರಿಗೆ ಶವಸಂಸ್ಕಾರ ನೀಡುವ ₹5 ಸಾವಿರ ಹಣವನ್ನು 2 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದು, ಸಕಾಲಕ್ಕೆ ಹಣ ನೀಡಲು ಕ್ರಮಕೈಗೊಳ್ಳಬೇಕು. ಹಿರೇಕೆರೂರು ಮತ್ತು ರಟ್ಟೀಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಹಂದಿಗಳು ಬೆಳೆ ಹಾನಿ ಮಾಡುತ್ತಿದ್ದು, ರೈತರು ಹಲವು ಬಾರಿ ಮನವಿ ಮಾಡದರೂ ಹಂದಿಗಳನ್ನು ಹಿಡಿಯುವ ಕೆಲಸವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ಮುಖಂಡರಾದ ಬಸನಗೌಡ ಗಂಗಪ್ಪನವರ, ಮಹ್ಮದ್‌ಗೌಸ್ ಪಾಟೀಲ, ಗಂಗನಗೌಡ ಮುದಿಗೌಡ್ರ, ಶಿವಾನಂದಯ್ಯ ಹಳ್ಳೂರಮಠ, ಶಾಂತನಗೌಡ ಪಾಟೀಲ, ರಾಜು ಮುತ್ತಗಿ, ಮಂಜುನಾಥ ಹಾರಿಕಟ್ಟಿ, ಹನುಮಂತಪ್ಪ ಜೋಗೇರ, ಶಂಕರಗೌಡ ಮಕ್ಕಳ್ಳಿ, ಸುರೇಂದ್ರಪ್ಪ ಶಿರಸಂಗಿ, ಲೋಕಪ್ಪ ಹುಲ್ಲತ್ತಿ, ನಾಗರಾಜ ನೀರಲಗಿ, ಉಮೇಶ ಪಾಟೀಲ, ಮೌನೇಶ ನರಸಾಪುರ, ಕರಬಸಪ್ಪ ಬಣಕಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.