ADVERTISEMENT

ಭವಿಷ್ಯದಲ್ಲಿ ವಿಜಯನಗರ ಉತ್ತರ ಕರ್ನಾಟಕದ ರಾಜಧಾನಿ: ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 12:18 IST
Last Updated 15 ಡಿಸೆಂಬರ್ 2022, 12:18 IST
   

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಬಂಗ್ಲೆ ಸಮೀಪದ ನಗರದ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ವಿಜಯನಗರ ಜಿಲ್ಲಾ ಬಿಜೆಪಿ ಕಚೇರಿಯ ನಿರ್ಮಾಣ ಕಾರ್ಯಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು.
2,120.58 ಚದರ ಮೀಟರ್‌ ಜಾಗವನ್ನು ಆನಂದ್‌ ಸಿಂಗ್‌ ಅವರು ಬಿಜೆಪಿ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ ಕೊಟ್ಟಿದ್ದಾರೆ. ಸದ್ಯ ಇದರ ಮಾರುಕಟ್ಟೆಯ ಬೆಲೆ ₹12 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.


ಬೆಳಿಗ್ಗೆ 8ಗಂಟೆಯಿಂದ ಅರ್ಚಕರು ಸ್ಥಳದಲ್ಲಿ ಪೂಜಾ ಕೈಂಕರ್ಯ, ಹೋಮ ಹವನ ಮಾಡಿದರು. ಸಚಿವ ಆನಂದ್‌ ಸಿಂಗ್‌ ಅವರು ಸಾಂಕೇತಿಕವಾಗಿ ಶಿಲಾನ್ಯಾಸ ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವರ್ಚುಲ್ ಮೂಲಕ ಕಟ್ಟಡ ನಿರ್ಮಾಣಕ್ಕೆ‌ ಚಾಲನೆ ನೀಡಿದರು.


ಆನಂದ್‌ ಸಿಂಗ್‌ ಮಾತನಾಡಿ, ಇಂದು ಎಲ್ಲರೂ ಹೆಮ್ಮೆ ಪಡುವ ವಿಷಯ. ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಮಾದರಿಯಲ್ಲಿ ಬಿಜೆಪಿ ಕಚೇರಿ ನಿರ್ಮಿಸಲಾಗುವುದು. ಅತಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗುವುದು. ಗುತ್ತಿಗೆದಾರ ಮಹಾಂತರೆಡ್ಡಿ ಅವರಿಗೆ ಕೆಲಸ ವಹಿಸಲಾಗಿದೆ ಎಂದರು.

ADVERTISEMENT


ವಿಜಯನಗರದ ಭೂಮಿ ವಿಶಿಷ್ಟ ಶಕ್ತಿಯಿರುವ ಭೂಮಿ. ಮುಂದಿನ ದಿನಗಳಲ್ಲಿ ವಿಜಯನಗರ ಉತ್ತರ ಕರ್ನಾಟಕದ ರಾಜಧಾನಿ ಆಗುತ್ತದೆ. ಬರುವ ಚುನಾವಣೆಗೆ ಕಚೇರಿ ಕಾರ್ಯ ಸ್ಫೂರ್ತಿಯಾಗಿ ತೆಗೆದುಕೊಂಡು ಮತ್ತೆ ಚುನಾವಣೆಯಲ್ಲಿ ಬಿಜೆಪಿ ಧ್ವಜ ಹಾರಿಸಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.


ವಿಧಾನ ಪರಿಷತ್‌ ಸದಸ್ಯ ಶಶಿಲ್‌ ಜಿ. ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ‌ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್‌. ಆನಂದ್‌, ಸದಸ್ಯ ಜೀವರತ್ನಂ, ಹುಡಾ ಅಧ್ಯಕ್ಷ ಅಶೋಕ ಜೀರೆ, ಹನುಮಂತಪ್ಪ, ಕವಿತಾ ಈಶ್ವರ್ ಸಿಂಗ್, ದೀನಾ ಮಂಜುನಾಥ್, ಶಂಕರ್‌ ಮೇಟಿ, ಸಾಲಿ ಸಿದ್ದಯ್ಯ ಸ್ವಾಮಿ, ಮಧುರಚೆನ್ನ ಶಾಸ್ತ್ರಿ, ಕೃಷ್ಣ ನಾಯ್ಕ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.