ADVERTISEMENT

ರಾಸಾಯನಿಕಯುಕ್ತ ಆಹಾರದಿಂದ ಅನಾರೋಗ್ಯ:v

ಸಾಹಿತಿ ಹಂ.ಪ. ನಾಗರಾಜಯ್ಯ ಕಳವಳ l ನಂದಿನಿ ಜಯರಾಮ್‌ಗೆ ‘ಯಶೋಧರ ದಾಸಪ್ಪ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 19:33 IST
Last Updated 21 ಆಗಸ್ಟ್ 2022, 19:33 IST
ನಂದಿನಿ ಜಯರಾಮ್ ಅವರಿಗೆ ‘ಯಶೋಧರ ದಾಸಪ್ಪ ಪ್ರಶಸ್ತಿ’ಯನ್ನು ಹಂ.ಪ. ನಾಗರಾಜಯ್ಯ ಪ್ರದಾನ ಮಾಡಿದರು. (ಎಡದಿಂದ) ಸಿ.ಕೆ. ರಾಮೇಗೌಡ, ವಿಜಯಾ, ಗಾಯತ್ರಿ ರಾಮಣ್ಣ, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಮತ್ತು ಕರ್ನಾಟಕ ರಾಜ್ಯ ಕೃಷಿಕ ಪರಿಷತ್ತಿನ ಕೋಶಾಧಿಕಾರಿ ಚಿಕ್ಕಕೋಮಾರಿ ಗೌಡ ಇದ್ದಾರೆ --  –ಪ್ರಜಾವಾಣಿ ಚಿತ್ರ
ನಂದಿನಿ ಜಯರಾಮ್ ಅವರಿಗೆ ‘ಯಶೋಧರ ದಾಸಪ್ಪ ಪ್ರಶಸ್ತಿ’ಯನ್ನು ಹಂ.ಪ. ನಾಗರಾಜಯ್ಯ ಪ್ರದಾನ ಮಾಡಿದರು. (ಎಡದಿಂದ) ಸಿ.ಕೆ. ರಾಮೇಗೌಡ, ವಿಜಯಾ, ಗಾಯತ್ರಿ ರಾಮಣ್ಣ, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಮತ್ತು ಕರ್ನಾಟಕ ರಾಜ್ಯ ಕೃಷಿಕ ಪರಿಷತ್ತಿನ ಕೋಶಾಧಿಕಾರಿ ಚಿಕ್ಕಕೋಮಾರಿ ಗೌಡ ಇದ್ದಾರೆ --  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಇತ್ತೀಚಿನ ವರ್ಷಗಳಲ್ಲಿ ಅಧಿಕ ಇಳುವರಿ ಪಡೆಯಲೆಂದು ಕೃಷಿ ಭೂಮಿಗೆ ರಾಸಾಯನಿಕಗಳನ್ನು ಹಾಕಲಾಗುತ್ತಿದೆ. ಇದರಿಂದ ಮಣ್ಣಿನ ಹಾಗೂ ಆ ಭೂಮಿಯಲ್ಲಿ ಬೆಳೆದ ಆಹಾರ ಧಾನ್ಯ ಸೇವಿಸಿದವರ ಆರೋಗ್ಯ ಕೆಡುತ್ತಿದೆ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಕಳವಳ
ವ್ಯಕ್ತಪಡಿಸಿದರು.

ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ್ತಿ ನಂದಿನಿ ಜಯರಾಮ್ ಅವರಿಗೆ ‘ಯಶೋಧರ ದಾಸಪ್ಪ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯು ₹10 ಸಾವಿರ ನಗದು ಒಳಗೊಂಡಿದೆ.

‘ನಮ್ಮ ಪೂರ್ವಜರು ಭೂಮಿಯನ್ನು ದೇವರು ಮತ್ತು ತಾಯಿ ಸ್ವರೂಪಕ್ಕೆ ಹೋಲಿಕೆ ಮಾಡುತ್ತಿದ್ದರು. ಇದರಿಂದಾಗಿಯೇ ಭೂಮಿಯ ಸತ್ವ ಹಾಳು ಮಾಡುವಂತಹ ಯಾವೊಂದು ಕಾರ್ಯವನ್ನೂ ಮಾಡದೇ, ಸಾಂಪ್ರದಾಯಿಕ ಕೃಷಿ ಪದ್ಧತಿಯ ಮೂಲಕ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಇತ್ತೀಚೆಗೆ ಕೃಷಿ ಭೂಮಿಗೆ ರಾಸಾಯನಿಕಯುಕ್ತ ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಲಾಗುತ್ತಿದೆ. ಇದರಿಂದ ಭೂಮಿಯ ಸತ್ವ ಹಾಳಾಗುತ್ತಿದೆ. ಕಲಬೆರಕೆಯುಕ್ತ ಆಹಾರಗಳ ಸೇವನೆಯಿಂದ ಆರೋಗ್ಯವೂ ಕೆಡುತ್ತಿದೆ’ ಎಂದು ಹೇಳಿದರು.

ADVERTISEMENT

ಲೇಖಕಿ ವಿಜಯಾ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿಜನರಲ್ಲಿ ಪರಸ್ಪರ ದ್ವೇಷ ಬಿತ್ತುವ ಕೆಲಸ ಆಗುತ್ತಿದೆ. ಇಂತಹ ಹೊತ್ತಿನಲ್ಲಿ ಮಕ್ಕಳಿಗೆ ನಾವು ಏನು ಹೇಳಿ ಕೊಡುತ್ತೇವೆ ಎನ್ನುವುದು ಮುಖ್ಯ. ಯಶೋಧರದಾಸಪ್ಪ ಅವರು ತುಳಿತಕ್ಕೆ ಒಳಗಾದವರ ಪರ ನಿಂತಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. ಅವರ ಪ್ರತಿಮೆ ನಿರ್ಮಿಸುವ ಕೆಲಸ ಆಗಬೇಕು’ ಎಂದರು.

ಕೇಂದ್ರದ ಅಧ್ಯಕ್ಷಸಿ.ಕೆ. ರಾಮೇಗೌಡ, ‘ಪ್ರಶಸ್ತಿ ನೀಡುವುದು ದಂಧೆಯಾಗುತ್ತಿದೆ. ಕಳ್ಳರು, ಖದೀಮರಿಗೆ ಕುವೆಂಪು ಸೇರಿ ನಾಡಿನ ಮಹಾನ್ ಸಾಹಿತಿಗಳ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಇದು ವ್ಯವಸ್ಥೆಯ ವಿಪರ್ಯಾಸ’ ಎಂದು ಬೇಸರ
ವ್ಯಕ್ತಪಡಿಸಿದರು.

ಇದೇ ವೇಳೆ ಗಾಯತ್ರಿ ರಾಮಣ್ಣ ಅವರು ರಚಿಸಿದ ‘ಯಶೋಧರ ದಾಸಪ್ಪ’ ಕೃತಿ ಬಿಡುಗಡೆ
ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.