ADVERTISEMENT

ಪುನೀತ್‌ ಅಭಿಮಾನಿಗಳಿಂದ ಪ್ರಯಾಣಿಕರ ತಂಗುದಾಣ ನವೀಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 8:56 IST
Last Updated 17 ಮಾರ್ಚ್ 2023, 8:56 IST
   

ಹಾವೇರಿ: ಇಲ್ಲಿಯ ಇಜಾರಿಲಕಮಾಪುರದ ಪಿ.ಬಿ.ರಸ್ತೆಯಲ್ಲಿ ನಿರ್ವಹಣೆ ಇಲ್ಲದೆ ಪಾಳುಬಿದ್ದಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಬಸ್‌ ಪ್ರಯಾಣಿಕರ ತಂಗುದಾಣವನ್ನು ₹70 ಸಾವಿರ ವೆಚ್ಚದಲ್ಲಿ ನವೀಕರಿಸಿದ ಚಿತ್ರನಟ ಪುನೀತ್‌ ರಾಜಕುಮಾರ್‌ ಅಭಿಮಾನಿಗಳು, ಅಪ್ಪು ಜನ್ಮದಿನವಾದ (ಮಾರ್ಚ್‌ 17) ಶುಕ್ರವಾರದಂದು ಲೋಕಾರ್ಪಣೆಗೊಳಿಸಿದರು.

‘ಸ್ಮೈಲ್‌ ಕರ್ನಾಟಕ’ ಯೂಟ್ಯೂಬ್‌ ಚಾನಲ್‌ ತಂಡ ಹಾಗೂ ಸ್ಥಳೀಯರ ನೆರವಿನಿಂದ ಪ್ರಯಾಣಿಕರ ತಂಗುದಾಣಕ್ಕೆ ಸುಣ್ಣಬಣ್ಣ ಬಳಿದು, ಕೆಂಪು–ಹಳದಿ ಬಣ್ಣಗಳಿಂದ ಅಲಂಕರಿಸಿ, ಪುನೀತ್‌ ರಾಜಕುಮಾರ್‌ ಮತ್ತು ಸುಭಾಷ್‌ ಚಂದ್ರ ಬೋಸ್‌ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಪವರ್ ಸ್ಟಾರ್‌ ಪುನೀತ್‌ ರಾಜಕುಮಾರ್‌ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಎಂದು ಬರೆಸಿ, ಹೊಸ ನಾಮಫಲಕ ಹಾಕಿಸಿದ್ದಾರೆ.

ಬಸ್‌ ತಂದುದಾಣದೊಳಗೆ ಪುನೀತ್‌ ರಾಜಕುಮಾರ್‌ ಭಾವಚಿತ್ರವನ್ನೊಳಗೊಂಡ ಬೋರ್ಡ್‌ನಲ್ಲಿ ‘ನಗುಮೊಗದ ಮಹನೀಯನಿಗೆ ಮನಃಪೂರ್ವಕ ನಮನಗಳು’, ನೇತ್ರದಾನ ಪುನೀತದಾನ– ನಗುದಾನ ಮಹಾದಾನ’ ಎಂದು ಬರೆಸಿ ತಮ್ಮ ಪ್ರೀತಿ, ಅಭಿಮಾನವನ್ನು ಮೆರೆದಿದ್ದಾರೆ. ಕುಳಿತುಕೊಳ್ಳುವ ಆಸನವನ್ನು ದುರಸ್ತಿ ಮಾಡಿಸಿ, ಚಿತ್ತಾರ ಮೂಡಿಸಿದ್ದಾರೆ.

ADVERTISEMENT

ಶಾಸಕ ನೆಹರು ಓಲೇಕಾರ ಮತ್ತು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ, ಪುನೀತ್‌ ಅಭಿಮಾನಿಗಳ ಸಮಾಜ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು.

ವಿದ್ಯಾರ್ಥಿಗಳ ಸುರಕ್ಷತೆಗಾಗಿ:

ಸಿಂದಗಿ ಶಾಂತವೀರೇಶ್ವರ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನ ಬಿಎಎಂಎಸ್‌ ವಿದ್ಯಾರ್ಥಿ ರಾಜೇಶ್‌ ಎಂ. ಮಾತನಾಡಿ, ‘ಬಸ್‌ ನಿಲ್ದಾಣ ಪಾಳುಬಿದ್ದಿದ್ದ ಕಾರಣ ವಿದ್ಯಾರ್ಥಿಗಳು ಬಿಸಿಲು, ಮಳೆಯಲ್ಲಿ ರಸ್ತೆ ಬದಿಯಲ್ಲಿ ನಿಂತು ಬಸ್‌ಗಾಗಿ ಕಾಯುತ್ತಿದ್ದರು. ಇದೇ ಜಾಗದಲ್ಲಿ ರಸ್ತೆ ಅಪಘಾತವಾಗಿತ್ತು. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬಸ್‌ ತಂಗುದಾಣವನ್ನು ನವೀಕರಿಸುವ ನಿರ್ಧಾರ ಕೈಗೊಂಡೆವು’ ಎಂದು ಹೇಳಿದರು.

ದೇಣಿಗೆ ಸಂಗ್ರಹ:

‘ಹಲವಾರು ಕಾಲೇಜು, ಸಂಘ ಸಂಸ್ಥೆ ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಿ, ಆನಂದ್‌ ಲಮಾಣಿ, ಗಿರೀಶ, ಧನರಾಜ್‌ ಮುಂತಾದ ಸ್ನೇಹಿತರ ಸಹಕಾರದಿಂದ ನಮ್ಮ ನೆಚ್ಚಿನ ಅಪ್ಪು ಬಾಸ್‌ ಸವಿನೆನಪಿನಲ್ಲಿ ಬಸ್‌ ತಂಗುದಾಣಕ್ಕೆ ಹೊಸ ರೂಪ ನೀಡಿದ್ದೇವೆ. ಪುನೀತ್‌ ಜನ್ಮದಿನವನ್ನು ಸರ್ಕಾರ ‘ಸ್ಫೂರ್ತಿಯ ದಿನ’ ಎಂದು ಘೋಷಿಸಿರುವುದು ಖುಷಿ ತಂದಿದೆ’ ಎಂದರು.

ರಕ್ತದಾನ ಶಿಬಿರ:

ಪುನೀತ್‌ ಜನ್ಮದಿನದ ಅಂಗವಾಗಿ ಹಾವೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸ್ವಯಂಸ್ಫೂರ್ತಿಯಿಂದ ರಕ್ತದಾನ ಮಾಡಿದರು.

ಹಾವೇರಿ ಜಿಲ್ಲಾಸ್ಪತ್ರೆಯ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯ ಡಾ.ಬಸವರಾಜ ತಳವಾರ, ಬಸವರಾಜ ಕಮತದ, ವೈದ್ಯಕೀಯ ಸಿಬ್ಬಂದಿ ಹಾಗೂ ಪುನೀತ್‌ ಅಭಿಮಾನಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.