ADVERTISEMENT

ಹಳೆಯದು ಮರೆತರೆ ಹೊಸತು ಸೃಷ್ಟಿ: ನಟರಾಜ್‌ ಬೂದಾಳ್‌

ಪುರಾಣ ಕನ್ಯೆ ಕಾದಂಬರಿ ಬಿಡುಗಡೆಯಲ್ಲಿ ಚಿಂತಕ ಡಾ.ನಟರಾಜ್‌ ಬೂದಾಳ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 19:30 IST
Last Updated 10 ಸೆಪ್ಟೆಂಬರ್ 2022, 19:30 IST
ನಗರದ ನ್ಯಾಷನಲ್ ಕಾಲೇಜಿನಲ್ಲಿ ರಶ್ಮಿ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಚ್.ಎಸ್. ಶಿವಪ್ರಕಾಶ್ (ಎಡದಿಂದ ಮೂರನೆಯವರು) ‘ಪುರಾಣ ಕನ್ಯೆ’ ಕಾದಂಬರಿ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಕಾ.ತ.ಚಿಕ್ಕಣ್ಣ, ಚಿಂತಕ ನಟರಾಜ ಬೂದಾಳ, ಚಿಂತಕ ಬಂಜಗೆರೆ ಜಯಪ್ರಕಾಶ್, ನ್ಯಾಷನಲ್ ಎಜುಕೇಷನ್ ಸೊಸೈಟಿ ಟ್ರಸ್ಟಿ ಎ.ಎಚ್.ರಾಮರಾವ್, ಪ್ರೊ.ಎಸ್.ಎನ್.ನಾಗರಾಜ್ ರೆಡ್ಡಿ ಇದ್ದರು  ಪ್ರಜಾವಾಣಿ ಚಿತ್ರ
ನಗರದ ನ್ಯಾಷನಲ್ ಕಾಲೇಜಿನಲ್ಲಿ ರಶ್ಮಿ ಪುಸ್ತಕ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಚ್.ಎಸ್. ಶಿವಪ್ರಕಾಶ್ (ಎಡದಿಂದ ಮೂರನೆಯವರು) ‘ಪುರಾಣ ಕನ್ಯೆ’ ಕಾದಂಬರಿ ಬಿಡುಗಡೆ ಮಾಡಿದರು. (ಎಡದಿಂದ) ಲೇಖಕ ಕಾ.ತ.ಚಿಕ್ಕಣ್ಣ, ಚಿಂತಕ ನಟರಾಜ ಬೂದಾಳ, ಚಿಂತಕ ಬಂಜಗೆರೆ ಜಯಪ್ರಕಾಶ್, ನ್ಯಾಷನಲ್ ಎಜುಕೇಷನ್ ಸೊಸೈಟಿ ಟ್ರಸ್ಟಿ ಎ.ಎಚ್.ರಾಮರಾವ್, ಪ್ರೊ.ಎಸ್.ಎನ್.ನಾಗರಾಜ್ ರೆಡ್ಡಿ ಇದ್ದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪುರಾಣ ಕನ್ಯೆ ಕೃತಿಯು ಸಾಂಸ್ಕೃತಿಕ ಪ್ರವಾಸ ಕಥನವಾಗಿದ್ದು, ಓದುಗನಿಗೆ ಅತಂತ್ಯ ಪ್ರಿಯ ಆಗಲಿದೆ’ ಎಂದು ಸಂಸ್ಕೃತಿ ಚಿಂತಕ ಡಾ.ನಟರಾಜ್‌ ಬೂದಾಳ್‌ ಶನಿವಾರ ಇಲ್ಲಿ ಹೇಳಿದರು.

ನಗರದ ನ್ಯಾಷನಲ್‌ ಕಾಲೇಜಿನಲ್ಲಿ ಕಾ.ತ.ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೃತಿಯಲ್ಲಿ ಪುರಾಣ, ವರ್ತಮಾನ ಮುಖಾಮುಖಿ ಆಗಿವೆ. ಇಡೀ ಕಾದಂಬರಿ ಹೆಣ್ಣುಧ್ವನಿಯಲ್ಲಿ
ಇದೆ. ಅದು ವಿಶೇಷ ಅನುಭೂತಿ ನೀಡುತ್ತಿದೆ. ರಮಿಸಿ, ಸಂತೈಸಿ ಓದುವಂತೆ ಮಾಡುತ್ತದೆ. ಗಂಡಿಗೆ ಹೆಣ್ಣಿನಂತೆಯೇ ಅಂತಃಕರಣವಿದ್ದರೆ ಅದಕ್ಕಿಂತ ಮೇಲಿನ ಸ್ಥಾನದಲ್ಲಿ ಪುರುಷ ನಿಲ್ಲುತ್ತಾನೆ’ ಎಂದರು.

‘ಚಿಕ್ಕಣ್ಣ ಅವರು ಕೃತಿಯಲ್ಲಿ ಎಚ್ಚರಿಕೆಯಿಂದ ಸಾಂಸ್ಕೃತಿಕ ರಾಜಕಾರಣವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಜತೆಗೆ, ಸಮೃದ್ಧ ಭಾಷೆಯೂ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ’ ಎಂದು ವಿಶ್ಲೇಷಿಸಿದರು.

ADVERTISEMENT

‘ವಚನ ಸಾಹಿತಿಗಳು ರಾಮಾಯಾಣ, ಮಹಾಭಾರತವನ್ನು ನಿರ್ಲಕ್ಷ್ಯ ಮಾಡಿಯೇ ಶ್ರೇಷ್ಠ ಸಾಹಿತ್ಯ ರಚಿಸಿದರು. ಈ ಸಾಹಿತ್ಯದಲ್ಲಿ ಎಲ್ಲಿಯೂ ಮಹಾಕೃತಿಗಳ ಸಾಲುಗಳು ಸುಳಿಯುವುದಿಲ್ಲ. ಅದನ್ನು ನಿರ್ಲಕ್ಷ್ಯ ಮಾಡಿಯೇ ಅದ್ಭುತ ಸಾಹಿತ್ಯ ರಚಿಸಿದರು’ ಎಂದು ಪ್ರತಿಪಾದಿಸಿದರು.

‘ಹಳೆಯ ವಿಷಯ ಮರೆತರೆ ಮಾತ್ರ ಹೊಸತು ಸೃಷ್ಟಿಸಲು ಸಾಧ್ಯ. ಹಳಬರು ಮಹಾನ್‌ ಕಾರ್ಯವನ್ನು ಮಾಡಿಲ್ಲ. ಅವರನ್ನು ದಾಟಿ ಬರಬೇಕಿದೆ’ ಎಂದು ಹೇಳಿದರು.

ಕವಿ ಎಚ್‌.ಎಸ್.ಶಿವಪ್ರಕಾಶ ಮಾತನಾಡಿ, ‘ಇದು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವದ ಕಾದಂಬರಿ. ನನಗೆ ಕಾದಂಬರಿ ಓದುವಷ್ಟು ತಾಳ್ಮೆ ಇಲ್ಲ. ಆದರೆ, ಈ ಕೃತಿ ಓದಿಸಿಕೊಂಡು ಹೋಯಿತು. ಕೃತಿಯು ಕಥನ ಶೈಲಿಯಿದೆ. ಕಾದಂಬರಿಯಲ್ಲಿ ಲೇಖಕರು ಗತಕಾಲವನ್ನು ವೈಭವೀಕರಿಸಿದೇ ಕೃತಿ ರಚಿಸಿದ್ದಾರೆ’ ಎಂದು ಹೇಳಿದರು.

ಈ ಕಾದಂಬರಿಯಲ್ಲಿ ಕೆಲವು ಪಾತ್ರಗಳು ಸಂವಾದಿಸುತ್ತವೆ. ಗ್ರಾಮೀಣ ಸಂಸ್ಕೃತಿಯಲ್ಲಿ ಪಾತ್ರಗಳನ್ನು ಕಟ್ಟಿಕೊಡಲಾಗಿದೆ. ನವ್ಯ ಸಾಹಿತ್ಯದಲ್ಲಿ ಕೆಲವು ಕೊರತೆಗಳಿದ್ದವು. ಇತ್ತೀಚೆಗೆ ಆ ಕೊರತೆಯೂ ನೀಗಿದೆ ಎಂದು ಹೇಳಿದರು.

ಕುಲ ಹಾಗೂ ಸ್ಥಳ ಪುರಾಣದ ಅಧ್ಯಯನ ಅಗತ್ಯ. ಈ ಅಧ್ಯಯನವನ್ನು ಸ್ವತಂತ್ರವಾಗಿ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಚಿಂತಕ ಬಂಜಗೆರೆ ಜಯಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯ ಟ್ರಸ್ಟಿ ರಾಮರಾವ್‌, ಕಾರ್ಯದರ್ಶಿ ಪ್ರೊ.ಎಸ್‌.ಎನ್‌.ನಾಗರಾಜ್‌ರೆಡ್ಡಿ, ಪ್ರಕಾಶಕಿ ವಿ.ಎಂ.ಕಲಾವತಿ ಹಾಜರಿದ್ದರು.

ಪುಸ್ತಕ ಪರಿಚಯ
ಕಾದಂಬರಿ: ಪುರಾಣ ಕನ್ಯೆ
ಲೇಖಕ: ಕಾ.ತ.ಚಿಕ್ಕಣ್ಣ
ಪ್ರಕಾಶನ: ರಶ್ಮಿ ಪುಸ್ತಕ
ಪುಟಗಳು: 184
ಬೆಲೆ: ₹ 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.